ಪುರಿ: ಒಡಿಶಾದ ಪುರಿ ಜಗನ್ನಾಥ ಯಾತ್ರೆ ವಿಶ್ವವಿಖ್ಯಾತ. ಜಗನ್ನಾಥ ದೇವರ ವೈಭವದ ಉತ್ಸವ ಇಂದಿನಿಂದ ಪ್ರಾರಂಭವಾಗಿದ್ದು ಜುಲೈ 12ರವರೆಗೆ ನಡೆಯುತ್ತದೆ. ಮೂರು ರಥಗಳ ಮೆರವಣಿಗೆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಅಲ್ಲಿನ ವೈಭವ ಎಷ್ಟು ಕಣ್ಮನಸೆಳೆಯುತ್ತದೆಯೋ, ದೇಗುಲಕ್ಕಿರುವ ವಿಶೇಷತೆಗಳೂ ಅಷ್ಟೇ ಗಮನ ಸೆಳೆಯುತ್ತವೆ. ಪುರಿ ಜಗನ್ನಾಥ ದೇವಳ ಅಚ್ಚರಿಗಳ ಲೋಕ ಎಂದರೂ ತಪ್ಪಾಗಲಾರದು. ಅದರಲ್ಲೊಂದು ಬಹುಮುಖ್ಯವಾಗಿ, ʼದೇವಾಲಯದ ಗೋಪುರದ ಮೇಲ್ಭಾಗದಲ್ಲಿ ಹಕ್ಕಿಗಳಾಗಲೀ, ವಿಮಾನ-ಹೆಲಿಕಾಪ್ಟರ್‌ಗಳಾಗಲಿ ಎಂದಿಗೂ ಹಾರಾಡುವುದಿಲ್ಲʼ ಎಂಬುದು. ಇದೊಂದು ಅಚ್ಚರಿ-ಕುತೂಹಲದ ವಿಷಯ. ದೇವಾಲಯದ ಮೇಲ್ಭಾಗದಲ್ಲಿ ಹಕ್ಕಿಗಳು-ವಿಮಾನಗಳು ಹಾರುವುದಿಲ್ಲ ಎಂದು ಅನೇಕರಿಗೆ ಗೊತ್ತಿದ್ದರೂ, ಅದರ ಹಿಂದಿರುವ ಕಾರಣ ಇಂಥದ್ದೇ ಎಂದು ಸ್ಪಷ್ಟವಾಗಿ ಹೇಳಲು ಇದುವರೆಗೆ ಸಾಧ್ಯವಾಗಿಲ್ಲ. ಹಾಗಿದ್ದಾಗ್ಯೂ ಅದಕ್ಕೆ ಒಂದಷ್ಟು ಕಾರಣಗಳನ್ನು ಉಲ್ಲೇಖಿಸಲಾಗುತ್ತದೆ. ಅದರಲ್ಲಿ ಪೌರಾಣಿಕ ನಂಬಿಕೆಯೂ ಇದೆ, ವೈಜ್ಞಾನಿಕ ಕಾರಣವೂ ಇದೆ.
ಗೋಪುರದ ತುದಿಯಲ್ಲಿರುವ ನೀಲಚಕ್ರ ಕಾರಣ
ಜಗನ್ನಾಥ ದೇವಾಲಯದ ಗೋಪುರದ ತುದಿಯಲ್ಲಿ ಒಂದು ನೀಲಚಕ್ರವಿದೆ. ಅದನ್ನು ಸುದರ್ಶನ ಚಕ್ರ ಎಂದೂ ಕರೆಯಲಾಗುತ್ತದೆ. ಮಹಾವಿಷ್ಣುವಿನ ಕೈಯಲ್ಲಿರುವ ಶಕ್ತಿಶಾಲಿ ಆಯುಧವಾದ ಸುದರ್ಶನ ಚಕ್ರದ ಪ್ರತೀಕವಾಗಿಯೇ ಇದನ್ನು ಗೋಪುರದ ಮೇಲೆ ಅಳವಡಿಸಲಾಗಿದೆ. ಈ ಚಕ್ರವಿದ್ದಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ ಎಂಬುದು ನಂಬಿಕೆ. ಅಂದಹಾಗೇ, ಗೋಪುರದ ಮೇಲಿನ ನೀಲಚಕ್ರವನ್ನು ಎಂಟು ಲೋಹಗಳಾದ ಕಬ್ಬಿಣ, ತಾಮ್ರ, ಸತು, ಪಾದರಸ, ಸೀಸ, ಹಿತ್ತಾಳೆ, ಬೆಳ್ಳಿ ಮತ್ತು ಚಿನ್ನದಿಂದ ತಯಾರಿಸಲಾಗಿದ್ದು, ಅದರ ಗಾತ್ರ 2 ಇಂಚುಗಳು.
