Site icon Vistara News

Basava Jayanti 2023: ವಿಶ್ವ ಗುರು ಬಸವೇಶ್ವರರ ತತ್ವ ಅಳವಡಿಸಿಕೊಳ್ಳಿ: ಬಿ.ಎಸ್‌. ಯಡಿಯೂರಪ್ಪ

#image_title

ಶಿವಮೊಗ್ಗ/ಬೆಂಗಳೂರು: ಬಸವೇಶ್ವರ ಜಯಂತಿ (Basava Jayanti 2023) ಅಂಗವಾಗಿ ಜಗಜ್ಯೋತಿ ಬಸವೇಶ್ವರರ ಕಾಯಕವೇ ಕೈಲಾಸ, ಸಮಾನತೆಯ ತತ್ವಗಳನ್ನು ಬಿಜೆಪಿ ಅಳವಡಿಸಿಕೊಂಡು ಬಂದಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ತಿಳಿಸಿದ್ದಾರೆ.

ಶಿಕಾರಿಪುರದಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಸವೇಶ್ವರ ಪುತ್ಥಳಿಗೆ ಪುಷ್ಪಾರ್ಚಾನೆ ನೇರವೇರಿಸಿ ಮಾತನಾಡಿದ ಅವರು, ಭಾರತದಾದ್ಯಂತ ಬಸವೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಬಸವೇಶ್ವರರು ಅಳವಡಿಸಿಕೊಂಡಿರುವ ಕಾಯಕವೇ ಕೈಲಾಸ, ಸಮಾನತೆಯ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿ ಸಹ ಅದೇ ಚಿಂತನೆಗಳನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವಂತಹ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಆರ್ಥಿಕವಾಗಿ ದುರ್ಬಲರಾದವರಿಗೆ, ಹೆಚ್ಚಿನ ಕೃಷಿ ಕಾಯಕವನ್ನು ಅವಲಂಬಿಸಿರುವ ವರ್ಗವನ್ನು ಸಾಮಾಜಿಕವಾಗಿ ಆರ್ಥಿಕವಾಗಿ ಮೇಲೆತ್ತಲು, ಮೀಸಲಾತಿ ಪ್ರಮಾಣವನ್ನು ಶೇ. 2ರಷ್ಟು ಹೆಚ್ಚಿಸುವ ಐತಿಹಾಸಿಕ ಕ್ರಮವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಸಾಮಾಜಿಕ ನ್ಯಾಯ ಬಯಸುವವರಿಗೆ ಬಿಜೆಪಿಯೇ ಭರವಸೆಯಾಗಿದೆ. ಆದ್ದರಿಂದ ಜಗಜ್ಯೋತಿ ಬಸವೇಶ್ವರ ಜಯಂತಿ ಸಂದರ್ಭದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿರವರು ಸಹ ಭಾಗವಹಿಸಿದ್ದಾರೆ ಎಂದು ಹೇಳಿದರು.

ವಿಶೇಷವಾದ ಸಂದರ್ಭದಲ್ಲಿ ಶಿಕಾರಿಪುರದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನೋಡುವಂತಹ ಸೌಭಾಗ್ಯ ಸಿಕ್ಕಿದೆ. ಇದಕ್ಕೆ ಕಾರ್ಯಕರ್ತರಿಗೆ, ಬಂಧುಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೆನೆ ಎಂದು ಯಡಿಯೂರಪ್ಪ ಹೇಳಿದರು. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಶಿಕಾರಿಪುರ ತಾಲೂಕು ವೀರಶೈವ ಸಮಾಜದ ಮುಖಂಡರು ಹಾಜರಿದ್ದರು.

ಬಸವೇಶ್ವರ ಪ್ರತಿಮೆಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ

ಬಸವ ಜಯಂತಿ ಹಿನ್ನೆಲೆ ವಿಧಾನಸೌಧ ಮುಂಭಾಗದ ಬಸವೇಶ್ವರ ಪುತ್ಥಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಮಾಡಿದರು. ಬಳಿಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮಿಸಿದರು. ಈ ವೇಳೆ ಸಚಿವ ಆರ್.ಅಶೋಕ್, ಕೋಟಾ ಶ್ರೀನಿವಾಸ್ ಪೂಜಾರಿ, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಭಾಗಿಯಾಗಿದ್ದರು. ಅಲ್ಲಿಂದ ಚಾಲುಕ್ಯ ಸರ್ಕಲ್‌ಗೆ ಆಗಮಿಸಿದ ಸಿಎಂ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಇದೇ ವೇಳೆ ಮಾಜಿ ಸಚಿವೆ ಲೀಲಾದೇವಿ ಆ ಪ್ರಸಾದ್‌ ಸಾಥ್‌ ನೀಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಜನ ಪಾಠ ಕಲಿಸುತ್ತಾರೆ

ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಅವರೊಬ್ಬ ಹಿರಿಯ ನಾಯಕ, ಅವರು ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಎನ್ನುವುದು ತಪ್ಪು. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಬಸವರಾಜ ಬೊಮ್ಮಾಯಿ‌ ಹೇಳಿದರು.

ಮುಂದುವರಿದು, ಬಸವ ಜಯಂತಿಯ ದಿನದಂದು ನಮ್ಮ ಪ್ರಚಾರವನ್ನು ಆರಂಭಿಸುತ್ತಿದ್ದೇವೆ. ಬಸವ ತತ್ವದಡಿ ಆಡಳಿತ ನಡೆಸಿದ್ದೇವೆ. ಅದರ ಮೂಲಕವೇ ಪ್ರಚಾರ ಆರಂಭಿಸುತ್ತೇವೆ. ಸಿದ್ದರಾಮಯ್ಯ ಅವರು ಒಬ್ಬ ಹಿರಿಯ ನಾಯಕರಾಗಿ ಈ ರೀತಿಯ ಹೇಳಿಕೆ ನೀಡಬಾರದಿತ್ತು. ಅವರವರ ಸಮಾಜದ ನಾಯಕರು ಅವರ ಯೋಗ್ಯತೆ, ಕ್ಷಮತೆಯಲ್ಲಿ ಕೆಲಸ ಮಾಡುತ್ತಾರೆ. ಅವರ ಘನತೆಗೆ ಇದು ತಕ್ಕ ಹೇಳಿಕೆ ಅಲ್ಲ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕೊಟ್ಟ ಹೇಳಿಕೆಯ ರೀತಿಯಲ್ಲಿ ಸಿದ್ದರಾಮಯ್ಯ ಈಗ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನತೆ ಇದಕ್ಕೆ ಉತ್ತರ ಕೊಟ್ಟು, ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇದನ್ನೂ ಓದಿ: Basava Jayanti 2023 : ಜಗದ ಜ್ಯೋತಿ, ವಿಶ್ವಗುರು ಶ್ರೀ ಬಸವೇಶ್ವರರು

ಇತ್ತ ವಿಜಯಪುರ ಜಿಲ್ಲೆಯಲ್ಲೂ ಬಸವ ಜಯಂತಿಯ ಸಂಭ್ರಮ ಜೋರಾಗಿತ್ತು. ವಿಜಯಪುರ ನಗರದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಸಾವಿರಾರು ಜನ ಭಾಗಿಯಾಗಿ ನಮಿಸಿದರು. ಬಸವ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿತ್ತು.

Exit mobile version