Site icon Vistara News

Dharmasthala deepothsava | ಕಣ್ಣಿಗೆ ಹಬ್ಬ, ಮನಸಿಗೆ ತೃಪ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ವೈಭವ

dharmasthala deepothsava

ಮಂಗಳೂರು: ಜ್ಞಾನ-ವಿಜ್ಞಾನ-ಸುಜ್ಞಾನದ ತ್ರಿವೇಣಿ ಸಂಗಮವಾಗಿರುವ ವೈಭವದ ಲಕ್ಷದೀಪೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಬೆಳಕಿನ ಮಾಲೆಗಳನ್ನು ಪೋಣಿಸಿಕೊಂಡು ಅಣಿಯಾಗಿದೆ. ಕಾರ್ತಿಕ ಮಾಸದ ಈ ದೀಪಗಳ ಹಬ್ಬ ನವೆಂಬರ್‌ ೧೯ರಿಂದ ನವೆಂಬರ್‌ ೨೩ರವರೆಗೆ ಅದ್ದೂರಿಯಾಗಿ ಮೈಮನ ಪುಳಕಗೊಳಿಸಲಿದೆ. ಧರ್ಮಸ್ಥಳದಲ್ಲಿ ನಡೆಯುವ ಹಲವು ಉತ್ಸವಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿ ನಿಂತಿರುವ ಲಕ್ಷದೀಪೋತ್ಸವ ಭಕ್ತರ ಪಾಲಿಗೆ ನಿಜಾರ್ಥದಲ್ಲಿ ಮಂಜುನಾಥ ಸ್ವಾಮಿಯ ಲೀಲೋತ್ಸವ. ಶ್ರೀಕ್ಷೇತ್ರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಾರಥ್ಯದಲ್ಲಿ ಅದು ಇನ್ನಷ್ಟು ವೈಭವವನ್ನು ಪಡೆದುಕೊಂಡಿದೆ.

ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸಂಪನ್ನಗೊಳ್ಳುವಂತೆ ಆರಂಭವಾಗುವ ಉತ್ಸವದಲ್ಲಿ ದಾರಿದ್ರ್ಯ ಲಕ್ಷ್ಮಿ ಬೆಳಕಿನ ಪ್ರಭಾವಳಿಗಳ ನಡುವೆ ದಿಕ್ಕೆಟ್ಟು ಓಡುತ್ತಾಳೆ ಎನ್ನುವುದು ನಂಬಿಕೆ. ಅದೇ ಹೊತ್ತಿಗೆ ದೇವರು ಊರಿನ ನಾಲ್ಕೂ ದಿಕ್ಕುಗಳಲ್ಲಿ ಸುತ್ತುವ ಸಂಭ್ರಮ ಇಲ್ಲಿದ್ದು, ದೇವರು ಮನೆ ಮನೆಗೂ ಬರುತ್ತಾರೆ ಎಂದೇ ಜನ ನಂಬಿದ್ದಾರೆ. ಮೊದಲನೆ ದಿನ ದೇವರ ಪೇಟೆ ಸವಾರಿ ಹೊಸ ಕಟ್ಟೆ ಉತ್ಸವವಾಗಿ, ಎರಡನೇ ದಿನ ಕೆರೆಕಟ್ಟೆ ಉತ್ಸವವಾಗಿ, ಮೂರನೇ ದಿನ ಲಲಿತೋದ್ಯಾನ ಉತ್ಸವವಾಗಿ, ನಾಲ್ಕನೇ ದಿನ ಕಂಚಿಮಾರು ಕಟ್ಟೆ ಉತ್ಸವವಾಗಿ, ಐದನೇ ದಿನ ಗೌರಿಮಾರು ಕಟ್ಟೆ ಉತ್ಸವವಾಗಿ ಮನ ಸೆಳೆಯುತ್ತದೆ.

ಲಕ್ಷದೀಪೋತ್ಸವ ಧರ್ಮ, ಕಲೆ ಮತ್ತು ಸಾಹಿತ್ಯದ ವೈವಿಧ್ಯಮಯ ಜ್ಞಾನ ದಾಸೋಹವಾಗಿದೆ. ಮನಕ್ಕೆ ಮುದ ನೀಡುವುದರೊಂದಿಗೆ ಸಾರ್ಥಕ ಬದುಕಿಗೆ ಉಪಯುಕ್ತ ಸಂದೇಶ, ಮಾಹಿತಿ ಮಾರ್ಗದರ್ಶನವನ್ನೂ ನೀಡುವ ಮಂಗಳ ಪರ್ವ. ಲಕ್ಷದೀಪೋತ್ಸವ ಪ್ರಯುಕ್ತ ಧರ್ಮಸ್ಥಳದ ಎಲ್ಲ ಕಟ್ಟಡಗಳನ್ನು ಆಕರ್ಷಕ ವಿನ್ಯಾಸದ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು, ಇಡೀ ಕ್ಷೇತ್ರ ನವಕಳೆಯಿಂದ ಕಂಗೊಳಿಸುತ್ತಿದೆ.

ಏನೇನು ಕಾರ್ಯಕ್ರಮ?
ಶನಿವಾರ (ನವೆಂಬರ್‌ ೧೯) ವಸ್ತು ಪ್ರದರ್ಶನ ಉದ್ಘಾಟನೆಯೊಂದಿಗೆ ಲಕ್ಷ ದೀಪೋತ್ಸವ ವಿಶೇಷ ಕಾರ್ಯಕ್ರಮಗಳು ಆರಂಭವಾಗಲಿವೆ. ಮಂಜುನಾಥ ಪ್ರೌಡ ಶಾಲೆಯ ಮೈದಾನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದಾರೆ. ನವೆಂಬರ್ 21ರಂದು ಕವಿಗೋಷ್ಠಿ, 22 ರಂದು ಸರ್ವಧರ್ಮ ಸಮ್ಮೇಳನ ಹಾಗೂ 23 ರಂದು ಸಾಹಿತ್ಯ ಸಮ್ಮೇಳನ ನಡೆಯಲಿದೆ . ಸರ್ವಧರ್ಮ ಸಮ್ಮೇಳನವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸಲಿದ್ದಾರೆ. ನವೆಂಬರ್ 19 ರಿಂದ 24 ರ ವರೆಗೆ ವಿವಿಧ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಶ್ರೀ ಮಂಜುನಾಥ ದೇವರಿಗೆ ಉತ್ಸವಗಳು ನಡೆಯಲಿದೆ. ಕ್ಷೇತ್ರದಲ್ಲಿ ಇರುವ ದೇವರ ಕಟ್ಟೆಗಳಲ್ಲಿ ಮಂಜುನಾಥ ಸ್ವಾಮಿ ವಿರಾಜಮಾನರಾಗಲಿದ್ದು, ಭಕ್ತರಿಗೆ ವಿಶೇಷ ದರ್ಶನ ನೀಡಲಿದ್ದಾನೆ. ವಿವಿಧ ಕಲಾ ತಂಡಗಳಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸಾಂಸ್ಕೃತಿಕ ವೈವಿಧ್ಯ
ನ.19ರಿಂದ 23ರ ವರೆಗೆ ನಡೆಯುವ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಜ್ಞಾನ, ವಿಜ್ಞಾನ, ಕಲೆ ಮತ್ತು ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 19ರಿಂದ 23ರ ವರೆಗೆ ಧರ್ಮಸ್ಥಳದಲ್ಲಿ ಪ್ರೌಢಶಾಲಾ ವಠಾರದಲ್ಲಿ ರಾಜ್ಯಮಟ್ಟದ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.

ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 19ರಂದು ಶನಿವಾರ ಸಂಜೆ 4 ಗಂಟೆಗೆ ಉಜಿರೆಯಿಂದ ಧರ್ಮಸ್ಥಳಕ್ಕೆ 20,000 ಮಂದಿ ಪಾದಯಾತ್ರೆ ಮಾಡುವರು.

ಸರ್ವಧರ್ಮ, ಮತ್ತು ಸಾಹಿತ್ಯ ಸಮ್ಮೇಳನ
ನ. 22ರಂದು ಮಂಗಳವಾರ ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 90ನೇ ಅಧಿವೇಶನವನ್ನು ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉದ್ಘಾಟಿಸುವರು. ಶಿವಮೊಗ್ಗದ ಖ್ಯಾತ ವಕೀಲ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬಸ್ತಿಕಟ್ಟೆ ಚರ್ಚ್‌ನ ಧರ್ಮಗುರು ಫಾದರ್ ಮಾರ್ಸೆಲ್ ಪಿಂಟೊ, ವಿಜಯಪುರದ ಸಾಹಿತಿ ಹಾಸಿಂಪೀರ ಇ ವಾಲೀಕಾರ ಮತ್ತು ಮೂಡುಬಿದಿರೆ ಜೈನ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳ ಧಾರ್ಮಿಕ ಉಪನ್ಯಾಸ ನೀಡುವರು.

ಸಾಹಿತ್ಯ ಸಮ್ಮೇಳನ
ನ.23ರಂದು ಬುಧವಾರ ಸಂಜೆ 5 ಗಂಟೆಗೆ ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ ಉದ್ಘಾಟಿಸುವರು. ಮೈಸೂರಿನ ಹಿರಿಯ ಪ್ರಾಧ್ಯಾಪಕ ಡಾ.ಎಚ್.ವಿ. ರಾವ್ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಹಿರಿಯ ವಿದ್ವಾಂಸ ಸತ್ಯೇಶ್ ಎನ್. ಬೆಳ್ಳೂರ್‌, ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಐನಕೈ ಮತ್ತು ತುಮಕೂರಿನ ಕನ್ನಡ ಪ್ರಾಧ್ಯಾಪಕಿ ಡಾ.ಗೀತಾ ವಸಂತ ಉಪನ್ಯಾಸ ನೀಡುವರು.

ಇದನ್ನೂ ಓದಿ | Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ಬಗ್ಗೆ ಪಾಠ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

Exit mobile version