Site icon Vistara News

ದೊಡ್ಡ ಗಣಪತಿ ಬೆಣ್ಣೆ ಅಲಂಕಾರಕ್ಕೆ ಡಿಮ್ಯಾಂಡ್‌ ; ಭಕ್ತರು ಕಾಯಲೇಬೇಕು ಇನ್ನೂ 3 ವರ್ಷ!

Demand for dodha Ganapati benne alankara Devotees will have to wait for another 3 years

ಬೆಂಗಳೂರು: ಕಡಲೆಕಾಯಿ ಪರಿಷೆಯಿಂದ ದೊಡ್ಡ ಬಸವಣ್ಣ ಫೇಮಸ್‌ ಆದರೆ, ಇತ್ತ ಭಕ್ತರ ಕೋರಿಕೆ ಈಡೇರಿಸುವ ಮೂಲಕ ದೊಡ್ಡ ಗಣಪತಿ ಫೇಮಸ್‌ (Dodda Ganapathi temple) ಆಗಿದ್ದಾನೆ. ಹೀಗೆ ಭಕ್ತರ ಕಷ್ಟಗಳನ್ನು ಈಡೇರಿಸುತ್ತಾ ಬಂದಿರುವ ವಿಘ್ನೇಶ್ವರನ ಆರಾಧಕರಿಗೆ ಇದೀಗ ನಿರಾಸೆ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ದೇವರ ಹರಕೆ ತೀರಿಸಲು ಬರುವ ಭಕ್ತರು ಸಪ್ಪೆಮೋರೆ ಹಾಕಿ ಹಿಂತಿರುಗುವಂತಾಗಿದೆ.

ಬೆಂಗಳೂರಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾಗಿರುವ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯಕ್ಕೆ ಭಕ್ತಸಾಗರವೇ ಹರಿದು ಬರುತ್ತದೆ. ಸುಮಾರು 500ಕ್ಕೂ ಅಧಿಕ ವರ್ಷದ ಇತಿಹಾಸ ಇರುವ ಈ ದೇಗುಲದಲ್ಲಿ ಇದೀಗ ಬೆಣ್ಣೆ ಅಲಂಕಾರ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತಮ್ಮ ಕೆಲಸ ಕಾರ್ಯಗಳಲ್ಲಿ ಜಯ ಸಿಗಲಿ ಎಂದು ಹರಕೆ ಹೊರುವ ಭಕ್ತರು, ಬೆಣ್ಣೆ ಅಲಂಕಾರ ಮಾಡಿಸಲು ಮುಗಿಬೀಳುತ್ತಿದ್ದಾರೆ.

ಸದ್ಯ ಬುಧವಾರ ಹಾಗೂ ಶನಿವಾರ ಮಾತ್ರ ಬೆಣ್ಣೆ ಅಲಂಕಾರಕ್ಕೆ ಅವಕಾಶ ನೀಡಿರುವುದರಿಂದ ಭಕ್ತರಿಗೆ ನಿರಾಸೆಯಾಗಿದೆ. ಇದರ ಮಧ್ಯೆ ಮುಂದಿನ ಮೂರು ವರ್ಷಗಳ ತನಕ ಬೆಣ್ಣೆ ಅಲಂಕಾರಕ್ಕೆ ಅಡ್ವಾನ್ಸ್‌ ಬುಕ್ಕಿಂಗ್‌ ಆಗಿದ್ದು, ಭಕ್ತರು ಹರಕೆ ತೀರಿಸಲೇ ಬೇಕು ಎಂದು ಮುಗಿಬೀಳುತ್ತಿರುವುದು ಅರ್ಚಕರನ್ನು ಹೈರಾಣಾಗಿಸಿದೆ.

ಇದನ್ನೂ ಓದಿ: Kadlekai Parishe 2023: ನಾಳೆಯಿಂದ ಕಡಲೆಕಾಯಿ ಪರಿಷೆ; 5 ದಿನ ಈ ಮಾರ್ಗ ಬಂದ್‌!

