ನವದೆಹಲಿ: ಪ್ರಸಕ್ತ ವರ್ಷದ ಪವಿತ್ರ ಅಮರನಾಥ ಯಾತ್ರೆ ಇಂದಿನಿಂದ (ಜೂ.30) ಪ್ರಾರಂಭವಾಗಿದೆ. ಮೊದಲ ದಿನ 2750 ಯಾತ್ರಾರ್ಥಿಗಳು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿರುವ ನನ್ವಾನ್ ಬೇಸ್‌ಕ್ಯಾಂಪ್(ಯಾತ್ರೆಗೆ ಹೋಗುವವರು ತಂಗುವ ಸ್ಥಳ) ನಿಂದ ಹೊರಟಿದ್ದು, ಜಿಲ್ಲಾಧಿಕಾರಿ ಪಿಯುಶ್ ಸಿಂಗ್ಲಾ ಚಾಲನೆ ನೀಡಿದ್ದಾರೆ. ಈ ಮೂಲ ಶಿಬಿರದಿಂದ ಅಮರನಾಥ್ ದೇಗುಲಕ್ಕೆ ಮೂರು ದಿನ ಕಾಲ್ನಡಿಗೆಯಲ್ಲಿ ಸಾಗಬೇಕು. ಅಶಕ್ತರಿಗೆ, ನಡೆಯಲು ಸಾಧ್ಯವಾಗದೆ ಇರುವವರಿಗೆ ಕುದುರೆ ಸವಾರಿ, ಪಲ್ಲಕ್ಕಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಈ ಮೂರುದಿನಗಳಲ್ಲಿ ಯಾತ್ರಿಕರು ಮೊದಲ ದಿನದ ರಾತ್ರಿಯನ್ನು ಶೀಶ್‌ನಾಗ್ ಮತ್ತು ಎರಡನೇ ರಾತ್ರಿಯನ್ನು ಪಂಚತಾರಣಿಯಲ್ಲಿ ಕಳೆಯುವರು.
ಒಟ್ಟು 43ದಿನಗಳ ಕಾಲ ನಡೆಯಲಿರುವ ಯಾತ್ರೆಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ಪಿಯುಶ್ ಸಿಂಗ್ಲಾ ತಿಳಿಸಿದ್ದಾರೆ. ಈ ಯಾತ್ರೆಗೆ 13 ವರ್ಷಕ್ಕಿಂತ ಕೆಳಗಿನವರು, 75ವರ್ಷ ಮೇಲ್ಪಟ್ಟವರು, ತುಂಬು ಗರ್ಭಿಣಿಯರಿಗೆ ಅವಕಾಶವಿಲ್ಲ. 2019ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ್ದರಿಂದ ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಅಮರನಾಥ ಯಾತ್ರೆ ರದ್ದುಗೊಳಿಸಲಾಗಿತ್ತು. 2020 ಮತ್ತು 2021ರಲ್ಲಿ ಕೊವಿಡ್ 19 ಕಾರಣದಿಂದ ಸ್ಥಗಿತಗೊಂಡಿತ್ತು. ಮೂರು ವರ್ಷಗಳ ಬಳಿಕ ಈ ಸಲ ಇಂದಿನಿಂದ ಪ್ರಾರಂಭವಾಗಿದ್ದು, ಆಗಸ್ಟ್ 11ಕ್ಕೆ ಕೊನೆಗೊಳ್ಳಲಿದೆ.
ಯಾತ್ರಾರ್ಥಿಗಳ ಬೇಸ್‌ಕ್ಯಾಂಪ್ ಇರುವ ಬಲ್ಟಾಲ್ ಮತ್ತು ಪಹಲ್ಗಾಮ್ ಸೇರಿ, ಅವರು ಸಾಗುವ ಮಾರ್ಗಗಳಲ್ಲೆಲ್ಲ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಲ್ಲಲ್ಲಿ ರಕ್ಷಣಾ ಸಿಬ್ಬಂದಿ ಗುಂಪಾಗಿ ನಿಂತಿರುತ್ತಾರೆ. ಯಾತ್ರಿಕರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಲು, ಮಾರ್ಗದಲ್ಲಿ ಅಡಚಣೆಯಾಗದಂತೆ ನೋಡಿಕೊಳ್ಳಲು ಡ್ರೋನ್ ಕಣ್ಗಾವಲಿನ ಜತೆಗೆ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಕೂಡ ಅಳವಡಿಸಲಾಗಿದೆ. ಹಾಗೆ, ಯಾತ್ರಿಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ತರುವಂತೆ ಹೇಳಲಾಗಿದೆ. ಕೊವಿಡ್ 19 ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್ ಕಾರಣವೇ?