ಕಾರವಾರ: ಜೊಯಿಡಾ ತಾಲೂಕಿನ ಉಳವಿ ಚೆನ್ನಬಸವೇಶ್ವರ ಜಾತ್ರಾ (ಉಳವಿ ಜಾತ್ರೆ) ಮಹೋತ್ಸವ ಜ. 28 ರಿಂದ ಫೆ. 8ರವರೆಗೆ ನಡೆಯಲಿದೆ. ಫೆ. 6ರಂದು ಮಹಾರಥೋತ್ಸವ ಜರುಗಲಿದೆ ಎಂದು ಉಳವಿ ಚೆನ್ನಬಸವೇಶ್ವರ ಟ್ರಸ್ಟ್‌ನ ಉಪಾಧ್ಯಕ್ಷ ಸಂಜಯ ಕಿತ್ತೂರು ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ (ಜ.೨೪) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಥೋತ್ಸವದಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ವಿವರ
ಜ. 28ರಂದು ಬೆಳಗ್ಗೆ 7 ಗಂಟೆಗೆ ಷಟಸ್ಥಲ ಧ್ವಜಾರೋಹಣ, ರಾತ್ರಿ 8 ಗಂಟೆಗೆ ರಥಗಳ ಪೂಜೆ, ಸೀಮೆ ಕಟ್ಟುವುದು, ಮಹಾಪೂಜೆ, ಮಂಗಳಾರತಿ. ಜ. 29ರಂದು ಪಲ್ಲಕ್ಕಿ ಉತ್ಸವ, ಜ. 30ರಂದು ಸಂಜೆ ಭೂಮಿ ಪೂಜೆ, ನವ ಧಾನ್ಯ ಹಾಕುವುದು, ಜ. 31 ರಂದು ಹುಂಡಿಗಳ ಪೂಜೆ, ಉತ್ಸವ ಮೂರ್ತಿ ಪ್ರತಿಷ್ಠಾಪನೆ, ಫೆ. 1ರಂದು ಪಲ್ಲಕ್ಕಿ ಉತ್ಸವ, ರಕ್ಷಾ ದೇವಿಯ ಸಣ್ಣ ರಥೋತ್ಸವ, ಫೆ. 2ರಂದು ವೀರಭದ್ರೇಶ್ವರ ಸಣ್ಣ ರಥೋತ್ಸವ, ಫೆ. 3ರಂದು ಎಲ್ಲ ದೇವರ ಸಣ್ಣ ರಥೋತ್ಸವ, ಫೆ. 4ರಂದು ಚತುರ್ದಶಿ, ಫೆ. 5ರಂದು ರಾತ್ರಿ 8 ಗಂಟೆಗೆ ಚೆನ್ನಬಸವೇಶ್ವರರ ರಥಾರೋಹಣ, ಫೆ. 6ರಂದು ಸಂಜೆ 4 ಗಂಟೆಗೆ ಮಹಾರಥೋತ್ಸವ, ಫೆ. 7ರಂದು ಬಯಲು ಕುಸ್ತಿ, ಫೆ. 8ರಂದು ಓಕುಳಿ, ಸಣ್ಣ ರಥೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ | Ramesh Jarkiholi : ಸಂಖ್ಯೆ ಕಡಿಮೆ ಬಂದರೂ ಹೇಗಾದರೂ ಮಾಡಿ ಬಿಜೆಪಿ ಸರ್ಕಾರ ಮಾಡುತ್ತೇವೆ: ಸತೀಶ್ ಜಾರಕಿಹೊಳಿ ಹೇಳಿಕೆ
ಚಕ್ಕಡಿ ತರದಂತೆ ಮನವಿ
ಪ್ರತಿ ವರ್ಷ ಉಳವಿ ಚೆನ್ನಬಸವೇಶ್ವರರ ಜಾತ್ರೆಗೆ ಭಕ್ತರು, ಅದರಲ್ಲೂ ರೈತರು ಚಕ್ಕಡಿ ಗಾಡಿಗಳಲ್ಲಿಯೇ ಆಗಮಿಸಿ ವಾರಗಳ ಕಾಲ ಇಲ್ಲಿಯೇ ಉಳಿದುಕೊಂಡು ದೇವರಿಗೆ ವಿವಿಧ ಸೇವೆ ಸಲ್ಲಿಸುತ್ತಿದ್ದರು. ನೆರೆಯ ಜಿಲ್ಲೆಗಳಾದ ಧಾರವಾಡ ಮತ್ತು ಬೆಳಗಾವಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಚಕ್ಕಡಿ ಗಾಡಿಗಳ ಮೇಲೆ ಜಾತ್ರೆಗೆ ಆಗಮಿಸುವ ವಾಡಿಕೆ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಎದುರಾಗಿರುವುದರಿಂದ, ಜಾನುವಾರುಗಳ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಬಾರಿ ಚಕ್ಕಡಿಗಳಿಗೆ ನಿರ್ಬಂಧ ವಿಧಿಸಿದೆ. ಹೀಗಾಗಿ ದೇವಸ್ಥಾನ ಸಮಿತಿಯ ವತಿಯಿಂದಲೂ ಚಕ್ಕಡಿ ಗಾಡಿ ತರದಂತೆ ಎಲ್ಲ ಕಡೆ ಪ್ರಚಾರ ಮಾಡಲಾಗಿದೆ. ಈಗಾಗಲೇ ಕರಪತ್ರ ವಿತರಣೆ, ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಬೆಳಗಾವಿ, ಧಾರವಾಡ ಜಿಲ್ಲಾಡಳಿತದಿಂದ ಕೂಡ ಪ್ರಕಟಣೆ ಹೊರಡಿಸಲಾಗಿದೆ. ಭಕ್ತರು ಸಹಕಾರ ನೀಡಬೇಕು ಎಂದು ಸಂಘಟಕರು ಕೋರಿದ್ದಾರೆ. ಜತೆಗೆ ಜಾತ್ರೆಯಲ್ಲಿ ಚರ್ಮ ಗಂಟು ರೋಗದ ಕುರಿತಾಗಿ ಅಲ್ಲಿಗೆ ಬರುವ ರೈತರಿಗೆ ಜಾಗೃತಿ ಮೂಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ ಇಲ್ಲ
ಜಾತ್ರೆಯ ಸಂದರ್ಭದಲ್ಲಿ ಪ್ರತಿ ವರ್ಷ ಚೆನ್ನಬಸವ ಪ್ರಶಸ್ತಿಯನ್ನು ನೀಡಲಾಗುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಜಾತ್ರೆಯನ್ನು ಸರಳವಾಗಿ ಮಾಡಲಾಗಿತ್ತು. ಈ ಬಾರಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿರುವುದರಿಂದ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಬೇಕೇ ಬೇಡವೇ ಎನ್ನುವ ಗೊಂದಲವಿತ್ತು. ಕೊನೆಯ ಕ್ಷಣದಲ್ಲಿ ಜಾತ್ರೆ ನಡೆಸಲು ಅನುಮತಿ ಸಿಕ್ಕಿದೆ. ಹೀಗಾಗಿ ಈ ಬಾರಿಯೂ ಚೆನ್ನಬಸವ ಶ್ರೀ ಪ್ರಶಸ್ತಿ ನೀಡುತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Sharada Devi Idol: ಶೃಂಗೇರಿಯಿಂದ ತೀತ್ವಾಲ್‌ನತ್ತ ಹೊರಟಿದ್ದಾಳೆ ʻಕಾಶ್ಮೀರ ಪುರವಾಸಿನಿʼ; ಮಾ. 24ರಂದು ಪ್ರತಿಷ್ಠಾಪನೆ
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ, ಪ್ರಮುಖರಾದ ಶಿವಾನಂದ ಕಿತ್ತೂರ್, ಮಂಜುನಾಥ ಮೊಕಾಶಿ ಉಪಸ್ಥಿತರಿದ್ದರು.