ಚಾಮರಾಜನಗರ: ಸುಬ್ರಹ್ಮಣ್ಯ ಷಷ್ಠಿ ಹಬ್ಬದ (Champa Shashti ) ದಿನದಂದು ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡುವುದು ಸಾಮಾನ್ಯ. ಆದರೆ ಇದೊಂದು ಜಿಲ್ಲೆಯಲ್ಲಿ ಹುತ್ತಕ್ಕೆ ಕೋಳಿರಕ್ತ ಎರೆದು, ಕೋಳಿ ಮೊಟ್ಟೆ ಹಾಕಿ ನಾಗಾರಾಧನೆ ಮಾಡುತ್ತಿದ್ದಾರೆ. ಅದೇ ಕೋಳಿಯಿಂದ ಅಡುಗೆ ಮಾಡಿ, ಉಪವಾಸವನ್ನು ಕಳೆಯುತ್ತಾರೆ.
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಷಷ್ಠಿ ಹಬ್ಬದ ದಿನ ಹುತ್ತದ ಮುಂದೆ ಕೋಳಿ ಕುಯ್ಯುತ್ತಿದ್ದಾರೆ ಎಂದು ಆಶ್ಚರ್ಯ ಆಗಬಹುದು. ಷಷ್ಠಿ ಹಬ್ಬದಂದು ಎಲ್ಲಾ ಕಡೆ ಹುತ್ತಕ್ಕೆ ಹಾಲೆರೆದು ನಾಗಪೂಜೆ ಮಾಡಿದರೆ, ಇಲ್ಲಿನ ಕೆಲ ಗ್ರಾಮಗಳಲ್ಲಿ ಹುತ್ತದ ಮುಂದೆ ಕೋಳಿ ಕುಯ್ದು ಅದರ ರಕ್ತವನ್ನು ಹುತ್ತಕ್ಕೆ ಎರೆಯುತ್ತಾರೆ. ಕೋಳಿ ತಲೆ ಹಾಗು ಕೋಳಿ ಮೊಟ್ಟೆಯನ್ನು ಹುತ್ತಕ್ಕೆ ಹಾಕಿ ನಾಗಾರಾಧನೆ ಮಾಡುತ್ತಾರೆ. ಈ ರೀತಿ ಮಾಡಲು ಮುಖ್ಯ ಕಾರಣ ಜನರು ಜಮೀನುಗಳಿಗೆ ಹಾಗೂ ಮನೆಯ ಅಕ್ಕ ಪಕ್ಕ ಓಡಾಡುವಾಗ ಸರ್ಪಗಳು ಕಾಣಿಸದೆ ಇರಲಿ. ಜತೆಗೆ ಸರ್ಪಗಳಿಂದ ಯಾವುದೇ ತೊಂದರೆ ನಮಗೆ ಆಗದಿರಲಿ ಎನ್ನುವ ಉದ್ದೇಶದಿಂದ ಇಲ್ಲಿನ ಜನರು ಹರಕೆ ಹೊತ್ತು ಕೋಳಿ ರಕ್ತವನ್ನೂ ಹುತ್ತಕ್ಕೆ ಹಾಕುತ್ತಾರೆ.
ಷಷ್ಠಿ ಹಬ್ಬದ ದಿನ ಮನೆಮಂದಿಯೆಲ್ಲಾ ಶುದ್ಧಗೊಂಡು, ಒಂದು ಹೊತ್ತು ಉಪವಾಸ ಇರುತ್ತಾರೆ. ನಂತರ ಹುತ್ತಕ್ಕೆ ಕೋಳಿ ರಕ್ತ ಎರೆದು ಕೋಳಿಮೊಟ್ಟೆ ಹಾಗು ಕೋಳಿಯ ತಲೆಯನ್ನು ಹಾಕಿ ಪೂಜೆ ಮಾಡುತ್ತಾರೆ. ಬಲಿ ಕೊಟ್ಟ ಕೋಳಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಅಡುಗೆ ಮಾಡಲಾಗುತ್ತದೆ. ಅದನ್ನೇ ಪ್ರಸಾದ ಎಂಬಂತೆ ಕುಟುಂಬಸ್ಥರು ಸೇವಿಸುತ್ತಾರೆ. ಜತೆಗೆ ಅಕ್ಕ ಪಕ್ಕದ ಮನೆಯವರಿಗೆ ಸಹ ಪ್ರಸಾದದ ರೀತಿಯಲ್ಲಿ ನೀಡುತ್ತಾರೆ.
