Site icon Vistara News

Banavasi News: ಏ.1 ರಂದು ಬನವಾಸಿಯ ಮಹಾಸ್ಯಂದನ ರಥೋತ್ಸವ; ಭರದಿಂದ ಸಾಗಿದೆ ರಥ ಕಟ್ಟುವ ಕಾರ್ಯ

Mahasyandana Rathotsava Banavasi Madhukeshwara Temple

#image_title

ಸುಧೀರ್ ನಾಯರ್, ಬನವಾಸಿ
ಐತಿಹಾಸಿಕ ಬನವಾಸಿಯ ಮಹಾಸ್ಯಂದನ ರಥೋತ್ಸವ (Mahasyandana Rathotsava) ಏ.1 ಹಾಗೂ ಏ.2 ರಂದು ಸಡಗರದಿಂದ ಜರುಗಲಿದೆ. ಈ ಹಿನ್ನೆಲೆಯಲ್ಲಿ ತೇರು ಕಟ್ಟುವ ಕಾರ್ಯ ಆರಂಭವಾಗಿದೆ.

ಏ.1 ರಂದು ಸಂಜೆ ಗಜ ಯಂತ್ರೋತ್ಸವ (ಹೂವಿನ ತೇರು) ನಡೆಯಲಿದೆ. ಏ.2ರಂದು ಮುಂಜಾನೆ ಶ್ರೀ ಉಮಾ ಮಧುಕೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಗುತ್ತದೆ. ರಾತ್ರಿ 12 ಗಂಟೆ ರಥೋತ್ಸವ ನಡೆಯಲಿದೆ. 416 ವರ್ಷಗಳ ಇತಿಹಾಸ ಹೊಂದಿರುವ ಈ ಮಹಾ ರಥೋತ್ಸವಕ್ಕೆ ರಾಜ್ಯದ ಭಕ್ತರು ಮಾತ್ರವಲ್ಲದೇ ಹೊರ ರಾಜ್ಯದಿಂದಲೂ ಆಗಮಿಸಿ ಸಂಭ್ರಮಿಸುತ್ತಾರೆ.

ಇದನ್ನೂ ಓದಿ: Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು

ಇಂತಹ ಜಾತ್ರೆಯ ಸಮಯ ರಥೋತ್ಸವಕ್ಕೆ ಕಳೆ ನೀಡುವುದು ಸಿಂಗಾರಗೊಂಡ ತೇರು. ವಿವಿಧ ಬಣ್ಣದ ಪತಾಕೆಗಳಿಂದ ಕಂಗೊಳಿಸುವ ತೇರು ಕಟ್ಟುವುದು ಮತ್ತು ಬಿಚ್ಚುವುದು ಒಂದು ಕಲೆ. ತೇರು ಸಿಂಗಾರ ನೋಡಲೆಂದೇ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಭಕ್ತಿ-ಭಾವಗಳ ಐತಿಹಾಸಿಕ ಬನವಾಸಿಯ ಶ್ರೀ ಮಧುಕೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಎಳೆಯುವ ಮಹಾರಥ ಕಟ್ಟುವುದು ಗಮನ ಸೆಳೆಯುತ್ತದೆ. ಇಲ್ಲಿಯ ರಥ ಕಟ್ಟುವ ಗೌಡರ ಕುಟುಂಬ ವಿಶಿಷ್ಟವಾಗಿ ಕಂಡು ಬರುತ್ತದೆ.

ಸಾಂಘಿಕವಾಗಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಒಂದಿನಿತೂ ಚ್ಯುತಿ ಬಾರದಂತೆ ಈ ಕುಟುಂಬವೂ ಮಧುಕೇಶ್ವರ ದೇವರ ರಥ ಕಟ್ಟುವ ಕಾರ್ಯ ನಡೆಸುತ್ತಾ ಬಂದಿದೆ. ಹದಿನೈದು ದಿನಗಳ ಕಾಲ ತಮ್ಮ ನಿತ್ಯ ಕಾಯಕಕ್ಕೆ ರಜೆ ಹಾಕಿ ರಥ ಕಟ್ಟುವ ಕಾಯಕವೂ ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿದೆ.

