ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಮುಂದಿನ ಪರ್ಯಾಯದ ಭಾಗವಾಗಿ ಶುಕ್ರವಾರ ಬಾಳೆ ಮುಹೂರ್ತ ನಡೆಯಿತು. ಪ್ರಸಕ್ತ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಮುಂದಿನ ಸರದಿ ಪುತ್ತಿಗೆ ಮಠದ್ದು. 2024 ಜನವರಿಯಲ್ಲಿ ನಡೆಯುವ ಪುತ್ತಿಗೆ ಮಠದ ಪರ್ಯಾಯಕ್ಕೆ ಬಾಳೆ ಮುಹೂರ್ತ ನಡೆಯಿತು. ವಿದೇಶ ಪ್ರಯಾಣದ ಮೂಲಕ ಸುದ್ದಿಯಾಗಿದ್ದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ನಾಲ್ಕನೇ ಬಾರಿ ಸರ್ವಜ್ಞ ಪೀಠಾರೋಹಣಕ್ಕೆ ಸಿದ್ಧರಾಗಿದ್ದಾರೆ.
2024ರಿಂದ ಪುತ್ತಿಗೆ ಮಠದ ಪರ್ಯಾಯ ಆರಂಭವಾಗಲಿದ್ದು, ಒಂದು ವರ್ಷ ಮುಂಚಿತವಾಗಿ ಈ ಮಹೋತ್ಸವಕ್ಕೆ ಪೂರಕವಾಗಿ ಬಾಳೆ ಮುಹೂರ್ತ ನಡೆಯಿತು. ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು 16 ವರ್ಷಗಳ ನಂತರ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಮುಂದಿನ ಒಂದು ವರ್ಷಗಳ ಕಾಲ ದೇಶದ ನಾನಾ ತೀರ್ಥ ಕ್ಷೇತ್ರಗಳನ್ನು ಅವರು ಸಂದರ್ಶಿಸಲಿದ್ದಾರೆ. ಈ ಬಾರಿಯ ತಮ್ಮ ನಾಲ್ಕನೇ ಪರ್ಯಾಯದಲ್ಲಿ ಚಿನ್ನದ ಪಾರ್ಥ ಸಾರಥಿ ರಥ, ಮಧ್ವ ಮಹಾದ್ವಾರ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.
ಏನಿದು ಬಾಳೆ ಮುಹೂರ್ತ?
ದೇವರ ಪೂಜೆಗೂ, ಬಾಳೆ ಮುಹೂರ್ತಕ್ಕೂ ಏನು ಸಂಬಂಧ ಇರಬಹುದು ಎಂಬ ಕುತೂಹಲ ಮೂಡಬಹುದು. ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯುತ್ತಾರೆ. ಇಲ್ಲಿ ದಿನವೂ ನಡೆಯುವ ಅನ್ನ ದಾಸೋಹಕ್ಕೆ ವಿಶೇಷ ಮಹತ್ವ ಇದೆ. ಬಾಳೆಯ ಗಿಡಗಳನ್ನು ನೆಟ್ಟು ಮುಂದಿನ ವರ್ಷಕ್ಕೆ ಬೇಕಾದ ಬಾಳೆ ಎಲೆಗಳನ್ನು ಸಂಗ್ರಹಿಸುವುದು ಉದ್ದೇಶ.
ಪುತ್ತಿಗೆ ಮಠದಲ್ಲಿ ಪೂಜೆ ಮಾಡಿ, ರಥಬೀದಿಯಲ್ಲಿರುವ ಅನಂತೇಶ್ವರ, ಚಂದ್ರೇಶ್ವರ ದೇವಸ್ಥಾನ ಸಂದರ್ಶಿಸಿ, ಕೃಷ್ಣ ದೇವರಿಗೂ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಮೆರವಣಿಗೆಯಲ್ಲಿ ತೆರಳಿ ಬಾಳೆಯ ಗಿಡಗಳನ್ನು ನೆಡುವುದು ಸಂಪ್ರದಾಯ. ಶುಕ್ರವಾರ ಅಷ್ಟಮಠಗಳ ಪ್ರಮುಖರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಭಗವದ್ಗೀತೆ ಪ್ರಚಾರವು ಪುತ್ತಿ ಮಠದ ಪರ್ಯಾಯದ ಮಹತ್ವಾಕಾಂಕ್ಷಿ ಧಾರ್ಮಿಕ ಯೋಜನೆಯಾಗಿದೆ. ಈಗಾಗಲೇ ಈ ಯೋಜನೆಗೆ ಚಾಲನೆ ದೊರಕಿದ್ದು, ಕೋಟಿ ಗೀತ ಲೇಖನ ಯಜ್ಞ ನಡೆಸುವ ಮೂಲಕ ವಿಶ್ವ ಪರ್ಯಾಯದ ಸಂಕಲ್ಪ ಮಾಡಿದ್ದಾರೆ.
ಒಟ್ಟಾರೆ, ಪುತ್ತಿಗೆ ಶ್ರಿಗಳ ಮೂರನೇ ಪರ್ಯಾಯ ಮಹೋತ್ಸವ ಹಲವು ಕಾರಣದಿಂದ ಗಮನ ಸೆಳೆದಿದೆ. ಮತ್ತೊಂದು ಕಡೆ ವಿದೇಶ ಯಾನ ಮಾಡಿದ್ದರು ಎನ್ನುವ ಕಾರಣಕ್ಕೆ ಕೃಷ್ಣ ದೇವರ ಪೂಜೆಯನ್ನು ಇತರ ಮಠಾಧೀಶರು ನಿರಾಕರಿಸಿದ್ದಾರೆ. ವಿರೋಧದ ಹೊರತಾಗಿಯೂ ಪುತ್ತಿಗೆ ಶ್ರೀಗಳು ಕೃಷ್ಣಪೂಜೆ ನಡೆಸಿದ್ದಾರೆ. ಕೃಷ್ಣ ದೇವರ ವಿಗ್ರಹವನ್ನು ಸ್ಪರ್ಶಿಸಿದ್ದಾರೆ ಅಥವಾ ಇಲ್ಲ ಎನ್ನುವ ಬಗ್ಗೆ ಜಿಜ್ಞಾಸೆಗಳು ಕೇಳಿಬಂದಿತ್ತು. ಈ ಬಾರಿ ಪುತ್ತಿಗೆ ಶ್ರೀಗಳು ಶಿಷ್ಯ ಸ್ವೀಕಾರ ಮಾಡಿದ್ದು, ಈ ಬಾರಿ ಶಿಷ್ಯನ ಜತೆಯಾಗಿ ಪರ್ಯಾಯ ನಡೆಸುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಡುಪಿಗೂ ಬಂದಿದ್ನಾ ಉಗ್ರ ಶಾರಿಕ್; ಕೃಷ್ಣ ಮಠ ಟಾರ್ಗೆಟ್ ಆಗಿತ್ತಾ?