ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ಧ ಚಿಕ್ಕಮಧುರೆಯ ಶನಿಮಹಾತ್ಮ ದೇವಸ್ಥಾನಕ್ಕೆ ಮಾಂಸದ ಹಾರ ತಂದು ಅಶುದ್ಧಿಗೊಳಿಸಲು ಕಿಡಿಗೇಡಿಗಳು ಪ್ರಯತ್ನಿಸಿರುವ ಘಟನೆ (Doddaballapura News) ನಡೆದಿದೆ. ಮಾಂಸದ ಹಾರ ಇಟ್ಟು ಪರಾರಿಯಾಗಲು ಯತ್ನಿಸಿದವರನ್ನು ದೇವಾಲಯದ ಸಿಬ್ಬಂದಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ಲಾಸ್ಟಿಕ್ ಬ್ಯಾಗ್‌ವೊಂದರಲ್ಲಿ ಗುಲಾಬಿ ಹಾರದೊಂದಿಗೆ ಮಾಂಸದ ತುಂಡುಗಳನ್ನು ಇಟ್ಟುಕೊಂಡು ಇಬ್ಬರು ಬಂದಿದ್ದರು. ಹೊಸಕೋಟೆ ಸಮೀಪದ ಕಂಬಲಹಳ್ಳಿಯ ರಾಜು, ವೈಟ್ ಫೀಲ್ಡ್ ಮೂಲದ ಆಟೋ ಚಾಲಕ ಸೋಮಶೇಖರ್ ಎಂಬುವವರು ಈ ಕೃತ್ಯ ಎಸಗಿದ್ದಾರೆ. ಈ ಹಿಂದೆ ಕೂಡ ಇದೇ ರೀತಿ ಕೃತ್ಯ ಎಸಗಿದ್ದರು ಎನ್ನಲಾಗಿದೆ.
ದೇವಾಲಯದ ಒಳಗೆ ಮಾಂಸದ ಹಾರ ಇಟ್ಟು ಬಂದರೆ ಮೂರು ಸಾವಿರ ರೂ. ನೀಡುತ್ತೇವೆ ಎಂದು ಹೇಳಿದ್ದರು. ಹಣದಾಸೆಗೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಶನಿವಾರ (ಮಾ.11) ಸಂಜೆ ದೇವಾಲಯಕ್ಕೆ ಮಾಂಸದ ಹಾರ ತಂದು, ದೇವಾಲಯದ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ಹಿಡಿದು ದೊಡ್ಡ ಬೆಳವಂಗಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೇಪರ್ ಒಳಗೊಂಡ ಹಾರವನ್ನು ನಿಷೇಧಿಸಿದ್ದ ದೇವಾಲಯ
ಕಳೆದ ಫೆ. 22ರಂದು ಕೂಡ ಕನಸವಾಡಿಯಲ್ಲಿರುವ ಶನಿಮಹಾತ್ಮ ದೇವಸ್ಥಾನಕ್ಕೆ ಬಂದ ಕಿಡಿಗೇಡಿಗಳಿಬ್ಬರು ದೇವರಿಗೆ ಹಾರ ಹಾಕಿ ಎಂದು ಪೇಪರ್ ಒಳಗೊಂಡ ಹಾರದಲ್ಲಿ ಮಾಂಸದ ತುಂಡು ಇಟ್ಟು ಅರ್ಚಕರಿಗೆ ನೀಡಿ ಅಲ್ಲಿಂದ ಕಾಲ್ಕಿತ್ತಿದ್ದರು. ಕವರ್ ತೆಗೆದುಕೊಂಡ ಅರ್ಚರು ದೇವರಿಗೆ ಹಾರ ಹಾಕಲೆಂದು ಗರ್ಭಗುಡಿಯೊಳಗೆ ಹೋಗುವಾಗ, ಮಾಂಸದ ತುಂಡು ಹಾರದಿಂದ ಕೆಳಗೆ ಬಿದ್ದಿದೆ. ಕೂಡಲೇ ದೇವಸ್ಥಾನದ ಸಿಬ್ಬಂದಿ ಕವರ್ ಅನ್ನು ಹೊರಗೆ ಎಸೆದಿದ್ದರು.
ಇದನ್ನೂ ಓದಿ: Modi in Karnataka : ಮೈಸೂರಿನಿಂದ ಮಂಡ್ಯದತ್ತ ಪ್ರಧಾನಿ ಮೋದಿ ಪಯಣ, ಸ್ವಾಗತಕ್ಕೆ ಕಲಾವಿದರ ತಂಡಗಳು ಸಜ್ಜು
ಈ ಎಲ್ಲ ಕೃತ್ಯವೂ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಬಳಿಕ ಪೇಪರ್ ಒಳಗೊಂಡ ಹಾರವನ್ನು ನಿಷೇಧಿಸಲಾಗಿತ್ತು. ಇದಾದ ಬಳಿಕ ಎರಡನೇ ಬಾರಿಗೆ ಇದೇ ರೀತಿಯ ಕೃತ್ಯ ಎಸಗಿ ಧಾರ್ಮಿಕ ಭಾವನೆಗೆ ಧಕ್ಕೆಯುನ್ನುಂಟು ಮಾಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