Site icon Vistara News

ಬಸವ ಧರ್ಮದ ಅನುಸಾರ ನಡೆದ ವಿಶಿಷ್ಟ ಕಲ್ಯಾಣ ಮಹೋತ್ಸವ: ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ!

ವಿಶಿಷ್ಟ ಕಲ್ಯಾಣ ಮಹೋತ್ಸವ

ಗದಗ: ಅಲ್ಲಿ ಮದುವೆಯ ಸಂಭ್ರಮವಿತ್ತು. ಆದರೆ ಎಂದಿನ ಸಂಪ್ರದಾಯಗಳಿರಲಿಲ್ಲ! ವರ ವಧುವಿಗೆ ತಾಳಿ ಕಟ್ಟಲಿಲ್ಲ. ವಧು ಸಪ್ತಪದಿಯನ್ನು ತುಳಿಯಲಿಲ್ಲ! ಇಬ್ಬರೂ ಶ್ರೀಗಳ ಸಮ್ಮುಖದಲ್ಲಿಯೇ ವಿವಾಹ ಬಂಧನಕ್ಕೊಳಪಟ್ಟರು. ಆದರೆ ಅವರೇನು ಹೊಸ ಸಂಪ್ರದಾಯ ಹುಟ್ಟು ಹಾಕಲಿಲ್ಲ. ಈಗಿರುವ ಬಸವ ಧರ್ಮದ ಪ್ರಕಾರ ಮದುವೆಯಾಗಿದ್ದರು!

ಇಂದು ಬಹಳ ಅಪರೂಪವಾಗಿರುವ ಮದುವೆ ಇದಾಗಿತ್ತು. ಅವರಿಬ್ಬರು ಬಸವ ಧರ್ಮದ ಅನುಸಾರ ಸತಿ-ಪತಿಗಳಾದರು. ವಧು-ವರರೆಂಬ ಭೇದವಿಲ್ಲದೇ ಇಬ್ಬರೂ ಪರಸ್ಪರ ವಿವಾಹ ಮುದ್ರೆಯನ್ನು ಹಾಕಿಕೊಂಡು ನವ ಜೀವನಕ್ಕೆ ಕಾಲಿಟ್ಟರು.

ವಧು-ವರರಿಬ್ಬರಿಗೂ ತಾಳಿ ಮಾದರಿಯ ವಿವಾಹ ಮುದ್ರೆ

ಈ ಮದುವೆ ನಡೆದಿದ್ದು, ಗದಗ ನಗರದ ನಿವಾಸಿ, ಬಸವ ಧರ್ಮ ಪ್ರತಿಪಾದಕ, ಚಿಂತಕ ಅಶೋಕ ಬರಗುಂಡಿ ಹಾಗೂ ಅನ್ನಪೂರ್ಣ ಅವರ ಪುತ್ರ ಆಕಾಶ್ ಹಾಗೂ ವನಜಾಕ್ಷಿ ಹಾಗೂ ದಯಾನಂದ ಗೌಡರವರ ಪುತ್ರಿ ಸುಷ್ಮಾ ನಡುವೆ.

ಮದುವೆಯ ನಿಶ್ಚಯವಾದಾಗಲೇ ಬಸವ ಧರ್ಮದ ಅನುಸಾರವೇ ವಿವಾಹ ಮಾಡಲು ಗುರು ಹಿರಿಯರು ತೀರ್ಮಾನಿಸಿದ್ದರು. ಅಂತೆಯೇ ಕಳೆದ ಭಾನುವಾರ ಈ ಮದುವೆ ನಡೆದಿದೆ. ಇಷ್ಟಲಿಂಗ ಮುದ್ರೆ ಹೊಂದಿದ ವಿವಾಹ ಮುದ್ರೆ ಧಾರಣೆ, ಸಂವಿಧಾನ ಪ್ರತಿಜ್ಞಾ ವಿಧಿ ಸ್ವೀಕಾರ ಮದುವೆಗೆ ಸಂಬಂಧಿಸಿದ ಆಚರಣೆಯಾದರೆ, ಇದರ ಜತೆಗೆ ಪುಸ್ತಕ ಬಿಡುಗಡೆ ಸೇರಿದಂತೆ ಅನೇಕ ಅರ್ಥ ಪೂರ್ಣ ಕಾರ್ಯಕ್ರಮಗಳೂ ನಡೆದವು.

