ಕೊಪ್ಪಳ: ರಾಮನಭಂಟ ಹನುಮ ಜನಿಸಿದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ (Anjanadri Hill) ಶುಕ್ರವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಮಧ್ಯೆ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇದೇ ವೇಳೆ ಮುಸ್ಲಿಂ ಕುಟುಂಬವೊಂದು ಹನುಮನ ದರ್ಶನಕ್ಕೆ ಬಂದಿದ್ದು ವಿಶೇಷವಾಗಿತ್ತು.
ಧರ್ಮ ದಂಗಲ್ ನಡೆಯುತ್ತಿರುವ ಈ ಹೊತ್ತಿನಲ್ಲಿ ಧರ್ಮ ಸಹಿಷ್ಣುತೆಗೆ ಅಂಜನಾದ್ರಿ ಬೆಟ್ಟ ಸಾಕ್ಷಿಯಾಯಿತು. ಸಿಂಧನೂರು ತಾಲೂಕಿನ ಗಂಜಹಳ್ಳಿಯಿಂದ ಬಂದಿದ್ದ ಮುಸ್ಲಿಂ ಕುಟುಂಬವೊಂದು 580 ಮೆಟ್ಟಿಲು ಹತ್ತಿ ಆಂಜನೇಯನ ದರ್ಶನ ಮಾಡಿದರು. ಸುಮಾರು 8 ಜನರ ತಂಡ ಆಂಜನೇಯನ ದರ್ಶನಕ್ಕಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಹನುಮನನ್ನು ಕಣ್ತುಂಬಿಕೊಂಡರು.
ವಿದ್ಯಾದಾಸ ಬಾಬಾನ ಹೈಡ್ರಾಮಾ
ಅಂಜನಾದ್ರಿ ಪರ್ವತಕ್ಕೆ ಬಂದಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಅಂಜನಾದ್ರಿಯ ಬೆಟ್ಟದ ಕೆಳಗೆಯೇ ಆಂಜನೇಯನ ಮೂರ್ತಿಗೆ ರಾಜ್ಯಪಾಲರು ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯಪಾಲರು ಆಗಮನಕ್ಕೂ ಮುನ್ನ ಹೈಡ್ರಾಮಾವೇ ನಡೆಯಿತು.
ಈ ಹಿಂದೆ ಅಂಜನಾದ್ರಿಯನ್ನು ನೋಡಿಕೊಳ್ಳುತ್ತಿದ್ದ ವಿದ್ಯಾದಾಸ ಬಾಬಾ, ರಾಜ್ಯಪಾಲರು ಬರುವ ಸ್ಥಳದಲ್ಲಿ ಪೂಜೆ ನಡೆಸುವುದಾಗಿ ಪಟ್ಟು ಹಿಡಿದ ಘಟನೆ ನಡೆಯಿತು. ಈ ವೇಳೆ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಪೊಲೀಸರು ಇದು ಸರ್ಕಾರಿ ಕಾರ್ಯಕ್ರಮ, ಸರ್ಕಾರದಿಂದ ನೇಮಕವಾಗಿರುವ ಅರ್ಚಕರು ವಿಶೇಷ ಪೂಜೆ ಸಲ್ಲಿಸುತ್ತಾರೆ. ರಾದ್ಧಾಂತ ಮಾಡದಂತೆ ಹೇಳಿದ್ದಾರೆ. ಆದರೆ, ಪೂಜೆ ಮಾಡಲು ನ್ಯಾಯಾಲಯ ಆದೇಶ ಮಾಡಿದೆ. ಹೀಗಾಗಿ ನಾನು ಇಲ್ಲಿ ಪೂಜೆ ಸಲ್ಲಿಸುವುದಾಗಿ ವಿದ್ಯಾದಾಸ ಬಾಬಾ ಪಟ್ಟುಹಿಡಿದರು. ಈ ಸಂದರ್ಭದಲ್ಲಿ ವಿದ್ಯಾದಾಸ ಬಾಬಾ ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಲೈಂಗಿಕ ದೌರ್ಜನ್ಯದ ಆರೋಪ
ಈ ಹಿಂದೆ ವಿದ್ಯಾದಾಸ ಬಾಬಾ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಬಳಿಕ ಅಂಜನಾದ್ರಿಯಿಂದ ಹೊರಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ವಿದ್ಯಾದಾಸ ಬಾಬಾ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶುಕ್ರವಾರ ರಾಜ್ಯಪಾಲರು ಬರುತ್ತಿರುವ ವಿಷಯ ತಿಳಿದು, ರಾಜ್ಯಪಾಲರು ಪೂಜೆ ಸಲ್ಲಿಸುವ ಸ್ಥಳದಲ್ಲಿ ಪೂಜೆ ಮಾಡುವುದಾಗಿ ಪಟ್ಟು ಹಿಡಿದಾಗ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ನಿಮಗೆ ಬೆಟ್ಟದ ಮೇಲಿರುವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲು ನ್ಯಾಯಾಲಯ ಆದೇಶವಿದೆ. ಅದರಂತೆ ನೀವು ಬೆಟ್ಟದ ಮೇಲೆ ಪೂಜೆ ಸಲ್ಲಿಸಿ ಎಂದು ಮನವರಿಕೆ ಮಾಡಿದರು. ನ್ಯಾಯಾಲಯದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ ಎಂದು ಗಂಗಾವತಿ ತಹಸೀಲ್ದಾರ್ ಯು.ನಾಗರಾಜ ಹೇಳಿದರು.
ಇದನ್ನೂ ಓದಿ | ರಾಜ್ಯಪಾಲರ ಆಗಮನದ ವೇಳೆ ಪೂಜೆಗೆ ಪಟ್ಟು ಹಿಡಿದ ವಿದ್ಯಾದಾಸ ಬಾಬಾ, ಅಂಜನಾದ್ರಿಯಲ್ಲಿ ಡ್ರಾಮಾ