Site icon Vistara News

ಆಷಾಢದಲ್ಲಿ ದೂರುವಿರುವ ನವಜೋಡಿಗಾಗಿಯೇ ನಡೆಯುತ್ತೆ ಈ ವಿಶೇಷ ಜಾತ್ರೆ!

ಆಷಾಢ

ಚಾಮರಾಜನಗರ: ಆಷಾಢ ಮಾಸದಲ್ಲಿ ನವ ವಿವಾಹಿತರು ಒಂದು ತಿಂಗಳುಗಳ ಕಾಲ ಪರಸ್ಪರ ದೂರ ಇರುವುದು ಸಂಪ್ರದಾಯ. ಆಷಾಢ ಪ್ರಾರಂಭವಾಗುವುದಕ್ಕಿಂತ ಮೊದಲೇ ನವ ವಿವಾಹಿತೆ ಗಂಡನ ಮನೆಯಿಂದ ತವರು ಮನೆ ಸೇರುತ್ತಾಳೆ. ಈ ಒಂದು ತಿಂಗಳು ಪತಿ ಹೆಂಡತಿ ಮನೆಗೆ ಬರುವಂತಿಲ್ಲ. ಹೀಗೆ ದೂರವಿರುವ ನವ ವಿವಾಹಿತರಿಗೆ ಪರಸ್ಪರ ಭೇಟಿಯಾಗಲು ಅವಕಾಶ ನೀಡಲೆಂದೇ ಒಂದು ಜಾತ್ರೆ ನಡೆಯುತ್ತದೆ. ಅದು ಚಾಮರಾಜೇಶ್ವರ ಜಾತ್ರೆ!

ಆಷಾಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಜಾತ್ರೆ ನೆಪದಲ್ಲಿ ನವವಿವಾಹಿತರು ಒಂದೆಡೆ ಸೇರಿ ಹಬ್ಬವನ್ನು ಆಚರಿಸುತ್ತಾರೆ. ಜಾತ್ರೆಯಲ್ಲಿ ಜೋಡಿಯಾಗಿ ಓಡಾಡಿ, ರಥಕ್ಕೆ ಹಣ್ಣು ದವನ ಎಸೆದು ಹರಕೆ ತೀರಿಸುತ್ತಾರೆ.

ನವಜೋಡಿಗಳ ಜಾತ್ರೆ ಸಂಭ್ರಮ

ಜಾತ್ರೆಯಲ್ಲಿ ಕಣ್ಣಾಯಿಸಿದ ಕಡೆಯೆಲ್ಲಾ ನವದಂಪತಿಗಳೇ ಕಂಡು ಬಂದರು. ಕೈ ಕೈ ಹಿಡಿದು ಸುತ್ತಾಡುವ ಚಿತ್ರಣ ಸಾಮಾನ್ಯವಾಗಿತ್ತು. ಸಂಭ್ರಮದ ಜಾತ್ರೆಯಲ್ಲಿ ನವವಿವಾಹಿತರು ಕಂಡಿದ್ದನ್ನೆಲ್ಲ ಕೊಂಡು ಸಂತಸಪಟ್ಟರು.

ಚಾಮರಾಜೇಶ್ವರ ರಥೋತ್ಸವವು ನವದಂಪತಿಗಳ ಜಾತ್ರೆ ಎಂದೇ ಪ್ರಸಿದ್ದಿ ಪಡೆದಿದೆ. ಗಡಿಜಿಲ್ಲೆ ಚಾಮರಾಜನಗರದಲ್ಲಿ ಬುಧವಾರ ಐದು ವರ್ಷಗಳ ಬಳಿಕ ಶ್ರೀ ಚಾಮರಾಜೇಶ್ವರ ರಥೋತ್ಸವ ನಡೆಸಲಾಯಿತು. ರಥೋತ್ಸವಕ್ಕೆ ಮೈಸೂರು ರಾಜವಂಶಸ್ಥ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ರು ಚಾಲನೆ ನೀಡಿದರು. ಇದಕ್ಕೂ ಮೊದಲು‌ ಚಾಮರಾಜೇಶ್ವರ ದೇವರಿಗೆ ರಾಜವಂಶದ ಕಡೆಯಿಂದ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ | ಆಷಾಢ ಮಾಸದ ಮೊದಲ ಶುಕ್ರವಾರ; ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರ

ಹೊಸ ರಥ ಹೆಚ್ಚಿಸಿದ ಸಂಭ್ರಮ

2017ರಲ್ಲಿ ಕಿಡಿಗೇಡಿಯೊಬ್ಬ ಹಚ್ಚಿದ ಬೆಂಕಿಗೆ ಚಾಮರಾಜೇಶ್ವರನ ರಥ ಸುಟ್ಟು ಭಸ್ಮವಾಗಿತ್ತು. ಹೀಗಾಗಿ ಕಳೆದ ಐದು ವರ್ಷಗಳಿಂದ ಈ ರಥೋತ್ಸವ ನಡೆದಿರಲಿಲ್ಲ. ಈಗ 1.20 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ರಥ ನಿರ್ಮಿಸಲಾಗಿದ್ದು, ಆಷಾಡ ಮಾಸದ ಪೂರ್ಣಿಮೆಯ ದಿನದಂದು ಪೂರ್ವಾಷಾಢ ನಕ್ಷತ್ರದಲ್ಲಿ ಚಾಮರಾಜೇಶ್ವರನ ರಥೋತ್ಸವ ಅದ್ಧೂರಿಯಾಗಿ ಜರುಗಿದೆ.

ಹೊಸ ರಥ ಆಕರ್ಷಕವಾಗಿದ್ದು, ವೀರಭದ್ರೇಶ್ವರಸ್ವಾಮಿ, ದಕ್ಷಿಣಾಮೂರ್ತಿ, ಅಘೋರ, ಅಷ್ಟದಿಕ್ಪಾಲಕರು ಸೇರಿದಂತೆ ೧೮೦ ದೇವರ ಚಿತ್ರ ಕೆತ್ತಲಾಗಿದೆ. ೧೮೫೭ ರಿಂದ ಇಲ್ಲಿ ರಥೋತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಆಷಾಢ ಮಾಸದಲ್ಲಿ ಬರುವ ಪೂರ್ವಾಷಾಢ ನಕ್ಷತ್ರ ಚಾಮರಾಜ ಒಡೆಯರ್‌ ಅವರ ಜನ್ಮ ನಕ್ಷತ್ರವಾಗಿರುವುದರಿಂದ ಅಂದೇ ರಥೋತ್ಸವ ನಡೆಸಿಕೊಂಡು ಬರಲಾಗಿದೆ.

ಇದನ್ನೂ ಓದಿ | ಭದ್ರಾವತಿ: 24 ವರ್ಷಗಳ ನಂತರ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ

Exit mobile version