ಎಂಟು ಲೋಹಗಳುಳ್ಳ ದಪ್ಪವಾದ ಈ ನೀಲಚಕ್ರ ಗೋಪುರದ ಆಸುಪಾಸಿನಲ್ಲಿ ವೈರ್‌ಲೆಸ್ ಕಮ್ಯೂನಿಕೇಶನ್ (ನಿಸ್ತಂತು ಸಂಪರ್ಕ)ನ್ನು ಕಡಿತಗೊಳಿಸುತ್ತದೆ. ಅಂದರೆ ಮೇಲ್ಭಾಗದಲ್ಲಿ ಇಂಟರ್‌ನೆಟ್‌ಗೆ ತಡೆಯೊಡ್ಡುತ್ತದೆ. ಆದರೆ ವಿಮಾನ-ಹೆಲಿಕಾಪ್ಟರ್‌ಗಳಿಗೆ ನಿಸ್ತಂತು ಸಂಪರ್ಕ (Wireless Communications) ಅತ್ಯಂತ ಮುಖ್ಯ. ಅದು ಸ್ವಲ್ಪ ಹೊತ್ತುಗಳ ಕಾಲದ ಕಡಿತಗೊಂಡರೂ ವಿಮಾನ ಮತ್ತು ಏರ್ ಕಂಟ್ರೋಲ್ ರೂಂಗಳ ಸಂಪರ್ಕ ತಪ್ಪುತ್ತದೆ. ಇದರಿಂದ ಅಪಾಯ ಎದುರಾಗಬಹುದು. ಹಾರಾಟ ನಡೆಸುತ್ತಿರುವ ವಿಮಾನವನ್ನು ಟ್ರ್ಯಾಕ್ ಮಾಡುವುದೂ ಕಷ್ಟವಾಗುತ್ತದೆ. ಇದೇ ಕಾರಣಕ್ಕಾಗಿ ದೇಗುಲದ ಮೇಲ್ಭಾಗದಲ್ಲಿ ವಿಮಾನ-ಹೆಲಿಕಾಪ್ಟರ್‌ಗಳು ಹಾರಾಟ ನಡೆಸುವುದಿಲ್ಲ ಮತ್ತು ಅಲ್ಯಾವುದೇ ವಾಯುಮಾರ್ಗ ಇಲ್ಲ ಎಂದು ಹೇಳಲಾಗಿದೆ.
ಹಕ್ಕಿಗಳೇಕೆ ಹಾರುವುದಿಲ್ಲ
ನೀಲಚಕ್ರವಿದ್ದರೆ ಹಕ್ಕಿಗಳ ಹಾರಾಟಕ್ಕೇನು ತೊಂದರೆ ಎಂಬ ಪ್ರಶ್ನೆ ಉದ್ಭವ ಆಗಬಹುದು? ಖಂಡಿತವಾಗಿಯೂ ಈ ನೀಲಚಕ್ರಕ್ಕೂ-ಹಕ್ಕಿಗಳ ಹಾರಾಟಕ್ಕೂ ಸಂಬಂಧವಿಲ್ಲ. ಹಕ್ಕಿಗಳು ಹಾರಾಡದೆ ಇರಲು ಇಲ್ಲಿ ಬೀಸುವ ಅತಿಯಾದ ಗಾಳಿಯೇ ಕಾರಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಜಗನ್ನಾಥ ದೇವಸ್ಥಾನ ಇರುವುದು ಒಡಿಶಾದ ಕರಾವಳಿ ಪ್ರದೇಶದಲ್ಲಿ. ಸಾಗರ ತೀರದಲ್ಲಿ ಸಾಮಾನ್ಯವಾಗಿ ಗಾಳಿಯ ತೀವ್ರತೆ ಹೆಚ್ಚಾಗಿರುತ್ತದೆ. ಅದರಲ್ಲೂ ಜಗನ್ನಾಥ ದೇಗುಲದ ಗೋಪುರ 1000 ಅಡಿ ಎತ್ತರವಿದ್ದು, ಅದರ ಮೇಲ್ಭಾಗಲ್ಲಿ ಯಾವಾಗಲೂ ಗಾಳಿ ಜೋರಾಗಿ ಬೀಸುತ್ತಿರುತ್ತದೆ. ಹೀಗೆ ಗಾಳಿ ತುಂಬ ಇದ್ದಲ್ಲಿ ಹಕ್ಕಿಗಳು ಎಂದಿಗೂ ಹಾರಾಟ ನಡೆಸುವುದಿಲ್ಲ.
ಪೌರಾಣಿಕ ನಂಬಿಕೆಯೇನು?
ಭಗವಾನ್ ಜಗನ್ನಾಥ ವಿಷ್ಣುವಿನ ಒಂದು ಅವತಾರ. ವಿಷ್ಣುವಿನ ವಾಹನ ಗರುಡ ಪಕ್ಷಿಯಾಗಿದ್ದು ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ಈ ಪಕ್ಷಿಯೂ ಪೂಜಾರ್ಹ ಎಂದು ಋಗ್ವೇದದಲ್ಲಿ ಉಲ್ಲೇಖ ಮಾಡಲಾಗಿದೆ. ಹೀಗಾಗಿ ಜಗನ್ನಾಥ ದೇವಸ್ಥಾನದ ಗೋಪುರದ ಸುತ್ತಲೂ ಒಂದಿಲ್ಲೊಂದು ಗರುಡ ಪಕ್ಷಿ ಹಾರಾಡುತ್ತ, ದೇವಸ್ಥಾನವನ್ನು ಕಾಯುತ್ತಿರುತ್ತದೆ ಎಂಬ ನಂಬಿಕೆ ಅನಾದಿಕಾಲದಿಂದಲೂ ಇದೆ. ಗರುಡ ಪಕ್ಷಿಗೆ ಚಿಕ್ಕಪುಟ್ಟ ಹಕ್ಕಿಗಳು ಹೆದರುತ್ತವೆ. ಹೀಗಾಗಿ ಅದಿದ್ದಲ್ಲಿ ಸಣ್ಣ ಹಕ್ಕಿಗಳು ಬರುವುದಿಲ್ಲ ಎಂದೂ ಹೇಳಲಾಗುತ್ತದೆ.
ಇದನ್ನೂ ಓದಿ: Jagannath Rath Yatra 2022 | ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಶುರು