Site icon Vistara News

Bejjavalli Fair | ಅಯ್ಯಪ್ಪ ಸ್ವಾಮಿ ಸನ್ನಿಧಾನ ಬೆಜ್ಜವಳ್ಳಿ ಜಾತ್ರೆ ಜೋರು; ಮಕರ ಸಂಕ್ರಾಂತಿ ದಿನ ದರ್ಶನ ನೀಡುವ ಗರುಡ

Bejjavalli Fair Ayyappa Swamy Temple

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿ (Bejjavalli Fair) ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಾಜ್ಯದಲ್ಲಿ ಪ್ರಸಿದ್ಧವಾಗಿರುವ ಅಯ್ಯಪ್ಪ ಸ್ವಾಮಿಯ ಕ್ಷೇತ್ರ. ಪ್ರತಿ ವರ್ಷ ಮಕರ ಸಂಕ್ರಾಂತಿಯ ದಿನ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಬೆಜ್ಜವಳ್ಳಿ ಅಯ್ಯಪ್ಪನ ಉತ್ಸವದ ಹಿನ್ನೆಲೆಯಲ್ಲಿ ಅಯ್ಯಪ್ಪನ ಭಕ್ತರ ದಂಡೇ ಬೆಜ್ಜವಳ್ಳಿಯಲ್ಲಿ ಶನಿವಾರ (ಜ.೧೪) ನೆರೆದಿತ್ತು. ವಿಶೇಷವೋ ಅನುಕರಣೆಯೋ ಗೊತ್ತಿಲ್ಲ. ಶಬರಿಮಲೆಯಲ್ಲಿ ನಡೆಯುವ ಪೂಜೆಯ ವಿಧಿ ವಿಧಾನಗಳನ್ನೇ ಇಲ್ಲಿಯೂ ನಡೆಸಲಾಗುತ್ತಿದೆ. ಹೀಗಾಗಿ ಅಯ್ಯಪ್ಪನ ಉತ್ಸವದಲ್ಲಿ ಸಂಪ್ರದಾಯ ಹಾಗೂ ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಇದೇ ಕಾರಣಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಬೆಜ್ಜವಳ್ಳಿಗೆ ಆಗಮಿಸುತ್ತಾರೆ. ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಪಲ್ಲಕ್ಕಿಯಲ್ಲಿ ಸ್ವರ್ಣಖಚಿತ ಅಯ್ಯಪ್ಪ ಸ್ವಾಮಿ ಉತ್ಸವ ಮೂರ್ತಿಯನ್ನು, ತಿರುವಾಭರಣ ಹೊತ್ತ ಪಲ್ಲಕ್ಕಿ, ಮಾಯಾ ಪಲ್ಲಕ್ಕಿ ಸಹಿತ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ಮೆರವಣಿಗೆಯಲ್ಲಿ ವೀರಗಾಸೆ, ಹುಲಿವೇಷ ಕುಣಿತ, ಗೊಂಬೆ ಕುಣಿತ, ತಾಳ ಮದ್ದಳೆ ಮೇಳ ಆಕರ್ಷಿಸಿತು. ಭಕ್ತರು ಪಲ್ಲಕ್ಕಿಯನ್ನು ಮುಟ್ಟಿ ತಮ್ಮ ಮನದಲ್ಲಿ ಹರಕೆ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮೇಲಾಗಿ ಮಾಲೆ ಧರಿಸದೆಯೂ ದರ್ಶನ ಪಡೆಯಬಹುದಾದ್ದರಿಂದ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದ ಜನರು ಕೂಡ ಬೆಜ್ಜವಳ್ಳಿಗೆ ಆಗಮಿಸಿದ್ದು ವಿಶೇಷವಾಗಿತ್ತು.

ಸಂಕ್ರಮಣದ ಅಂಗವಾಗಿ ಅಯ್ಯಪ್ಪನ ಪೂಜೆಯ ವೇಳೆಗೆ ವಿವಿಧ ಆಭರಣಗಳ ಸಮೇತ, ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಯಿತು. ಈ ಸಮಯದಲ್ಲಿ ನಡೆಯುವ ಪಲ್ಲಕ್ಕಿಯ ಉತ್ಸವದ ವೇಳೆ ಆಕಾಶದಲ್ಲಿ ಗರುಡ ಹಾರಾಡುವುದು ಬೆಜ್ಜವಳ್ಳಿಯ ಸ್ಥಳ ವಿಶೇಷ. ಇಷ್ಟೇ ಅಲ್ಲದೇ, ಸ್ವಾಮಿಯೇ, ಪ್ರತ್ಯಕ್ಷ ದರ್ಶನ ಕೊಡುವುದರ ಪ್ರತೀಕ ಎಂದು ದೇವಾಲಯದ ಸುತ್ತಮುತ್ತ ಬಿಂಬಿತವಾಗಿದೆ. ದೇವಾಲಯದಲ್ಲಿ ಪೂಜೆ ನಡೆಯುತ್ತಿರುವ ವೇಳೆಯಲ್ಲಿ, ಗರುಡ ದರ್ಶನವಾಗಿದೆ. ಆಕಾಶದಲ್ಲಿ ಸುತ್ತು ಹೊಡೆದ ಗರುಡ ಕೊನೆಗೆ ಮಾಯವಾಗುತ್ತದೆ. ಅಯ್ಯಪ್ಪ ನ ಭಕ್ತರು ಗರುಡ ದರ್ಶನವನ್ನು ಅಯ್ಯಪ್ಪನ ದರ್ಶನವೆಂದೇ ನಂಬಿ ಘೋಷಣೆಗಳನ್ನು ಕೂಗಿದರು. ಬಳಿಕ ಮಾರ್ಗದರ್ಶಕರ ಹೇಳಿಕೆಯಂತೆ ಅಯ್ಯಪ್ಪ ಆರಾಧನೆಗಳು ನಡೆದವು. ಸಾವಿರಾರು ಅಯ್ಯಪ್ಪ ಭಕ್ತರು ಮಕರ ಸಂಕ್ರಮಣದ ಜಾತ್ರೆಗೆ ಸಾಕ್ಷಿಯಾದರು. ಶ್ರೀ ಡಾ. ವಿಶ್ವ ಸಂತೋಷ ಭಾರತಿ ಶ್ರೀ ನೇತೃತ್ವದಲ್ಲಿ ನಡೆದ ಇಡೀ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ರಕ್ಷಣಾ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಶ್ರೀ ದೇವರಿಗೆ ತುಲಾಭಾರ ಸೇವೆ ಸಲ್ಲಿಸಿ ಕೃತಾರ್ಥರಾದರು.

ಇದನ್ನೂ ಓದಿ | Makara Jyothi 2023 | ಶ್ರೀ ಅಯ್ಯಪ್ಪನ ಸನ್ನಿಧಾನದಲ್ಲಿ ಮಕರ ಜ್ಯೋತಿ ದರ್ಶನ; ಪುನೀತರಾದ ಲಕ್ಷಾಂತರ ಭಕ್ತರು

Exit mobile version