ಶಿರಸಿ: ಜೀವನದ ಉದ್ದಕ್ಕೂ ನಿಯಮಿತವಾಗಿ ವ್ರತ, ನಿಷ್ಠೆ ಅಗತ್ಯ. ಜೀವನದಲ್ಲಿ ಒಂದು ವ್ರತವನ್ನಾದರೂ ಬಿಡದೇ ಮಾಡಬೇಕು. ಕೆಲವರು ಮೂರ‍್ನಾಲ್ಕು ವ್ರತ ಮಾಡುವವರೂ ಇದ್ದಾರೆ. ಆದರೆ, ಒಂದು ವ್ರತವಾದರೂ ಗಟ್ಟಿಯಾಗಿ ತಪ್ಪದೇ ಮಾಡಿ, ತುದಿಯ ತನಕ ನಡೆಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಚಾತುರ್ಮಾಸ್ಯ ವ್ರತಾಚರಣೆಯ (Chaturmasya 2022) ಹಿನ್ನಲೆಯಲ್ಲಿ ಮಂಜುಗುಣಿ ಸೀಮಾ ಭಕ್ತ ಶಿಷ್ಯರಿಂದ ಪಾದಪೂಜೆ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು. ಮನುಷ್ಯನಿಗೆ ಬುದ್ಧಿ ಶಕ್ತಿ ಇದೆ, ಮಾತಿನ ಶಕ್ತಿ ಇದೆ. ಇನ್ನೂ ಅನೇಕ ಶಕ್ತಿ ಇದೆ. ಮನುಷ್ಯ ವ್ರತ ನಿಷ್ಠನಾದರೆ ಮನುಷ್ಯನ ಜೀವನ ಸಾರ್ಥಕವಾಗುತ್ತದೆ ಎಂದ ಶ್ರೀಗಳು, ವ್ರತಗಳನ್ನು, ಭಗವಂತನ ಆರಾಧನೆಯನ್ನು ಮನೆಯಲ್ಲಿ ಯಾವಾಗಲೂ ಮಾಡುತ್ತಿರಬೇಕು ಎಂದರು.
ವ್ರತಗಳ ಬಗ್ಗೆ ಭಗವದ್ಗೀತೆಯಲ್ಲಿ ಕೂಡ ಭಗವಂತ ಉಲ್ಲೇಖಿಸಿದ್ದಾನೆ. ಯಾವುದೇ ವ್ರತ ಮಾಡುವಾಗಲೂ ಸ್ನಾನ, ದಾನ, ಉಪವಾಸ, ಬ್ರಾಹ್ಮಣ ಸಂತರ್ಪಣೆ ಸಾಮಾನ್ಯವಾಗಿ ಇರುತ್ತದೆ ಎಂದ ಶ್ರೀಗಳು, ವ್ರತ ಮಾಡುವಾಗ ಕೇವಲ ಪೂಜೆ ಮಾತ್ರವಲ್ಲ, ವಯಕ್ತಿಕ ಆಚಾರ ನಿಯಮಗಳೂ ಸಮರ್ಪಕವಾಗಿ ಇರಬೇಕು. ಹಾಗಿದ್ದರೆ ಮಾತ್ರ ವ್ರತದ ಫಲ ಸಿಗುತ್ತದೆ ಎಂದರು.
ವ್ರತ ಎಂದರೆ ದೀಕ್ಷೆ ಇದ್ದಂತೆ. ಯಜ್ಞದಲ್ಲಿ ದೀಕ್ಷೆ ಇದ್ದಂತೆ ವ್ರತದಲ್ಲೂ ಅಂಥ ದೀಕ್ಷೆ ಇವೆ. ವ್ರತದಲ್ಲೂ ಅನೇಕ ನಿಯಮಗಳಿವೆ ಎಂದರು. ದೀಕ್ಷೆ ಪಡೆದ ಬಳಿಕ ಸತ್ಯ ನಿಷ್ಠತೆ ಬೇಕು. ಸತ್ಯ ವಚನ ಬಿಟ್ಟರೆ ವ್ರತ ಹಾಳಾದಂತೆ.
ವಯಕ್ತಿಕ ನಡತೆ ಕೂಡ ಮಹತ್ವದ್ದು. ಸ್ವಚ್ಛ ನಡತೆಯ ಮೂಲಕ ವ್ರತ ಅನುಷ್ಠಾನ ಮಾಡಿದರೆ
ಅದರಿಂದಾಗುವ ಪ್ರಯೋಜನ ದೊಡ್ಡದು. ಯಾವ ಪ್ರಯೋಜನಕ್ಕಾಗಿ ವ್ರತ ಮಾಡುತ್ತಿದ್ದರೋ ಅದರ
ಫಲ ಸಿಗುತ್ತದೆ ಎಂದು ಶ್ರೀಗಳು ವಿವರಿಸಿದರು.
ಜೀವನ ಪರ‍್ಯಂತ ಮಾಡಿದ ವ್ರತ ಮಾಡಿದವರು ಮರಣಾನಂತರ ಅದರ ಪುಣ್ಯ ಪಡೆಯುತ್ತಾರೆ. ದಿನ
ನಿತ್ಯದ ವ್ರತಕ್ಕೆ ಅನೇಕ ಕಷ್ಟವಿಲ್ಲ. ಪತ್ರಂ, ಪುಷಂ, ಫಲಂ, ಜಲಂ ಈ ನಾಲ್ಕಿದ್ದರೂ ವ್ರತ ಮಾಡಲು ಸಾಕು. ಆದರೆ, ಶ್ರದ್ಧೆ, ಭಕ್ತಿಯಿಂದ ಮಾಡಬೇಕು. ನಾವೇನು ದೇವರಿಗೆ ಕೊಡುತ್ತೇವೋ, ಅದೇ ನಮಗೆ ಭಗವಂತ ವಾಪಸ್ ಕೊಡುತ್ತಾನೆ. ಭಕ್ತಿಗೆ ಭಗವಂತನು ಒಲಿಯುತ್ತಾನೆ. ಪೂಜೆಯಲ್ಲಿ, ವ್ರತ ಮಾಡಿದಂತೆ ನಮ್ಮ ನಡುವಳಿಕೆ, ಆಹಾರ, ಪೂಜೆ, ದಾನ
ಎಲ್ಲವೂ ಮುಖ್ಯ. ಭಗವಂತನ ಸ್ಮರಣೆ ಮಾಡಿ ಭಗವಂತನಿಗೇ ಅರ್ಪಿಸಿ ಕೆಲಸ, ದಾನ ಮಾಡಿದರೆ
ಅದೂ ಭಗವಂತನ ವ್ರತವೇ ಎಂದೂ ಹೇಳಿದರು.
ಈ ವೇಳೆ ರತ್ನಾಕರ ಗಣಪತಿ ಚಿಕ್ಕಡಿ, ವಿಷ್ಣು ಹೆಗಡೆ ಕಡೆಮನೆ, ಶ್ರೀಕಾಂತ ಹೆಗಡೆ ಅತ್ತಿಕಾರಗದ್ದೆ ಇತರರು ಇದ್ದರು. ಸುಮಂಗಲಿಯರು ಕುಂಕುಮಾರ್ಚನೆ ಮಾಡಿದರು.
ಇದನ್ನೂ ಓದಿ| ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಕಡೆಗೂ ಗಮನ ನೀಡಿ : ಸ್ವರ್ಣವಲ್ಲಿ ಶ್ರೀ