ಬೆಂಗಳೂರು: ತ್ಯಾಗ ಮತ್ತು ಬಲಿದಾನದ ಪ್ರತೀಕದ ಹಬ್ಬ ಬಕ್ರೀದ್‌ಗೆ (Eid al Adha) ಮುಸಲ್ಮಾನರು ಸಜ್ಜಾಗುತ್ತಿದ್ದಾರೆ. ಮುಸಲ್ಮಾನರು ಆಚರಿಸುವ ಎರಡು ದೊಡ್ಡ ಹಬ್ಬಗಳಲ್ಲಿ ಬಕ್ರೀದ್ (Bakrid 2022) ಕೂಡ ಒಂದು. ಜೂನ್ 29ರಂದು ಬಕ್ರೀದ್ ಹಬ್ಬವಿದ್ದು, ಈ ಹಿನ್ನೆಲೆಯಲ್ಲಿ ಕುರಿ-ಮೇಕೆಗಳ ಮಾರಾಟಕ್ಕೆ ಚಾಮರಾಜಪೇಟೆ ಮೈದಾನದಲ್ಲಿ ರೈತರು ಸಜ್ಜಾಗಿದ್ದರು. ಆದರೆ ಈ ನಡುವೆ ಪೊಲೀಸ್ ಇಲಾಖೆ ನೋಟಿಸ್‌ವೊಂದು ನೀಡಿದ್ದು ರೈತರು ಕಂಗಾಲಾಗಿದ್ದಾರೆ.
ಮಾಗಡಿ, ಚನ್ನಪಟ್ಟಣ, ರಾಮನಗರ, ಮಳವಳ್ಳಿ ಹಾಗೂ ಶಿರಾ, ಮಧುಗಿರಿ ಸೇರಿ ಹಲವು ಭಾಗಗಳಿಂದ ಬಂದ ರೈತರು ಆಗಮಿಸಿದ್ದಾರೆ. ಬನ್ನೂರು, ಬಂಡೂರು, ಅಮೇಲ್ ಘಡ್, ಆಸ್ಟ್ರೇಲಿಯಾ, ನಾಟಿ ಮುಂತಾದ ತಳಿಗಳಿಗೆ ಬೇಡಿಕೆ ಹೆಚ್ಚಿದೆ. ಕನಿಷ್ಠ 10 ಸಾವಿರ ರೂಪಾಯಿಯಿಂದ 1 ಲಕ್ಷದವರೆಗೂ ಸಹ ಕುರಿ, ಮೇಕೆಗಳ ಬೆಲೆ ಇದೆ ಎಂದು ವ್ಯಾಪಾರಸ್ಥರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಕಳೆದ 15 ದಿನಗಳಿಂದ ವ್ಯಾಪಾರದಲ್ಲಿ ತೊಡಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ವಹಿವಾಟು ಆಗುತ್ತಿಲ್ಲ ಎಂತಲೂ ಅಳಲು ತೋಡಿಕೊಂಡಿದ್ದಾರೆ. ಮಳೆಯ ಕಾಟವೂ ಇರುವುದರಿಂದ ಸರಿಯಾದ ರೀತಿಯಲ್ಲಿ ವ್ಯಾಪಾರ ಆಗುತ್ತಿಲ್ಲ ಎಂದಿದ್ದಾರೆ. ಈ ಮಧ್ಯೆ ಬಕ್ರೀದ್ ಹಬ್ಬಕ್ಕೆ ನಾಲ್ಕು ದಿನ ಇರುವಾಗಲೇ ಪೊಲೀಸರು ನೋಟಿಸ್‌ವೊಂದನ್ನು ಹೊರಡಿಸಿದ್ದಾರೆ.
ಜೂ.24ರ ಸಂಜೆ 5 ಗಂಟೆಯೊಳಗೆ ಮೈದಾನದಲ್ಲಿ ಎಲ್ಲ ವ್ಯಾಪಾರ ವಹಿವಾಟು ಬಂದ್ ಮಾಡುವಂತೆ ನೋಟಿಸ್ ನೀಡಲಾಗಿದೆ. ಇದಕ್ಕೆ ದೂರಾದೂರಿನಿಂದ ಬಂದಿರುವ ರೈತರು ಕಂಗಾಲಾಗಿದ್ದು ಆಕ್ರೋಶ ಹೊರಹಾಕಿದ್ದಾರೆ. ಲಕ್ಷಾಂತರ ರೂ. ಸಾಲ ಮಾಡಿ ಕುರಿ ವ್ಯಾಪಾರ ಮಾಡುತ್ತಿದ್ದೇವೆ. ನಾವು ತಂದಿರುವ ಕುರಿ, ಮೇಕೆ, ಟಗರು ಎಲ್ಲವೂ ಮಾರಾಟವಾಗದೆ ಹಾಗೆ ಉಳಿದಿದೆ. ಜತೆಗೆ ರಾತ್ರಿ ಸಮಯ ಕಳ್ಳರ ಹಾವಳಿಯೂ ಇದೆ. ಈಗೀರುವಾಗ ರಾತ್ರಿಯಿಡಿ ಇಲ್ಲೆ ಉಳಿದುಕೊಂಡು ನೋಡಿಕೊಳ್ಳುತ್ತಿದ್ದೇವೆ.
ಇದನ್ನೂ ಓದಿ: Rain News: ಮಳೆಗಾಗಿ ಮುಸ್ಲಿಮರಿಂದ ಕಣ್ಣೀರ ಪ್ರಾರ್ಥನೆ; ಇಂದು ಮಳೆಯಾಗದಿದ್ದರೆ ನಾಳೆಯೂ ಅಲ್ಲಾಗೆ ಮೊರೆ
ಪ್ರತಿ ವರ್ಷ ಬಕ್ರೀದ್ ಹಬ್ಬ ಸಮೀಪಿಸುವ ಮೂರು ದಿನದವರೆಗೂ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ಬಾರಿ ವಾರಕ್ಕೂ ಮೊದಲೆ ತೆರವುಗೊಳಿಸುವಂತೆ ಆದೇಶ ಬಂದಿದೆ. ಇದರಿಂದಾಗಿ ನಾವು ನಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಸ್ಥಳೀಯ ಶಾಸಕರು ಪೊಲೀಸ್ ಇಲಾಖೆಗೆ ಮನವರಿಕೆ ಮಾಡಿ ಜೂನ್ 26ರವರೆಗೆ ಮಾರಾಟಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