ಚಿಕ್ಕಮಗಳೂರು: ಇಲ್ಲಿನ ಬಾಬಾ ಬುಡನ್ಗಿರಿಯ ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಮವಾರ (ಡಿ. ೫) ದತ್ತಾತ್ರೇಯನಿಗೆ ಅರ್ಚಕರಿಂದ ಪೂಜೆ ನೆರವೇರುವ ಮೂಲಕ ದತ್ತ ಜಯಂತಿ (Datta Jayanti) ಅದ್ಧೂರಿ ಆರಂಭವನ್ನು ಪಡೆದಿತ್ತು. ಗುರವಾರ (ಡಿಸೆಂಬರ್ ೮) ಕೊನೇ ದಿನವಾಗಿದ್ದು, ದತ್ತ ಪಾದುಕೆ ಪೂಜೆ, ದರ್ಶನಕ್ಕೆ ಭಕ್ತ ಸಾಗರ ಹರಿದುಬರುತ್ತಿದೆ. ಇಂದು ಸಂಜೆ ಅದ್ಧೂರಿ ತೆರೆ ಬೀಳಲಿದೆ.
ದತ್ತಮಾಲಾ ಅಭಿಯಾನ ಹಾಗೂ ದತ್ತ ಜಯಂತಿಗೆ ಕೊನೆಯ ದಿನವಾದ ಕಾರಣ ಸಾವಿರಾರು ದತ್ತ ಭಕ್ತರು ಇನಾಂ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಯ ದರ್ಶನ ಪಡೆಯುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ದತ್ತ ಭಕ್ತರ ದಂಡು ಹರಿದು ಬರುತ್ತಿದ್ದು, ದತ್ತಪೀಠ ನಮ್ಮದು ಎಂಬ ಘೋಷಣೆ ಎಲ್ಲೆಡೆ ಮೊಳಗಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.
ದತ್ತ, ಗಣ ಹೋಮದೊಂದಿಗೆ ಸಂಪನ್ನ
ದತ್ತಪೀಠದ ತುಳಸಿ ಕಟ್ಟೆಯ ಬಳಿ ದತ್ತಹೋಮ, ಗಣ ಹೋಮ ನೆರವೇರಿಸಲಾಗುತ್ತಿದೆ. ಪ್ರತಿ ಭಾರಿ ತಾತ್ಕಾಲಿಕ ಶೆಡ್‌ನಲ್ಲಿ ಹೋಮ-ಹವನ ನಡೆಯುತ್ತಿದೆ. ಆದರೆ, ಕೋರ್ಟ್ ಆದೇಶದ ಅನ್ವಯ ಸರ್ಕಾರ ಸಮಿತಿ ರಚನೆ ಮಾಡಿದ್ದು, ಸಮಿತಿಯಿಂದ ದತ್ತಪೀಠದಲ್ಲಿ ಹಿಂದು ಅರ್ಚಕರ ನೇಮಕವನ್ನು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ತುಳಸಿ ಕಟ್ಟೆ ಸಮೀಪ ದತ್ತ ಹೋಮ ನೆರವೇರಿಸಲಾಯಿತು. ದಶಕಗಳ ಬಳಿಕ ಸಂಘ ಪರಿವಾರದ ಪ್ರಮುಖ ಬೇಡಿಕೆ ಈ ಬಾರಿ ಈಡೇರಿದಂತಾಗಿದೆ.
ಇನ್ನು ದತ್ತಪಾದುಕೆ ದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೇರಿ ಶಾಸಕರಾದ ಬೆಳ್ಳಿಪ್ರಕಾಶ್, ಸುರೇಶ್, ಕುಮಾರಸ್ವಾಮಿ ದರ್ಶನ ಪಡೆದರು.
ಭಕ್ತರಿಂದ ಪಾದುಕೆ ದರ್ಶನ
ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ದತ್ತಪೀಠಕ್ಕೆ ಮೊದಲನೇ ಬಾರಿಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ಚಿತ್ರಣ ನೋಡಿ ನಿಜವಾಗಿಯೂ ನನಗೆ ಪುಳಕಿತವಾಗಿದೆ. ಸಾವಿರಾರು ದತ್ತ ಭಕ್ತರು ಇಲ್ಲಿ ಭಾಗವಹಿಸುತ್ತಿದ್ದಾರೆ. ಪಾದುಕೆಗಳ ದರ್ಶನ ಪಡೆಯುತ್ತಿದ್ದಾರೆ, ಇದು ಹೆಮ್ಮೆಯ ವಿಷಯ. ಎಲ್ಲೂ ಲೋಪವಾಗದಂತೆ ಕ್ರಮವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೆ. ಸರ್ಕಾರ ಅರ್ಚಕರನ್ನು ನೇಮಕ ಮಾಡಿ ಐತಿಹಾಸಿಕ ತೀರ್ಮಾನವನ್ನು ಮಾಡಿದೆ. ಅರ್ಚಕರಿಂದ ಪ್ರಸಾದ ಸ್ವೀಕಾರ ಮಾಡುವಂತಹ ಸಮಯದಲ್ಲಿ ಭಕ್ತರು ಹೆಮ್ಮೆ ಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ನಮ್ಮ ಮುಖ್ಯಮಂತ್ರಿಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು.
ಇದನ್ನೂ ಓದಿ | Dead body in plastic | ಹೆಂಡತಿ ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಿದ ಪ್ರಕರಣ; ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪೊಲೀಸರು