ಬಳ್ಳಾರಿ: ಜಿಲ್ಲೆಯ ಸುಕ್ಷೇತ್ರ ಚೇಳ್ಳಗುರ್ಕಿ ಶ್ರೀ ಎರ‍್ರಿತಾತನವರ ಮಹಾರಥೋತ್ಸವವು ಸಾವಿರಾರು ಭಕ್ತ ಸಮೂಹದ ಮಧ್ಯೆ ಭಕ್ತಿ ಭಾವದಿಂದ ಬುಧವಾರ ಸಂಜೆ ನೆರವೇರಿತು. ರಥಕ್ಕೆ ಭಕ್ತರು ಹೂವು-ಹಣ್ಣು ಸಮರ್ಪಿಸುವ ಮೂಲಕ ಭಕ್ತಿ ಭಾವ ಮೆರೆದರು. ಮಳೆಯ ಮಧ್ಯೆ ರಥೋತ್ಸವವು ಸಂಭ್ರಮದಿಂದ (Ballari News) ಜರುಗಿತು.
ಮಹಾರಥೋತ್ಸವದ ನಂತರ ಹರಕೆ ಹೊತ್ತ ಭಕ್ತರು ಕರ್ಪೂರ ಆರತಿಯೊಂದಿಗೆ ಪ್ರದಕ್ಷಿಣೆ ಮಾಡಿ, ತಮ್ಮ ಹರಕೆ ತೀರಿಸಿದರು. ಮಹಾರಥೋತ್ಸವದ ಅಂಗವಾಗಿ ಶ್ರೀ ಎರ‍್ರಿತಾತನವರ ಮೂರ್ತಿಗೆ ವಿಶೇಷ ಅಲಂಕಾರ ಮತ್ತು ವಿವಿಧ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು.
ಬುಧವಾರ ಬೆಳಿಗ್ಗೆ ಮಹಾರಥೋತ್ಸವದ ಅಂಗವಾಗಿ ಸತತ ಏಳು ದಿನಗಳಿಂದ ಹಗಲಿರುಳು ನಡೆದ ಸಪ್ತಭಜನೆ ಮುಕ್ತಾಯ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ ಎರ‍್ರಿತಾತನವರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉರವಕೊಂಡದ ಗವಿಮಠ ಸಂಸ್ಥಾನದ ಡಾ. ಕರಿಬಸವರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿದರು.
ನಂತರ ಶ್ರೀ ಎರ‍್ರಿಸ್ವಾಮಿ ಜೀವ ಸಮಾಧಿ ಟ್ರಸ್ಟ್‌ನ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಡಾ. ಕರಿಬಸವರಾಜೇಂದ್ರ ಮಹಾಸ್ವಾಮೀಜಿ ಉದ್ಘಾಟಿಸಿ, ರಕ್ತದಾನದ ಮಹತ್ವ ಕುರಿತು ತಿಳಿಸಿಕೊಟ್ಟರು.
ಇದನ್ನೂ ಓದಿ: Munnar Tour: ಮುನ್ನಾರ್‌ನ ಈ 5 ರಮಣೀಯ ಸ್ಥಳಗಳನ್ನು ನೋಡಲೇಬೇಕು!
ಜೂ.13ರಂದು ಗುರುವಾರ ಸಂಜೆ 7 ಗಂಟೆಗೆ ಹೂವಿನ ರಥೋತ್ಸವ, ನಂತರ ಬಾಣೋತ್ಸವ ನಡೆಯಲಿದೆ.