Site icon Vistara News

ಧಾರವಾಡದಲ್ಲಿ ಜ್ಯೋತಿಷ್ಯ ಸಮ್ಮೇಳನ ಯಶಸ್ವಿ; ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ

hubli dharwad astrologer meet

ಧಾರವಾಡ: ಜ್ಯೋತಿಷ್ಯದ ಮಹತ್ವ ತಿಳಿದುಕೊಂಡರೆ ಜೀವನದಲ್ಲಿ ಬರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಧರ್ಮಶಾಸ್ತ್ರಕ್ಕೂ ಜ್ಯೋತಿಷ್ಯಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಧಾರವಾಡ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ ಮುಖ್ಯಾಧ್ಯಾಪಕರ, ನ್ಯಾಯ ಚೂಡಾಮಣಿ ರಾಜೇಶ್ವರ ಶಾಸ್ತ್ರಿಗಳು (Astrology News) ಹೇಳಿದ್ದಾರೆ.

ಅವರು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆ, ಪಂಚಾಂಗ ಸಮಿತಿ ಹಾಗೂ ಕರ್ನಾಟಕ ಜ್ಯೋತಿಷಿಗಳ ಒಕ್ಕೂಟ ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ಜ್ಯೋತಿಷ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಧಾರವಾಡ ಪಂಚಾಂಗ ಇಂದು ಜನಪ್ರಿಯವಾಗಿದೆ. ಇದಕ್ಕೆ ಬ್ರಹ್ಮಶ್ರೀ ವೇಣಿಮಾಧವ ಶಾಸ್ತ್ರಿಗಳು ಹಾಗೂ ಕಳಸ ದತ್ತಾತ್ರೇಯ ಶಾಸ್ತ್ರಿಗಳ ಕೊಡುಗೆ ಅಪಾರ ಎಂದು ಅವರು ಅಭಿಪ್ರಾಯಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ.ಆರ್.ಜೋಶಿ ಮಾತನಾಡಿ, ಜ್ಯೋತಿಷ್ಯಶಾಸ್ತ್ರ ಸಾಗರದಷ್ಟು ವಿಶಾಲವಾದದ್ದು ಸೂರ್ಯ, ಚಂದ್ರ ನಕ್ಷತ್ರಗಳು ಇರುವವರಿಗೆ ಇರುವಂತದ್ದು ಅದಕ್ಕೆ ಅಂತ್ಯವೇ ಇಲ್ಲ. ಆಳವಾದ ಅಧ್ಯಯನದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರತ್ಯಕ್ಷ ಪ್ರಮಾಣವಾದುದು ಜ್ಯೋತಿಷ್ಯ ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಸಂಸ್ಕೃತ ಪಾಠಶಾಲೆ ಅಧ್ಯಕ್ಷ ರಾಜು ಪಾಟೀಲ್ ಕುಲಕರ್ಣಿ ಮಾತನಾಡಿ, ಜ್ಯೋತಿಷಿಗಳು ಕೇವಲ ಭವಿಷ್ಯ ನುಡಿಯುವುದು ಅಷ್ಟೇ ಅಲ್ಲ ಹಿಂದೆಲ್ಲಾ ಅವರು ಮನೋರೋಗತಜ್ಞರಾಗಿಯು ಮನಃಶಾಂತಿಗಾಗಿ ಅನೇಕ ಧಾರ್ಮಿಕ ಕ್ರಮಗಳನ್ನು ಮಾಡಿಸಿ ಸಾರ್ಥಕ ಜೀವನ ನಡೆಸುವಂತೆ ಮಾಡುತ್ತಿದ್ದರು ಎಂದರು.

