Site icon Vistara News

Anjanadri Hill: 101 ಕೆಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಹತ್ತಿದ ಹನುಮನ ಭಕ್ತ

This devotee climbed Anjanadri hill carrying a bag of 101 kg jowar

This devotee climbed Anjanadri hill carrying a bag of 101 kg jowar

ಕೊಪ್ಪಳ: ಇಲ್ಲಿನ ಗಂಗಾವತಿ ತಾಲೂಕಿನ ಪ್ರಸಿದ್ಧ ಅಂಜನಾದ್ರಿ ದೇವಸ್ಥಾನಕ್ಕೆ (Anjanadri Hill) ಹನುಮ ಭಕ್ತರೊಬ್ಬರು 101 ಕೆ.ಜಿ ಜೋಳದ ಚೀಲ ಹೊತ್ತು ಅಂಜನಾದ್ರಿ ಬೆಟ್ಟವನ್ನು ಏರಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ರಾಯಪ್ಪ ದಪೇದಾರ್‌ಗೆ (46) ಹನುಮನೆಂದರೆ ಎಲ್ಲಿಲ್ಲದ ಪ್ರೀತಿ. ಜತೆಗೆ ಅಪಾರ ಭಕ್ತಿಯನ್ನೂ ಹೊಂದಿದ್ದಾರೆ.

ಹನಮ ಜನ್ಮಭೂಮಿ ಎಂದೇ ಪ್ರಖ್ಯಾತಿ ಪಡೆದಿರುವ ಅಂಜನಾದ್ರಿ ಬೆಟ್ಟಕ್ಕೆ ರಾಯಪ್ಪನವರು, 101 ಕೆ.ಜಿ ಜೋಳದ ಚೀಲವನ್ನು ಬೆನ್ನಿಗೆ ಹಾಕಿಕೊಂಡು ಮಧ್ಯೆ ಎಲ್ಲೂ ನಿಲ್ಲದೆ 1 ಗಂಟೆ 10 ನಿಮಿಷದಲ್ಲಿ 575 ಮೆಟ್ಟಿಲನ್ನು ಏರಿದ್ದಾರೆ. ಹನುಮಭಕ್ತ ರಾಯಪ್ಪನ ಸಾಹಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಹನುಮ ಸಂಜೀವಿನಿ ಪರ್ವತ ಹೊತ್ತು ತಂದರೆ ಈ ಹನುಮನ ಭಕ್ತ 101 ಕೆ.ಜಿ ಜೋಳದ ಚೀಲವನ್ನು ಹಿಡಿದು ಬೆಟ್ಟ ಹತ್ತಿದ್ದಾರೆ.

ಸಿದ್ದಲಿಂಗ ಸ್ವಾಮೀಜಿ ಕಂಡು ಓಡೋಡಿ ಬಂದ ಹಸು

ತುಮಕೂರು: ಸಿದ್ದಗಂಗಾ ಮಠದ (Siddaganga mutt) ಸಿದ್ದಲಿಂಗ ಶ್ರೀಗಳನ್ನು (Sri Siddalinga Swamiji) ಕಂಡ ಕೂಡಲೇ ಹಸುವೊಂದು ಓಡೋಡಿ ಬಂದಿರುವ ವಿಡಿಯೊವೊಂದು ಈಗ ವೈರಲ್‌ ಆಗಿದೆ. ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗ ಶ್ರೀಗಳು ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಭೇಟಿ ನೀಡಿ ತಮ್ಮ ಕೊಠಡಿಗೆ ಹಿಂದಿರುಗುತ್ತಿದ್ದಾಗ ಈ ವಿಸ್ಮಯ ನಡೆದಿದೆ.

ಸಿದ್ದಲಿಂಗ ಶ್ರೀಗಳು ಗದ್ದುಗೆಯಿಂದ ವಾಪಸಾಗುತ್ತಿದ್ದಾಗ ಅಲ್ಲಿಂದ ಸ್ವಲ್ಪವೇ ದೂರಲ್ಲಿ ಅಡ್ಡಾಡುತ್ತಿದ್ದ ಹಸುವೊಂದು ಸಿದ್ದಲಿಂಗ ಶ್ರೀಗಳನ್ನು ಕಂಡಿದೆ. ಆಗ ಅದಕ್ಕೆ ಅದೇನೆನಿಸಿತೋ ಏನೋ? ಇದ್ದ ಕಡೆಯಿಂದ ಜೋರಾಗಿ ಓಡೋಡಿ ಶ್ರೀಗಳು ಎದುರಿಗೆ ಬಂದು ತಲೆಬಾಗಿ ನಿಂತಿದೆ.

ಇದನ್ನು ಕಂಡ ಶ್ರೀಗಳು ಹಿಂದಿರುಗಿ ಹಸುವಿನ ಮೈ ಸವರುತ್ತಿದ್ದಂತೆ ಅವರ ಬಳಿಯೇ ಕ್ಷಣ ಕಾಲ ಹಾಗೇ ನಿಂತಿದೆ. ಹಸುವೊಂದು ಹೀಗೆ ಶ್ರೀಗಳ ಕಂಡು ಓಡೋಡಿ ಬಂದದ್ದು ಕಂಡು ಮಠಕ್ಕೆ ಬಂದಿದ್ದ ಭಕ್ತಾದಿಗಳು ಅಚ್ಚರಿಗೊಂಡರು. ಮಾತ್ರವಲ್ಲದೆ ಈ ಅಪರೂಪದ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡರು.

ಈ ಹಿಂದೆ ಶಿವಕುಮಾರ ಸ್ವಾಮೀಜಿ ಮಠದಲ್ಲಿ ಓಡಾಡುವಾಗ ನವಿಲುಗಳು ಬರುತ್ತಿದ್ದವು. ಈಗ ಸಿದ್ದಲಿಂಗ ಸ್ವಾಮೀಜಿ ಬಂದರೆ ಹಸುವೊಂದು ಓಡೋಡಿ ಬರುವುದನ್ನು ಭಕ್ತರು ನೆನೆದು ಮೂಕ ವಿಸ್ಮಿತರಾದರು. ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮಠದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಸಿದ್ದಲಿಂಗ ಶ್ರೀಗಳು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿದ್ದಾರೆ.

ಇದನ್ನೂ ಓದಿ: Bhoota kola: ಕಡಬದಲ್ಲಿ ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ

ಶ್ರೀ ಶಿವಕುಮಾರ ಸ್ವಾಮೀಜಿಯವರಂತೆಯೇ ಸರಳತೆಯನ್ನು ಹೊಂದಿರುವ ಸಿದ್ದಲಿಂಗ ಶ್ರೀಗಳ ಬಳಿಗೆ ಈಗ ಹಸುವೊಂದು ಓಡೋಡಿ ಬಂದಿರುವ ವಿಡಿಯೊ ಈಗ ಎಲ್ಲೆಡೆ ಸುದ್ದಿಯಾಗಿದೆ

Exit mobile version