ದಕ್ಷಿಣ ಭಾರತದಲ್ಲಿ (south india) ಆದಿ ಎಂದೂ ಕರೆಯಲ್ಪಡುವ ಆಷಾಢ ಮಾಸ (Ashada Month) ಶುಭ ಕಾರ್ಯಗಳಿಗೆ ಅತ್ಯಂತ ಅಶುಭ (inauspicious) ಮಾಸವೆಂದು ಪರಿಗಣಿಸಲಾಗಿದೆ. ಇದು ಈಗಿನ ನಂಬಿಕೆಯಲ್ಲ. ಇದಕ್ಕೆ ಸಹಸ್ರಾರು ವರ್ಷಗಳ ಹಿನ್ನೆಲೆಯೇ ಇದೆ. ಈ ಸಂದರ್ಭದಲ್ಲಿ ಕೆಲವೊಂದು ನಂಬಿಕೆ, ವಿಶಿಷ್ಟ ಆಚರಣೆಗಳನ್ನೂ ಮಾಡಲಾಗುತ್ತದೆ.
ಸರಿಸುಮಾರು ಜೂನ್- ಜುಲೈನಲ್ಲಿ ಬರುವ ಆಷಾಢ ಮಾಸದಲ್ಲಿ ಭಾರತದಲ್ಲಿ ಗಾಳಿ ಬೀಸುವ ಕಾಲವಾಗಿದೆ. ಮಳೆಗಾಲ ಆರಂಭದ ಸಮಯ. ಆಕಾಶದಲ್ಲಿ ದಟ್ಟ ಮೋಡಗಳು ಆವರಿಸುತ್ತದೆ. ಖಗೋಳಶಾಸ್ತ್ರದ ಪ್ರಕಾರ ಭೂಮಿಯು ಪೂರ್ವ- ಆಷಾಢ ನಕ್ಷತ್ರಪುಂಜದ ಸಮೀಪದಲ್ಲಿರುತ್ತದೆ. ಆದ್ದರಿಂದ ಈ ತಿಂಗಳಲ್ಲಿ ಪೂರ್ಣ ಚಂದ್ರನು ಆ ನಕ್ಷತ್ರಪುಂಜದಲ್ಲಿ ಕಾಣಿಸಿಕೊಳ್ಳುತ್ತಾನೆ. ಸೂರ್ಯ ಮಿಥುನ ರಾಶಿಯಿಂದ ಕರ್ಕಾಟಕಕ್ಕೆ ದಕ್ಷಿಣದ ಕಡೆಗೆ ಚಲಿಸುತ್ತಾನೆ.
ದಕ್ಷಿಣ ಭಾರತದಲ್ಲಿ ಈ ತಿಂಗಳು ನವವಿವಾಹಿತ ದಂಪತಿಗೆ ಬಹಳ ಭಾವನಾತ್ಮಕ ತಿಂಗಳು. ಯಾಕೆಂದರೆ ವಧು ಮತ್ತು ವರರನ್ನು ಈ ಒಂದು ತಿಂಗಳ ಕಾಲ ಬೇರ್ಪಡಿಸಲಾಗುತ್ತದೆ. ಅನೇಕರು ಇದನ್ನು ಸಂಪ್ರದಾಯದ ಭಾಗವಾಗಿ ಅನುಸರಿಸುತ್ತಾರೆ. ಇದಕ್ಕೆ ನಿರ್ದಿಷ್ಟ ಕಾರಣಗಳು ಇಲ್ಲವಾದರೂ ಸಂಪ್ರದಾಯವಂತೂ ಇಂದಿಗೂ ಆಚರಣೆಯಲ್ಲಿದೆ.
