Site icon Vistara News

ಮಂಗಳೂರು | ನೂರರ ಸಂಭ್ರಮದಲ್ಲಿ ರಥಬೀದಿ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದೆ

mangalore sharada mahotsav

ಮಂಗಳೂರು: ಮಂಗಳೂರಿನ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದೆಗೆ ಇದೀಗ ನೂರರ ಸಂಭ್ರಮ. 1922 ರಲ್ಲಿ ಆರಂಭಗೊಂಡಿದ್ದ ಇಲ್ಲಿನ ಶಾರದೋತ್ಸವದ ನೂರರ ಸಂಭ್ರಮಕ್ಕೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.

ಪ್ರತಿ ವರ್ಷ ಶಾರದೆಗೆ 2 ಲಕ್ಷ ಮೌಲ್ಯದ ಬೆಳ್ಳಿಯ ಜರಿಯನ್ನು ಹೊಂದಿದ್ದ ಬನಾರಸ್ ಸೀರೆಯನ್ನು ತೊಡಿಸಲಾಗುತ್ತಿತ್ತು. ಆದರೆ ನೂರರ ಸಂಭ್ರಮದಲ್ಲಿರುವ ಶಾರದೆಗೆ ಈ ಬಾರಿ ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯುಳ್ಳ ಸೀರೆಯನ್ನು ತೊಡಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸೀರೆಯನ್ನು ವಾರಣಾಸಿಯ ಜ್ನಾನವಾಪಿ ಮಸೀದಿ ಸಮೀಪ ನೆಲೆಸಿರುವ ಮುಸ್ಲಿಂ ಕುಟುಂಬವೊಂದು ಸಿದ್ಧ ಪಡಿಸಿದೆ.

ಆಚಾರ್ಯ ಮಠದ ಶಾರದೆ

ಬಂಗಾರದ ಜರಿಯನ್ನು ಹೊಂದಿರುವ ಹಸಿರು ಬಣ್ಣದ ಸೀರೆ ಈಗಾಗಲೆ ಮಂಗಳೂರು ತಲುಪಿದ್ದು ಭಾನುವಾರ ಅದ್ಧೂರಿಯಾಗಿ ಮೆರವಣಿಗೆ ಮೂಲಕ ವೆಂಕಟರಮಣ ದೇವಸ್ಥಾನಕ್ಕೆ ತರಲಾಗುತ್ತದೆ. ಇದಿಷ್ಟೇ ಅಲ್ಲದೆ ನೂರರ ಸಂಭ್ರಮವನ್ನು ಹತ್ತು ದಿನಗಳ ಕಾಲ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದು, ಪ್ರತಿ ದಿನ ದೇವಿಗೆ ಒಂದೊಂದು ಅವತಾರದ ಅಲಂಕಾರ ಮಾಡಲು ತೀರ್ಮಾನಿಸಲಾಗಿದೆ.

8 ಲಕ್ಷ ರೂ. ಮೌಲ್ಯದ ಚಿನ್ನದ ಜರಿಯುಳ್ಳ ಸೀರೆ

ಹೀಗಾಗಿ ಭಕ್ತರು ಕಾಣಿಕೆಯಾಗಿ ನೀಡಿರುವ 200 ಕೆಜಿ ಚಿನ್ನದಿಂದ ತಯಾರಿಸಿದ ಚಿನ್ನದ ವೀಣೆ, ಚಿನ್ನದ ನವಿಲು, ಚಿನ್ನದ ಆರತಿ, ಹಾಗೂ ಚಿನ್ನದ ಇತರ ಆಭರಣಗಳನ್ನು ಸಮರ್ಪಿಸಲಾಗುತ್ತಿದೆ.

ಚಿನ್ನದ ನವಿಲು, ಚಿನ್ನದ ಆರತಿ

ಹತ್ತು ಲಕ್ಷ ವೆಚ್ಚದಲ್ಲಿ ಬೆಳ್ಳಿಯ ಪೀಠ ಹಾಗೂ ಪ್ರಭಾವಳಿಯೂ ಸಮರ್ಪಣೆಯಾಗಲಿದೆ. ಈಗಾಗಲೆ ರಥಬೀದಿಯಲ್ಲಿ ಶಾರದಾ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಭಾನುವಾರ ನಗರದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಶಾರದೆಯ ಆಭರಣ ಹಾಗೂ ಸೀರೆಯನ್ನು ವೆಂಕಟರಮಣ ದೇವಸ್ಥಾನಕ್ಕೆ ತಂದು ಸೋಮವಾರದಂದು ಶಾರದೆಯನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಣೈ ತಿಳಿಸಿದ್ದಾರೆ.

ಇದನ್ನೂ ಓದಿ | Dasara Shopping Trend | ಮಾರುಕಟ್ಟೆಗೆ ಲಗ್ಗೆ ಇಟ್ಟ ಟ್ರೆಂಡಿ ದಸರಾ ಗೊಂಬೆಗಳು

Exit mobile version