Site icon Vistara News

Bhagavad Gita Abhiyan | ಭಗವದ್ಗೀತೆ ಜ್ಞಾನದ ಗಂಗೆ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

Bhagavad Gita Abhiyan

ದಾವಣಗೆರೆ: ಯುವ ಪೀಳಿಗೆ ಭಗವದ್ಗೀತೆ ಅಧ್ಯಯನ ಮಾಡುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಭಗವದ್ಗೀತೆ ಜ್ಞಾನದ ಗಂಗೆಯಾಗಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಇದರಿಂದ ಸಹಕಾರಿಯಾಗುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು‌.

ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಆದಿ ಸುಬ್ರಹ್ಮಣ್ಯ ದೇವಸ್ಥಾನ ಚಾರಿಟಬಲ್‌ ಟ್ರಸ್ಟ್‌ ಹಾಗೂ ಶ್ರೀ ಭಗವದ್ಗೀತಾ ಅಭಿಯಾನ ಜಿಲ್ಲಾ ಸಮಿತಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು 2007ರಿಂದ ಭಗವದ್ಗೀತಾ ಅಭಿಯಾನ ನಡೆಸಿಕೊಂಡು ಬರುತ್ತಿದ್ದಾರೆ. ಶ್ಲೋಕಗಳ ಪಠಣ, ಗೀತಾ ಪ್ರವಚನ, ಪುಸ್ತಕಗಳ ವಿತರಣೆ, ಗೀತಾ ಪುಸ್ತಕಗಳ ಪ್ರದರ್ಶನ, ಭಗವದ್ಗೀತೆಯ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಮಕ್ಕಳಿಗೆ ಬಾಲ್ಯದಿಂದಲೇ ಗೀತಾ ಜ್ಞಾನ ನೀಡುತ್ತಿದ್ದಾರೆ. ಅವರ ಈ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ | Gita Jayanti 2022 | ಸಾರ್ವಕಾಲಿಕ ಸಾರ್ವಭೌಮ ಗ್ರಂಥ ಭಗವದ್ಗೀತೆ

ಮಹಾಭಾರತ ಯುದ್ಧದ ಆರಂಭದ ಮೊದಲು ಶ್ರೀಕೃಷ್ಣನು ಅರ್ಜುನನಿಗೆ ಜೀವನದಲ್ಲಿ ಕರ್ಮದ ವಿವಿಧ ಅಂಶಗಳನ್ನು ವಿವರಿಸಿದನು ಮತ್ತು ಅವನು ಬೋಧಿಸಿದ ಬೋಧನೆಗಳನ್ನು ಶ್ರೀಮದ್ ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಗೀತೆಯು ಜ್ಞಾನ, ಧರ್ಮ, ಸಂಸ್ಕೃತಿಯಾಗಿದೆ. ಗೀತೆಯು ಶುಭ ಜೀವನದ ಪುಸ್ತಕವಾಗಿದೆ. ಇದು ಒತ್ತಡ ಮುಕ್ತ ಜೀವನವನ್ನು ನಡೆಸುವ ಕಲೆಯನ್ನು ನಮಗೆ ಕಲಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಗೀತಾ ಜ್ಞಾನವು ಮಾನವ ಜೀವನದ ಮಂಗಳಕರ ಮತ್ತು ಕಲ್ಯಾಣದ ಆಧಾರವಾಗಿದೆ, ಅದರ ಸಾರವನ್ನು ಹೀರಿಕೊಳ್ಳುವವನು ದೈವಿಕ ಪ್ರಕಾಶದಿಂದ ತುಂಬುತ್ತಾನೆ ಮತ್ತು ಅವನ ಜೀವನವು ಯಶಸ್ವಿಯಾಗುತ್ತದೆ. ಭಗವದ್ಗೀತೆ ಧರ್ಮದ ಜ್ಞಾನವನ್ನು ನೀಡುತ್ತದೆ. ಜೀವನ ವಿಧಾನ ಹೇಳುತ್ತದೆ. ಗೀತಾ ಬೋಧನೆಗಳನ್ನು ಪಾಲಿಸುವುದರಿಂದ ನಮಗಷ್ಟೇ ಅಲ್ಲ, ಸಮಾಜಕ್ಕೂ ಒಳ್ಳೆಯದನ್ನು ಮಾಡಬಹುದು ಎಂದವರು ಹೇಳಿದರು.

ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿದಬೇಕು. ಪ್ರತಿಯೊಂದು ಮಗು ಭಗವದ್ಗೀತೆ ಓದಿ ಅದರ ಅರ್ಥ ತಿಳಿದುಕೊಂಡರೆ ಸಮಾಜದಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಬಹುದು. ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತಿ ಬೆಳೆಸಲು ಗೀತೆ ಕಲಿಸಬೇಕು. ಭಗವದ್ಗೀತೆಯಲ್ಲಿ ನಿಷ್ಕಾಮ ಕರ್ಮ ಸೂತ್ರ ಅಡಗಿದೆ. ಹಾಗಾಗಿ ಸಾರ್ವಜನಿಕರಲ್ಲೂ ಭಗವದ್ಗೀತೆ ಬಗ್ಗೆ ಜಾಗೃತಿ ಮಾಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀ ತರಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಮಹಾಯೋಗಿ ವೇಮನ ಸಂಸ್ಥಾನ ಮಠದ ಶ್ರೀ ವೇಮನಾನಂದ ಸ್ವಾಮಿಜಿ, ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ತ್ಯಾಗಿಶ್ವರಾನಂದ ಜೀ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಜಿ.ಎಂ. ಸಿದ್ದೇಶ್ವರ್, ಮೇಯರ್ ಜಯಮ್ಮ ಗೋಪಿ ನಾಯ್ಕ್ ಮತ್ತಿತರರು ಇದ್ದರು..

ಇದನ್ನೂ ಓದಿ | Gita Jayanti 2022 | ಭಾರತ ಈಗ ಭಗವದ್ಗೀತೆ ನೀಡಿದ ಸಂದೇಶವನ್ನೇ ಅನುಸರಿಸುತ್ತಿದೆ ಎಂದ ಸಚಿವ ರಾಜನಾಥ್‌ ಸಿಂಗ್‌

Exit mobile version