1. ಬೇಸಿಗೆಯಲ್ಲಿ ಮಗುವಿನ ಜನನ
ಆಷಾಢ ಮಾಸದಲ್ಲಿ ನವವಿವಾಹಿತರು ಬೇರ್ಪಡಲು ಮುಖ್ಯ ಕಾರಣ ಈ ಸಮಯದಲ್ಲಿ ಮಹಿಳೆ ಗರ್ಭಿಣಿಯಾದರೆ ದಕ್ಷಿಣ ಭಾರತದಲ್ಲಿ ಬೇಸಿಗೆಯ ಮಧ್ಯದಲ್ಲಿ ಅಂದರೆ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮಗುವಿನ ಜನನವಾಗುತ್ತದೆ. ತಾಯಿ ಮತ್ತು ಮಗು ಇಬ್ಬರಿಗೂ ಇದು ಒಳ್ಳೆಯದಲ್ಲ. ಬೇಸಿಗೆಯಲ್ಲಿ ಮಗುವನ್ನು ನೋಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ ಮತ್ತು ಮಗುವಿಗೆ ತೊಂದರೆಯಾಗುತ್ತದೆ. ಆದ್ದರಿಂದ ನಮ್ಮ ಪೂರ್ವಜರು ನವಜಾತ ಶಿಶುವಿಗೆ ತೊಂದರೆಯಾಗದಂತೆ ವಧು ವರನನ್ನು ಬೇರ್ಪಡಿಸುವ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗುತ್ತದೆ.
2. ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ
ಜುಲೈ ಮತ್ತು ಆಗಸ್ಟ್ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ಈ ಋತುವಿನಲ್ಲಿ ಕೃಷಿಗೆ ಉತ್ತಮವಾದ ಋತುವಾಗಿದೆ. ನದಿ ಮತ್ತು ಸರೋವರಗಳು ನೀರಿನಿಂದ ತುಂಬಿರುತ್ತವೆ. ಜುಲೈ ಮತ್ತು ಆಗಸ್ಟ್ ತಿಂಗಾಲಿನಲ್ಲಿ ಹೊಲಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಈ ತಿಂಗಳುಗಳಲ್ಲಿ ಕುಟುಂಬದ ಪ್ರತಿಯೊಬ್ಬರೂ ಇಡೀ ವರ್ಷ ಉತ್ತಮ ಫಲಿತಾಂಶವನ್ನು ಪಡೆಯಲು ಹೊಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ವಧುವನ್ನು ತನ್ನ ತಂದೆಯ ಮನೆಗೆ ಕಳುಹಿಸಲಾಗುತ್ತದೆ. ಆದ್ದರಿಂದ ಅವಳು ತನ್ನ ಹೆತ್ತವರಿಗೆ ಸಹಾಯ ಮಾಡಬಹುದು ಮತ್ತು ಮದುಮಗನು ಕೃಷಿಯತ್ತ ಗಮನಹರಿಸಬಹುದು. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಇದು ಒಂದು ಯೋಜನೆಯಾಗಿ ನವದಂಪತಿಯನ್ನು ಬೇರ್ಪಡಿಸಲಾಗುತ್ತದೆ ಎನ್ನಲಾಗುತ್ತದೆ.
3. ಆಯುರ್ವೇದ ನಂಬಿಕೆ
ಆಯುರ್ವೇದ ಶಾಸ್ತ್ರದ ಪ್ರಕಾರ ಮಾನ್ಸೂನ್ ಸಮಯದಲ್ಲಿ ಲೈಂಗಿಕತೆಯನ್ನು ನಿಷೇಧಿಸಲಾಗುತ್ತದೆ. ಮಳೆಗಾಲವು ವಿಶ್ರಾಂತಿ ಮತ್ತು ನವ ಯೌವನ ಪಡೆಯುವ ಕಾಲವಾಗಿದೆ. ಈ ತಿಂಗಳಲ್ಲಿ ಲೈಂಗಿಕತೆಯನ್ನು ಅನುಮತಿಸಲಾಗುವುದಿಲ್ಲ. ಮಾನ್ಸೂನ್ ತಿಂಗಳುಗಳನ್ನು ಅತ್ಯಂತ ದುರ್ಬಲ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ಮಳೆ ಸುರಿಯುವುದರಿಂದ ಸುಲಭವಾಗಿ ರೋಗಗಳನ್ನು ಉಂಟುಮಾಡುತ್ತದೆ. ಹಾಗಾಗಿ ಈ ತಿಂಗಳಲ್ಲಿ ಲೈಂಗಿಕತೆಯು ದೋಷಯುಕ್ತ ಸಮಸ್ಯೆಗಳು ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು ಎಂಬುದು ಹಳೆಯವರ ಲೆಕ್ಕಾಚಾರವಾಗಿತ್ತು!