ಕುಕ್ಕೆ ಕ್ಷೇತ್ರದಲ್ಲಿ ಪಂಚಮಿ ರಥೋತ್ಸವ
ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿಯು ಲಕ್ಷಾಂತರ ಭಕ್ತರ ಸಮಾಗಮದೊಂದಿಗೆ ವೈಭವದೊಂದಿಗೆ ನಡೆದಿದೆ. ಭಾನುವಾರ ರಾತ್ರಿಯಿಂದಲೇ ದೇವಸ್ಥಾನದ ಒಳಾಂಗಣದಲ್ಲಿ ಸುಬ್ರಹ್ಮಣ್ಯ ದೇವರಿಗೆ ಪಲ್ಲಕಿ ಸೇವೆ ನಡೆದು ಬಳಿಕ ರಥಬೀದಿಯಲ್ಲಿ ಪಂಚಮಿ ರಥೋತ್ಸವ ನಡೆಸಲಾಗಿತ್ತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಜಯಘೋಷದೊಂದಿಗೆ ದೇವರಿಗೆ ಪಂಚಮಿ ರಥೋತ್ಸವ ನಡೆದಿತ್ತು. ಸೋಮವಾರ ಮುಂಜಾನೆ 7.33 ರ ಧನು ಲಗ್ನದಲ್ಲಿ ಚಂಪಾಷಷ್ಠಿಯ ಬ್ರಹ್ಮ ರಥೋತ್ವವ ನಡೆಸಲಾಯಿತು. ಕಳೆದ ಒಂದು ವಾರದಿಂದ ಕುಕ್ಕೆ ಕ್ಷೇತ್ರದಲ್ಲಿ ಷಷ್ಠಿಯ ಉತ್ಸವಗಳು ಆರಂಭಗೊಂಡಿದ್ದು, ಇಂದು ಬ್ರಹ್ಮ ರಥೋತ್ಸವದೊಂದಿಗೆ ದೇವರಿಗೆ ನಡೆಯುತ್ತಿದ್ದ ವಿಶೇಷ ಸೇವೆಗಳು ಮುಕ್ತಾಯ ಗೊಂಡಿದೆ.
ಪಂಚಮಿ ಹಾಗೂ ಷಷ್ಠಿಯ ದಿನದಂದು ವಾಡಿಕೆಯಂತೆ ನಡೆಯುವ ಹರೆಕೆ ಸೇವೆಯಾಗಿರುವ ಎಡೆಸ್ನಾನದ ಸೇವೆಯನ್ನು ನೂರಾರು ಭಕ್ತರು ನೆರವೇರಿಸಿದ್ದಾರೆ. ಡಿಸೆಂಬರ್ 24ರಂದು ಕುಮಾರದಾರ ನದಿಯಲ್ಲಿ ದೇವರಿಗೆ ನೀರು ಬಂಡಿ ಉತ್ಸವ ನಡೆಯುವುದರೊಂದಿಗೆ ವಾರ್ಷಿಕ ಜಾತ್ರೆಗೆ ತೆರೆ ಬೀಳಲಿದೆ.
ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಸಂಭ್ರಮ
ಬೆಂಗಳೂರಿನ ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಚಂಪಾ ಷಷ್ಠಿ ಸಂಭ್ರಮ ಮನೆಮಾಡಿತ್ತು. ಚಂಪಾ ಷಷ್ಠಿ ಹಿನ್ನೆಲೆಯಲ್ಲಿ ನರಸಿಂಹ ಸಮೇತ ಸುಬ್ರಹ್ಮಣ್ಯ ಸ್ವಾಮಿ ನೆಲಸಿರುವ ಕಾರಣಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.
ಚಂಪಾಷಷ್ಠಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5 ಗಂಟೆಯಿಂದಲೂ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.
ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದ ಮೇಲೆ ಹಾರಾಡಿದ ಗರುಡ
ಇನ್ನೂ ಹಾಸನ ಜಿ. ಅರಕಲಗೂಡು ತಾ. ರಾಮನಾಥಪುರದಲ್ಲಿರೋ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲೂ ಷಷ್ಠಿ ಉತ್ಸವ ಜೋರಾಗಿ ನಡೆಯಿತು. ದಕ್ಷಿಣ ಕಾಶಿ ರಾಮನಾಥಪುರದಲ್ಲಿ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದ ಮೇಲೆ ಗರುಡ ಹಾರಾಡಿದ ನಂತರ ಚಾಲನೆ ನೀಡಲಾಯಿತು.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿರುವ ಕೊಟ್ಟೂರೇಶ್ವರ ಮಠದಲ್ಲಿ ಕಾರ್ತಿಕ ಸೋಮವಾರ ಹಿನ್ನೆಲೆಯಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸ್ಥಳೀಯ ವರ್ತಕ ಬಣಕಾರ್ ಕೊಟ್ರೇಶ್ ಎಂಬುವವರು ವಿಶೇಷ ಅಲಂಕಾರ ಮಾಡಿದ್ದರು. ದೇಗುಲಕ್ಕೆ ವಿಶೇಷ ಅಲಂಕಾರ ಮಾಡಿದ್ದಕ್ಕೆ ದೇವಸ್ಥಾನ ಕಮಿಟಿಯ ವತಿಯಿಂದ ಬಣಕಾರ್ ಕೊಟ್ರೇಶ್‌ಗೆ ಸನ್ಮಾನ ಮಾಡಲಾಯಿತು.