Site icon Vistara News

ಬೆಳ್ತಂಗಡಿ ಕುದ್ಯಾಡಿಯ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಹೊರೆಕಾಣಿಕೆ ಮೆರವಣಿಗೆ-ಪಾದಯಾತ್ರೆ; ಗಮನ ಸೆಳೆದ ನೃತ್ಯ ಭಜನೆ

kodamanithaya Nema

ಬೆಳ್ತಂಗಡಿ: ಕುದ್ಯಾಡಿ ಗ್ರಾಮದ ನವೀಕೃತ ಗರಡಿ (ಕೊಡಮಣಿತ್ತಾಯ ದೈವಸ್ಥಾನ- ಬ್ರಹ್ಮ ಬೈದರ್ಕಳ ಗರಡಿ, ಕುದ್ಯಾಡಿ-ಬರಾಯ)ಯ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವದ ಪ್ರಯುಕ್ತ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಜ.22ರಂದು ನಡೆಯಿತು.

ಕುದ್ಯಾಡಿ, ನಾವರ, ಸುಲ್ಕೇರಿ, ಪಿಲ್ಯ, ಬಡಗಕಾರಂದೂರು, ಸುಲ್ಕೇರಿಮೊಗ್ರು, ಬಳಂಜ ಹಾಗೂ ನಾಲ್ಕೂರು ಗ್ರಾಮಗಳಿಂದ ಬಂದ ಹಸಿರುವಾಣಿ ಹೊರೆಕಾಣಿಕೆಯನ್ನು ಅಳದಂಗಡಿಯ ಶ್ರೀ ಸೋಮನಾಥೇಶ್ವರಿ ದೇವಸ್ಥಾನದಿಂದ ಕುದ್ಯಾಡಿ ಗರಡಿಗೆ ಪಾದಯಾತ್ರೆಯೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಹಾಗೂ ಜಾತ್ರೋತ್ಸವ ಸಮಿತಿಯವರು ಹಾಗೂ ಗ್ರಾಮದ ಪ್ರಮುಖರು ಗರಡಿ ಅಂಗಣದಲ್ಲಿ ಹೊರೆಕಾಣಿಕೆ ಮೆರವಣಿಗೆಯನ್ನು ಸ್ವಾಗತಿಸಿ, ಹೊರೆಕಾಣಿಕೆ ನೀಡಿದ ಗ್ರಾಮಗಳ ಪ್ರತಿನಿಧಿಗಳನ್ನು ಗೌರವಿಸಿದರು.


ಉಗ್ರಾಣ ಮುಹೂರ್ತ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಗುರುವಾಯನಕೆರೆ ಇದರ ಯೋಜನಾಧಿಕಾರಿ ಯಶವಂತ್, ಮೇಲಂತಬೆಟ್ಟು ಶ್ರೀ ಭಗವತಿ ಕ್ಷೇತ್ರದ ಧರ್ಮದರ್ಶಿ ಯೋಗೀಶ್ ಪೂಜಾರಿ ಹಾಗೂ ಪಿಲ್ಯದ ನಾಟಿವೈದ್ಯ ಪಂಡಿತ ಬೇಬಿ ಪೂಜಾರಿ ಉಗ್ರಾಣ ಮುಹೂರ್ತ ನೆರವೇರಿಸಿದರು. ಮೆರವಣಿಗೆಯಲ್ಲಿ ನೃತ್ಯ ಭಜನೆ ನಡೆಸಿಕೊಟ್ಟ ಮಣಿಕಂಠ ಭಜನಾ ಮಂಡಳಿ ಸಾವ್ಯ ಇದರ ಸದಸ್ಯರನ್ನು (ಮಕ್ಕಳನ್ನು) ಗೌರವಿಸಲಾಯಿತು.


ಕುದ್ಯಾಡಿ ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿಗುತ್ತು, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ಕೊರಗಪ್ಪ ಪೂಜಾರಿ ಕೊಡಿಬಾಳೆ, ದೈವದ ಭಂಡಾರದ ಮನೆಯ ಯಜಮಾನ ಲಿಂಗಪ್ಪ ಬಂಗೇರ, ಬೈದರ್ಕಳ ಭಂಡಾರದ ಮನೆಯ ಯಜಮಾನ ಅಚ್ಯುತ ಪೂಜಾರಿ ಕೊಡಿಬಾಳೆಗುತ್ತು. ಗ್ರಾಮದ ಗುರಿಕಾರ ವಾಸು ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Hombuja Jain Matha: ಜ. 22ರಿಂದ 27 ರವರೆಗೆ ಹೊಂಬುಜ ಜೈನ ಮಠದಲ್ಲಿ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ

Exit mobile version