ವೈಜ್ಞಾನಿಕ ಮನೋಭಾವ ಅಗತ್ಯ

ಜ್ಯೋತಿಷ್ಯ ಸಮ್ಮೇಳನನದಲ್ಲಿ ಎರಡು ಗೋಷ್ಠಿಗಳು ನಡೆದವು. ಎರಡನೇ ಗೋಷ್ಠಿಯಲ್ಲಿ ʻಜ್ಯೋತಿಷ್ಯಶಾಸ್ತ್ರ ಹಾಗೂ ವೈಜ್ಞಾನಿಕ ಚಿಂತನೆʼ ಕುರಿತು ಮಾತನಾಡಿದ ವಿದ್ವಾನ್‌ ನವೀನಶಾಸ್ತ್ರಿ ಪುರಾಣಿಕ, ʻʻಜ್ಯೋತಿಷಿಗಳು ಆಧುನಿಕತೆಗೆ ಹೊಂದಿಕೊಂಡು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕಿದೆ. ಮೂಲ ಪರಂಪರೆಗೆ ಧಕ್ಕೆ ಬಾರದಂತೆ ಬಂದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.

ಸಮ್ಮೇಳನದಲ್ಲಿ ಮಾತನಾಡುತ್ತಿರುವ ವಿದ್ವಾನ್‌ ನವೀನಶಾಸ್ತ್ರಿ ಪುರಾಣಿಕ.

ಕರ್ನಾಟಕ ಜ್ಯೋತಿಷಿಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಶ್ರೀಕಾಂತ ಮಂಗಸೂಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೋಷ್ಠಿಗಳಲ್ಲಿ ʻಗ್ರಹಗಳ ಅವಸ್ಥಾ ಮತ್ತು ಫಲʼ ಕುರಿತು ರಮೇಶಭಟ್ಟ ಜೋಶಿ , ʻಆರೂಢ ಪ್ರಶ್ನಾ ಪದ್ಧತಿʼ ಕುರಿತು ಎಚ್.ಎಸ್.ಸುಂದರರಾಜ, ʻಪಂಚಾಂಗದ ಮಹತ್ವʼ ಕುರಿತು ಸಿ.ಆರ್.ಜೋಶಿ, ʻವೈದ್ಯನಾಥ ವಿರಚಿತ ಜಾತಕ ಪಾರಿಜಾತʼ ಕುರಿತು ಡಾ.ಚಿದಂಬರ ಟಕ್ಕಳಕಿ, ʻಈಶಾನ್ಯದ ಫಲಫಲಗಳುʼ ಕುರಿತು ಸುರೇಶ ಕೊಪ್ಪರ, ʻದ್ವಾದಶ ಭಾವಗಳ ಮಹತ್ವʼ ಕುರಿತು ರಾಮೇಶ್ವರಶಾಸ್ತ್ರಿ ಘೋರ್ಪಡೆ ಉಪನ್ಯಾಸ ನೀಡಿದರು.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ನಂತರ ನಡೆದ ಸಮಾರೋಪದಲ್ಲಿ ಶ್ರೀ ಕ್ಷೇತ್ರ ಶಕಟಪುರ ಮಠದ ಆಸ್ಥಾನ ವಿದ್ವಾಂಸರಾದ ಮಧುಸೂದನ ಶಾಸ್ತ್ರಿ ಹಾಗೂ ವೇ.ಮೂ.ನಾಗೇಶ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇಗ್ನೋದ ನಿರ್ದೇಶಕರಾದ ಐ.ಜಿ.ಇಮ್ರಾಪುರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ಜರುಗಿತು.

ಇದನ್ನೂ ಓದಿ: Adhika Masa 2023 : ಅಧಿಕ ಮಾಸದ ಲೆಕ್ಕಾಚಾರ ಹೇಗೆ? ಮಹತ್ವವೇನು?

ಪಾಠಶಾಲೆಯ ಕಾರ್ಯದರ್ಶಿ ಖ್ಯಾತ ಮನೋರೋಗ ತಜ್ಞ ಡಾ.ಆನಂದ ಹಂದಿಗೋಳ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾದೇವಿ ದೊಡ್ಡಮನಿ ನಿರೂಪಿಸಿದರು. ಕೋವಿದಾ ವಂದಿಸಿದರು. ವೇದ ಮೂರ್ತಿ ಪ್ರಲ್ಹಾದ ಜೋಶಿ, ಬಸವರಾಜ ಕುರುಬೆಟ್, ರಂಗನಾಥ ಜೋಶಿ, ಶ್ರೀಕಾಂತ ಗುಡಿ ಸೇರಿದಂತೆ ಅನೇಕ ಜ್ಯೋತಿಷ್ಯ ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Exit mobile version