ಮಂಗಳೂರು: ಅನಂತಪುರ ದೇವಸ್ಥಾನದ (Ananthapura Lake Temple) ಕೆರೆಯಲ್ಲಿ ಮತ್ತೊಂದು ಮೊಸಳೆ ಪ್ರತ್ಯಕ್ಷವಾಗಿದೆ. ಹಲವು ವರ್ಷಗಳಿಂದ ಕೆರೆಯಲ್ಲಿದ್ದ ಬಬಿಯಾ ಎಂಬ ಮೊಸಳೆ ಕಳೆದ ವರ್ಷ ಮೃತ ಪಟ್ಟಿತ್ತು. ಇದೀಗ ಮತ್ತೊಂದು ಮೊಸಳೆ ಕಾಣಿಸಿಕೊಂಡಿರುವುದರಿಂದ ಭಕ್ತರಲ್ಲಿ ಸಂತಸ ಮೂಡಿದೆ.
ಕೇರಳದ ಕಾಸರಗೋಡಿನ ಅನಂತಪುರ ದೇವಸ್ಥಾನದ ಕೆರೆಯಲ್ಲಿ ಹಲವು ವರ್ಷಗಳ ಕಾಲ ಮೊಸಳೆ ವಾಸವಾಗಿತ್ತು. ಅದನ್ನು ಸಾಕ್ಷಾತ್ ದೇವರಾಗಿ ಭಕ್ತರು ಭಾವಿಸುತ್ತಿದ್ದರು. ಆದರೆ, ಅದು ಮೃತಪಟ್ಟ ನಂತರ ಕೆರೆಯಲ್ಲಿ ಇನ್ನೊಂದು ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಆಸ್ತಿಕರ ನಂಬಿಕೆ ಮತ್ತಷ್ಟು ಬಲಗೊಂಡಿದೆ. ಕೆಲ ದಿನಗಳ ಹಿಂದೆ ಭಕ್ತರೊಬ್ಬರಿಗೆ ಮೊಸಳೆ ಕಾಣಿಸಿಕೊಂಡಿತ್ತು. ಇದೀಗ ಮೊಸಳೆ ಇರುವುದನ್ನು ದೇವಸ್ಥಾನ ಆಡಳಿತ ಮಂಡಳಿ ಖಚಿತ ಪಡಿಸಿದೆ.
ಇದನ್ನೂ ಓದಿ | Deepavali 2023: ದೀಪಾವಳಿ ಭವಿಷ್ಯ; ಯಾವ ರಾಶಿಗೆ ಯಾವ ಫಲ?
ದೇವರ ಮೊಸಳೆ ಎಂದೇ ಖ್ಯಾತವಾಗಿದ್ದ ‘ಬಬಿಯಾ’ ಹೆಸರಿನ ಮೊಸಳೆ ಕಳೆದ ವರ್ಷ ವೃದ್ಯಾಪ್ಯದ ಕಾರಣದಿಂದ ಮೃತಪಟ್ಟಿತ್ತು. ಆದರೂ ಕ್ಷೇತ್ರದ ಕಾರಣಿಕದ ಬಗ್ಗೆ ಅಪಾರ ನಂಬಿಕೆ ಹೊಂದಿದ್ದ ಭಕ್ತರು, ಮುಂದಿನ ದಿನಗಳಲ್ಲಿ ಮತ್ತೊಂದು ದೇವರ ಮೊಸಳೆ ಇಲ್ಲಿ ಕಾಣಿಸಿಕೊಳ್ಳಲಿದೆ ಎಂಬ ನಂಬಿಕೆಯಲ್ಲಿದ್ದರು. ಆ ನಂಬಿಕೆಯನ್ನು ನಿಜಗೊಳಿಸುವಂತೆ ಮೂರನೇ ‘ಬಬಿಯಾʼ ಪ್ರತ್ಯಕ್ಷವಾಗಿದೆ. ಆದರೆ, ಈಗ ಪ್ರತ್ಯಕ್ಷವಾಗಿರುವ ಮೊಸಳೆ, ಹಿಂದಿನ ಬಬಿಯಾನಂತೆ ದೇವರ ಪುಸಾದವನ್ನು ಸೇವಿಸಿಲ್ಲ ಮತ್ತು ಅರ್ಚಕರು ಕರೆದಾಗ ಸ್ಪಂದಿಸಿಲ್ಲ ಎನ್ನಲಾಗಿದೆ.
ಬ್ರಿಟಿಷರ ಆಡಳಿತದಲ್ಲಿ ಕ್ಷೇತ್ರದ ಮೊಸಳೆಯನ್ನು ಬ್ರಿಟಿಷ್ ಅಧಿಕಾರಿಯೊಬ್ಬ ಗುಂಡಿಟ್ಟು ಸಾಯಿಸಿದ ಘಟನೆ ನಡೆದಿತ್ತು. ಆನಂತರ ಕೆಲವೇ ದಿನಗಳಲ್ಲಿ ಎರಡನೇ ಬಬಿಯಾ ಕಾಣಿಸಿಕೊಂಡಿತ್ತು. ಆ ಮೊಸಳೆ 75 ವರ್ಷಗಳ ಕಾಲ ಪೂಜಿಸಲ್ಪಟ್ಟಿತ್ತು. ಆದರೆ, 2022ರ ಅಕ್ಟೋಬರ್ 9 ರಂದು ಮೃತಪಟ್ಟಿತ್ತು. ಬಬಿಯಾ ಮೃತಪಟ್ಟು ಒಂದು ವರ್ಷ ಒಂದು ತಿಂಗಳ ಬಳಿಕ ಮತ್ತೊಂದು ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಇದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಇದನ್ನೂ ಓದಿ | Ayodhya Deepotsav: ಅಯೋಧ್ಯೆ ತುಂಬ 22 ಲಕ್ಷ ದೀಪಗಳ ಬಿಂಬ; ಫೋಟೊಗಳು ಇಲ್ಲಿವೆ
ಅನಂತಪುರ ಕ್ಷೇತ್ರಕ್ಕೆ ಅನಂತಪದ್ಮನಾಭ ಸ್ವಾಮಿಯ ದರ್ಶನದ ಜತೆಗೆ ಮೊಸಳೆಯ ದರ್ಶನಕ್ಕೂ ದಕ್ಷಿಣ ಭಾರತದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದರು.
ಸಸ್ಯಾಹಾರಿ ಮೊಸಳೆ ಬಬಿಯಾ!
ಮೊಸಳೆ ಎಂದರೆ ಆಕ್ರಮಣಕಾರಿ, ಅಪಾಯಕಾರಿ ಜೀವಿ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ, ಅನಂತಪುರ ಕ್ಷೇತ್ರದ ಕೆರೆಯಲ್ಲಿದ್ದ ಬಬಿಯಾ ಎಂಬ ಮೊಸಳೆ ಶಾಂತಸ್ವರೂಪಿಯಾಗಿತ್ತು. ಅಲ್ಲದೇ ಮಾಂಸಾಹಾರವನ್ನಷ್ಟೇ ಸೇವಿಸುವ ತನ್ನ ಸಹಜ ಗುಣವನ್ನು ತ್ಯಜಿಸಿ ಸಸ್ಯಾಹಾರವನ್ನು ಮಾತ್ರ ಸೇವಿಸುತ್ತಿತ್ತು ಎಂಬುವುದು ವಿಶೇಷವಾಗಿತ್ತು.
ಕೇರಳದ ಗಡಿಭಾಗದ ಕಾಸರಗೋಡು ಜಿಲ್ಲೆಯ ಕುಂಬಳೆಯ ಅನಂತಪುರ ಕ್ಷೇತ್ರದಲ್ಲಿ ಅನಂತಪದ್ಮನಾಭ ದೇಗುಲ ವಿಶಾಲ ಕೆರೆಯ ನಡುವೆ ನಿರ್ಮಾಣವಾಗಿದೆ. ಅಲ್ಲಿದ್ದ ಮೊಸಳೆ ದೇವರ ನೈವೇದ್ಯ ಪ್ರಸಾದವನ್ನು ಮಾತ್ರ ಸ್ವೀಕರಿಸುತ್ತಿತ್ತು ಎನ್ನಲಾಗಿದೆ. ಕಳೆದ ವರ್ಷ ವೃದ್ಯಾಪ್ಯದ ಕಾರಣದಿಂದ ಆ ಮೊಸಳೆ ಮೃತಪಟ್ಟಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