ದೊಡ್ಡ ವ್ಯಾಸದ ಸುತ್ತಳತೆಯ ಈ ಮಹಾಸ್ಯಂದನ ರಥವನ್ನು ಹೋಳಿ ಹುಣ್ಣಿಮೆ ಆಚರಿಸಿ ರಂಗ ಪಂಚಮಿಯ ದಿವಸ ಗೂಟ ಪೂಜೆ ನೆರವೇರಿಸಿ ರಥ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಅಂದಿನಿಂದ ಈ ಕುಟುಂಬದ ನಾಲ್ಕೈದು ಮಂದಿ ರಥ ನಿರ್ಮಾಣ ಕೆಲಸಕ್ಕೆ ಹಾಜರಾಗುತ್ತಾರೆ. ಮರದಿಂದ ನಿರ್ಮಿತವಾದ ಮಹಾರಥ ತಳ ಭಾಗದಿಂದ ಚಕ್ರ ಸಹಿತ ಸುಭದ್ರವಾಗಿದ್ದು, 25 ಅಡಿ ಎತ್ತರ ಹೊಂದಿದೆ. ಪ್ರತಿ ವರ್ಷ ರಥೋತ್ಸವದ ಸಮಯದಲ್ಲಿ ಮೇಲ್ಭಾಗ ರೀಪುಗಳ ಸಹಿತ ಕತ್ತದ ಹುರಿಯಿಂದ ರಥವನ್ನು ಎತ್ತರಿಸುತ್ತಾ ಹೋಗುತ್ತಾರೆ. 7 ನೆಲೆಗಳನ್ನು ನಿರ್ಮಾಣ ಮಾಡಿ 10 ಅಡಿ ಎತ್ತರದ ಗೋಪುರ, 6 ಅಡಿ ಎತ್ತರದ ಕಳಶ ಇಟ್ಟು ಸುಮಾರು 75 ಅಡಿಗಳಷ್ಟು ಎತ್ತರದ ಮಹಾರಥವನ್ನು ಕಟ್ಟಲಾಗುತ್ತದೆ. ಈ ಮನೆತನದ ಮಹಿಳೆಯರು ಸಹ ರಥದಲ್ಲಿ ಅಳವಡಿಸುವ ಪತಾಕೆ ಸಜ್ಜುಗೊಳಿಸಿ ತಮ್ಮ ಸೇವೆಯನ್ನು ನೀಡುತ್ತಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Google: ಗೂಗಲ್ 1337 ಕೋಟಿ ರೂ. ದಂಡ, 30 ದಿನದಲ್ಲಿ ಪಾವತಿಸಲು ನ್ಯಾಯಮಂಡಳಿ ಆದೇಶ!

ಪಾರಂಪರಿಕವಾಗಿ ರಥ ಕಟ್ಟುವ ಕಾರ್ಯಕ್ಕೆ ಗೌರವ ಸಂಭಾವನೆ, ತೆಂಗಿನ ಕಾಯಿ, ಅಕ್ಕಿ, ಬೆಲ್ಲ ನೀಡಲಾಗುತ್ತದೆ. ರಥೋತ್ಸವದ ಸಂದರ್ಭದಲ್ಲಿ ರಥವನ್ನು ಎಳೆಯುವಾಗ ಮಟ್ಟು ಹಾಕುವ ಜವಾಬ್ದಾರಿಯನ್ನು ಇವರೇ ನಿರ್ವಹಿಸುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಪಾರಂಪರಿಕ ವೈಶಿಷ್ಟ್ಯಗಳ ಸಂಪ್ರದಾಯ ಮುಂದುವರಿಯುತ್ತದೆ ಎಂಬುದಕ್ಕೆ ಇವೆಲ್ಲ ಸಾಕ್ಷಿಯಾಗಿದೆ.

“ನಮ್ಮ ಹಿರಿಯರು ಆರಂಭಿಸಿದ ಈ ರಥ ಕಟ್ಟುವ ಕಾಯಕವನ್ನು ನಾವು ಅವರಿಂದ ಕಲಿತು, ರಥ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ನಾನು ನಮ್ಮ ಮನೆತನದ ಸದಸ್ಯರ ಸಹಕಾರದಿಂದ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕೆಲಸ ಮಾಡುತ್ತಾ ಬಂದಿದ್ದೇನೆ. ರಥ ಕಟ್ಟುವ ಕಾರ್ಯ ನಮ್ಮ ಪಾಲಿನ ಭಾಗ್ಯವಾಗಿದೆ” ಎನ್ನುತ್ತಾರೆ ರಥ ಕಟ್ಟುವ ಗೌಡ್ರು ಮನೆತನದ ಹಿರಿಯ ಸಹೋದರ ಮಧುಕೇಶ್ವರ.

ಇದನ್ನೂ ಓದಿ: IPL 2023: ಪಂತ್​ ಬದಲು ಡೆಲ್ಲಿ ಪಾಳಯ ಸೇರಿದ 20 ವರ್ಷದ ಬಂಗಾಳ ಕ್ರಿಕೆಟಿಗ; ಯಾರಿದು?

“ನಾನು ನಮ್ಮ ಸಹೋದರ ಸುಮಾರು 50 ವರ್ಷಗಳಿಂದ ರಥ ಕಟ್ಟುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಮುಂದೆ ನಮ್ಮ ಮಕ್ಕಳಿಗೂ ಈ ಕಲೆಯನ್ನು ಕಲಿಸಿ ಮುಂದಿನ ಪೀಳಿಗೆಗೂ ಪರಿಚಯಿಸುತ್ತೇವೆ” ಎಂದು ರಥ ಕಟ್ಟುವ ಗೌಡ್ರ ಮನೆತನದ ಕಿರಿಯ ಸಹೋದರ ನರಸಿಂಹ.

Exit mobile version