ಸಾಮೂಹಿಕ ಬೆಣ್ಣೆ ಅಲಕಾಂರಕ್ಕೆ ಬೇಡಿಕೆ!

ದೇವಸ್ಥಾನದ ಮೇಲ್ವೀಚಾರಣೆ ನೋಡಿಕೊಳ್ಳುತ್ತಿರುವ ಮುಜುರಾಯಿ ಇಲಾಖೆ ದೇವಸ್ಥಾನದ ಪ್ರತಿ ಸೇವೆಗೂ ದಿನಾಂಕ, ವಾರಗಳನ್ನು ಮೀಸಲಿಟ್ಟಿದೆ. ಇತ್ತ ಬೆಣ್ಣೆ ಅಲಂಕಾರಕ್ಕೆ ವಾರದಲ್ಲಿ ಎರಡು ದಿನ ಮಾತ್ರ ಅವಕಾಶ ನೀಡಿರುವುದರಿಂದ ಈಗಾಗಲೇ ಬುಕ್‌ ಮಾಡಿರುವ ಭಕ್ತರಿಗೆ ಮಾತ್ರ ಪೂಜೆಗೆ ಅವಕಾಶ ಸಿಗುತ್ತಿದೆ. ಆದರೆ ದೆಹಲಿ, ಬಾಂಬೆ, ಕಲ್ಕತ್ತಾ ಸೇರಿದಂತೆ ವಿವಿಧ ಭಾಗಗಳಿಂದ ಕೂಡ ಬೆಣ್ಣೆ ಅಲಂಕಾರಕ್ಕೆ ಡಿಮ್ಯಾಂಡ್‌ ಕೇಳಿ ಬರುತ್ತಿದ್ದು, ಇದರಿಂದ ಸುಸ್ತಾದ ಅರ್ಚಕರು ಸಾಮೂಹಿಕ ಬೆಣ್ಣೆ ಅಲಂಕಾರಕ್ಕೆ ಅವಕಾಶ ಮಾಡಬೇಕು ಎಂದು ಮುಜುರಾಯಿ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

ಒಟ್ಟು 11 ಅಡಿ ಉದ್ದ ಹಾಗೂ 16 ಅಡಿ ಅಗಲದ ವಿಘ್ನೇಶ್ವರನ ವಿಗ್ರಹಕ್ಕೆ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಗರ್ಭಗುಡಿ ಕಟ್ಟಿಸಲಾಯಿತು ಎಂಬ ಐತಿಹ್ಯವಿದೆ. ಇಂತಹ ಭವ್ಯ ಇತಿಹಾಸ ಇರುವ ದೊಡ್ಡ ಗಣಪತಿ ನೂರಾರು ಭಕ್ತರ ಬಯಕೆಗಳನ್ನು ಈಡೇರಿಸುತ್ತಾ ಬಂದಿದ್ದಾನೆ.

ಸದ್ಯ ದೇವರಿಂದ ವರ ಪಡೆದ ಭಕ್ತರು ಬೆಣ್ಣೆ ಅಲಂಕಾರಕ್ಕೆ ಹೆಚ್ಚು ಒಲವು ತೋರುತ್ತಿರುವುದು ಇದೀಗ ಡಿಮ್ಯಾಂಡ್‌ ಸೃಷ್ಟಿಮಾಡಿದೆ. ಮುಜುರಾಯಿ ಇಲಾಖೆ ಅರ್ಚಕರು ನೀಡಿರುವ ಮನವಿಗೆ ಯಾವುದೇ ಅವಕಾಶ ನೀಡಿಲ್ಲ ಎನ್ನಲಾಗುತ್ತಿದೆ. ಸದ್ಯ ಗಣಪತಿಗೆ ಬೆಣ್ಣೆ ಅಲಂಕಾರ ಮಾಡಿಸಲೇ ಬೇಕು ಎಂದು ಆಸೆಪಟ್ಟ ಭಕ್ತರು ಮೂರು ವರ್ಷಗಳ ತನಕ ಕಾಯಬೇಕಿರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version