ಮದುವೆಗೆ ಬಂದವರು ಮಹಾನ್ ಪುರುಷರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಎಂದು ಹಾರೈಸಿದರು.

ಹೆಣ್ಣು ಗಂಡೆಂಬ ಭೇದ ಮರೆತು ಬಸವಣ್ಣವರ ಸಮಾನತೆ ತತ್ವ ಮಾರ್ಗದ ಅನುಗುಣವಾಗಿ ಮದುವೆ ನಡೆದಿದೆ. ಅರಿಶಿನ, ಕೊಂಬು, ವಿಳ್ಯೆದೆಲೆ, ಕಂಕಣದ ಬದಲಿಗೆ ಇಬ್ಬರು ರುದ್ರಾಕ್ಷಿಯನ್ನು ಕಟ್ಟಿಕೊಂಡು ವಿಭೂತಿಯನ್ನು ಧರಿಸಿ ಅಲಂಕರಿಸಿಕೊಂಡಿದ್ದರು. ಈ ವಿಶೇಷ ಮದುವೆಗೆ ಇಳಕಲ್ ಬಿಪಿಎಲ್ ಮಠದ ಗುರು ಮಹಾಂತ ಶ್ರೀಗಳು, ಶಿರುರು ಮಠದ ಡಾ ಬಸವಲಿಂಗ ದೇವರು, ಲಿಂಗಸೂರಿನ ಸಿದ್ದಲಿಂಗ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರು ಆಗಮಿಸಿದ್ದರು.

ಮದುವೆಯ ಮಂಟಪವನ್ನು ಗದುಗಿನ ಸಿದ್ದಲಿಂಗ ಶ್ರೀ, ಕುವೆಂಪು, ಅಂಬೇಡ್ಕರ್, ಡಾ.ಬಸವನಾಳ, ಫಗು ಹಳಕಟ್ಟಿ, ವಿವೇಕಾನಂದ, ಹರ್ಡೇಕರ ಮಂಜಪ್ಪ, ಡಾ. ಎಂ. ಎಂ. ಕಲಬುರ್ಗಿ, ಅಥಣಿಯ ಮುರುಗೇಂದ್ರ ಶಿವಯೋಗಿಗಳು ಸೇರಿದಂತೆ ಹಲವು ಮಹನೀಯರ ಭಾವ ಚಿತ್ರ, ಶುಭಾಶಯದ ನುಡಿಗಟ್ಟುಗಳನ್ನು ಕಟೌಟ್ ಮಾಡಿ ಹಾಕಿ ಅಲಂಕರಿಸಲಾಗಿತ್ತು.

ಪುಸ್ತಕ ಬಿಡುಗಡೆ

ನಾಡಿನ ಹಲವು ಮೂಲೆಗಳಿಂದ ಹರಿದು ಬಂದ ನಾಲ್ಕು ಸಾವಿರಕ್ಕೂ ಅಧಿಕ ಶರಣ ಜೀವಿಗಳಿಗೆ ವಿಶೇಷವಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿದ ಎಲ್ಲರಿಗೂ ಉಡುಗೊರೆಯಾಗಿ ಬಸವಾದಿ ಶರಣರ ವಚನಗಳ ಪುಸ್ತಕ, ಭಾರತದ ಸಂವಿಧಾನ ಪುಸ್ತಕ ನೀಡಲಾಯಿತು.

ಈ ವೇಳೆ ಲಿಂಗಾಯತ ಧರ್ಮ ಗುರು ಬಸವಣ್ಣನವರ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್, ನಾರಾಯಣಗುರು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಆದರ್ಶವನ್ನು ಬಂದವರು ಸ್ಮರಿಸಿದರು. ಮದುವೆಗೆ ಬಂದವರು ಮಹಾನ್ ಪುರುಷರು ಹಾಕಿಕೊಟ್ಟ ಹಾದಿಯಲ್ಲಿ ಸಾಗಿ ಎಂದು ವಧು-ವರರನ್ನು ಹಾರೈಸಿದರು. ಸದ್ಯ ಈ ಮದುವೆ ವಿಡಿಯೋ ಫೋಟೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ| ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ ಮೂರನೇ ಮದುವೆಯಲ್ಲಿ ಮೊದಲ ಗಂಡನ ಕಿರಿಕಿರಿ

Exit mobile version