ಶಿವಮೊಗ್ಗ: ಇಲ್ಲಿನ ಭದ್ರಾವತಿ ತಾಲೂಕಿನ ತಮ್ಮಡಿಹಳ್ಳಿ ಗ್ರಾಮದಲ್ಲಿ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಲ್ಲಿ ಅನಧಿಕೃತ ಪ್ರಾರ್ಥನಾ ಮಂದಿರವನ್ನು (Forced Conversion) ನಿರ್ಮಿಸಲಾಗಿದೆ. ವಸತಿ ಯೋಜನೆಯಲ್ಲಿ ಮಂಜೂರಾದ ಸ್ವತ್ತನ್ನು ಪ್ರಾರ್ಥನಾ ಮಂದಿರವಾಗಿ ಪರಿವರ್ತಿಸಿ, ಮತಾಂತರ ಆಗುವಂತೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ಆರೋಪಿಸಿದೆ.
ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಡಿ ಮತಾಂತರ ಮಾಡಲಾಗುತ್ತಿದೆ. ವಿನೋದ್ ಚಾಕು ಎಂಬಾತನ ನೇತೃತ್ವದಲ್ಲಿ ಕ್ರೈಸ್ತ ಜನಾಂಗದವರು ಇಲ್ಲದಿದ್ದರೂ ಸ್ಥಳೀಯ ಹಿಂದು ಜನರನ್ನು ಮತಾಂತರ ಮಾಡುವ ಉದ್ದೇಶದಿಂದಲೇ ಅನಧಿಕೃತವಾಗಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಲಾಗಿದೆ.
ಆ ಮೂಲಕ ಧ್ವನಿವರ್ಧಕದಲ್ಲಿ ಪ್ರಾರ್ಥನೆ ಸಲ್ಲಿಸುವುದು. ಮನೆ ಮನೆಗೆ ಭೇಟಿ ನೀಡಿ ಮತಾಂತರಕ್ಕೆ ಪ್ರಚೋದನೆ ನೀಡುವುದು. ಪ್ರಾರ್ಥನೆಗೆ ಬರದಿದ್ದರೆ ಬೆದರಿಕೆ ಹಾಕಿ ಗ್ರಾಮದಲ್ಲಿ ಶಾಂತಿಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿ
ಕಾನೂನುಬಾಹಿರವಾಗಿ ಅನಧಿಕೃತ ಚರ್ಚ್ ನಿರ್ಮಿಸಿ, ಮತೀಯ ಪ್ರಚೋದನೆಯಿಂದಾಗಿ ಗ್ರಾಮವು ಸೂಕ್ಷ್ಮ ಪ್ರದೇಶವಾಗಿ ಪರಿವರ್ತನೆ ಆಗುತ್ತಿದೆ. ಗಲಭೆಯಾಗುವ ಮುನ್ಸೂಚನೆ ಇದ್ದರೂ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ತಮ್ಮಡಿಹಳ್ಳಿ ಗ್ರಾಮದಲ್ಲಿ ಅನಧಿಕೃತ ಚರ್ಚ್ ನಿರ್ಮಾಣ ಮಾಡಿರುವುದರಿಂದ ಕೂಡಲೇ ತೆರವುಗೊಳಿಸಬೇಕು. ಚರ್ಚ್ ನಡೆಸಲು ಯಾವುದೇ ದಾಖಲಾತಿ ಪಡೆದಿಲ್ಲ. ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದ ಮನೆಯಲ್ಲಿ ನ್ಯೂ ಇಂಡಿಯಾ ಚರ್ಚ್ ಆಫ್ ಗಾಡ್ ಎಂಬ ಹೆಸರಿನಲ್ಲಿ ಪ್ರಾರ್ಥನಾ ಮಂದಿರ ನಡೆಸಲಾಗುತ್ತಿದೆ. ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ, ಸಿಇಓ, ಎಸ್‌ಪಿಗೆ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