4. ಸಾಂಸ್ಕೃತಿಕ ಮಹತ್ವ
ಆಷಾಢ ತಿಂಗಳು ತಮಿಳಿಗರು ಮತ್ತು ಮಲಯಾಳಿಗಳಲ್ಲಿ ಮಹತ್ವದ್ದಾಗಿದೆ. ಯಾಕೆಂದರೆ ಈ ತಿಂಗಳುಗಳನ್ನು ಅಶುಭವೆಂದು ಪರಿಗಣಿಸುವ ಅವರು ಈ ಸಮಯದಲ್ಲಿ ರಾಮಾಯಣವನ್ನು ಓದುತ್ತಾರೆ ಮತ್ತು ಧ್ಯಾನದಲ್ಲಿ ಹೆಚ್ಚು ತೊಡಗುತ್ತಾರೆ. ಅವರು ತಮ್ಮ ಆರೋಗ್ಯವನ್ನು ಬಲಪಡಿಸಲು ಮತ್ತು ಪ್ರತಿರಕ್ಷಣೆಗಾಗಿ ಔಷಧೀಯ ಆಹಾರ ಮತ್ತು ಪಾನೀಯಗಳನ್ನು ತೆಗೆದುಕೊಳ್ಳುತ್ತಾರೆ.
5. ಮೆಹೆಂದಿಗೆ ಪ್ರಾಮುಖ್ಯತೆ
ಭಾರತದ ಅನೇಕ ಸ್ಥಳಗಳಲ್ಲಿ ಜನರು ಆಷಾಢ ಮಾಸದಲ್ಲಿ ಕೈ ಮತ್ತು ಪಾದಗಳಿಗೆ ಮೆಹೆಂದಿಯನ್ನು ಹಚ್ಚುತಾರೆ. ಹವಾಮಾನ ಬದಲಾವಣೆಗಳ ಪರಿಣಾಮ ದೇಹದ ಮೇಲೆ ಆಗದೇ ಇರಲಿ ಎಂದು ಮೆಹೆಂದಿಯನ್ನು ಕೈಗಳಿಗೆ ಹಚ್ಚಿಕೊಳ್ಳಲಾಗುತ್ತದೆ ಎನ್ನಲಾಗುತ್ತದೆ. ಮೆಹೆಂದಿ ಎಲೆಗಳು ಈ ಸಮಯದಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಇದು ತೀವ್ರವಾದ ಹವಾಮಾನ ಬದಲಾವಣೆಯಿಂದ ಉಂಟಾಗುವ ಸೋಂಕುಗಳನ್ನು ತಡೆಗಟ್ಟುವ ಗುಣಗಳನ್ನು ಹೊಂದಿದೆ.
6. ವ್ರತ, ಪೂಜೆಗೆ ಆದ್ಯತೆ
ಆಷಾಢ ತಿಂಗಳು ಶುಭ ಕಾರ್ಯಕ್ರಮಗಳಿಗೆ ಅಶುಭವಾಗಿದ್ದರೂ ಈ ಸಂದರ್ಭದಲ್ಲಿ ವ್ರತ, ಪೂಜೆಗಳಿಗೆ ಈ ತಿಂಗಳು ಉತ್ತಮ ಎಂದೇ ಭಾವಿಸಲಾಗುತ್ತದೆ. ಹೊರಗೆ ಧಾರಾಕಾರವಾಗಿ ಮಳೆ ಸುರಿಯುವಾಗ ಯಾವುದೇ ಕೆಲಸ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಹೆಚ್ಚಿನವರು ಈ ಸಂದರ್ಭದಲ್ಲಿ ಪೂಜೆ, ವ್ರತಾಚರಣೆಯಲ್ಲಿ ತೊಡಗುತ್ತಾರೆ. ಕೆಲವು ದೇವಾಲಯಗಳಲ್ಲಿ ಈ ಸಂದರ್ಭದಲ್ಲಿ ವಿಶೇಷ ಪೂಜೆ, ಉತ್ಸವಗಳೂ ನಡೆಯುತ್ತವೆ.
7. ಬೇವಿಗೆ ಪ್ರಾಮುಖ್ಯತೆ
ದಕ್ಷಿಣ ಭಾರತದಾದ್ಯಂತ ಆಷಾಢ ಮಾಸದಲ್ಲಿ ಮನೆ ಮತ್ತು ಬೀದಿಗಳಲ್ಲಿ ಅನೇಕ ಬೇವಿನ ಎಲೆಗಳನ್ನು ತೂಗು ಹಾಕುತ್ತಾರೆ. ಕಾರಣ ಈ ಋತುವಿನಲ್ಲಿ ಸಾಮಾನ್ಯವಾಗಿ ರಾಜ್ಯದಾದ್ಯಂತ ಭಾರೀ ಗಾಳಿ ಇರುತ್ತದೆ. ಇದರೊಂದಿಗೆ ಮಳೆಯು ಬರುತ್ತದೆ. ಗಾಳಿ, ಮಳೆಯೂ ಅನೇಕ ಸೋಂಕುಗಳನ್ನು ಹಬ್ಬಿಸುವ ಸಾಧ್ಯತೆ ಇರುತ್ತದೆ. ಇದಕ್ಕಾಗಿ ಜನರು ಬೇವನ್ನು ರಕ್ಷಣೆಯಾಗಿ ಬಳಸುತ್ತಾರೆ. ಬೇವಿನ ಸೊಪ್ಪನ್ನು ಖಾದ್ಯಕ್ಕೆ ಸೇರಿಸುತ್ತಾರೆ. ಇದರಿಂದ ಅನೇಕ ರೋಗಗಳನ್ನು ದೂರವಿಡಬಹುದು ಎನ್ನಲಾಗುತ್ತದೆ.
8. ಆಷಾಢ ಕೊಡುಗೆ
ಸಾಮಾನ್ಯವಾಗಿ ಈ ತಿಂಗಳಲ್ಲಿ ವ್ಯಾಪಾರ ವಹಿವಾಟುಗಳು ಕಡಿಮೆಯಾಗುತ್ತವೆ. ಸಾಮಾನ್ಯವಾಗಿ ಭಾರತದ ದಕ್ಷಿಣ ಭಾಗಗಳಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು, ಮನೆಗಳನ್ನು ಬದಲಾಯಿಸಲು ಅಶುಭ ಮಾಸವೆಂದೇ ಇದನ್ನು ಪರಿಗಣಿಸಲಾಗಿದೆ. ಹೀಗಾಗಿ ಹಲವು ವ್ಯಾಪಾರಿಗಳು ಈ ಸಂದರ್ಭದಲ್ಲಿ ವಿಶೇಷ ಕೊಡುಗೆಗಳನ್ನು ಘೋಷಿಸಲು ಪ್ರಾರಂಭಿಸುತ್ತಾರೆ.
ಇದನ್ನೂ ಓದಿ: Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ
9. ಆಟಿ ಕಷಾಯ ಸೇವನೆ
ಆಷಾಢ ಮಾಸದಲ್ಲಿ ಬರುವ ಅಮಾವಾಸ್ಯೆಯಂದು ಹಾಳೆ ಮರದ ತೊಗಟೆಯನ್ನು ತಂದು ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಓಂ ಕಾಳು ಸೇರಿಸಿ ರಸ ತೆಗೆದು ಒಗ್ಗರಣೆಯನ್ನು ಹಾಕಿ ಕಷಾಯ ಮಾಡಿ ಸೇವಿಸಲಾಗುತ್ತದೆ. ಇದು ಮಳೆಗಾಲದಲ್ಲಿ ಉಂಟಾಗುವ ಅನೇಕ ರೀತಿಯ ಸೋಂಕಿನಿಂದ ನಮ್ಮನ್ನು ರಕ್ಷಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ.