ಕಾರವಾರ: ಗಣೇಶ ಚತುರ್ಥಿ (Ganesh Chaturthi) ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನಿಟ್ಟು ಪೂಜೆ ಮಾಡುವುದು ಸಾಮಾನ್ಯ. ಈಗಾಗಲೇ ಚೌತಿ ಹಬ್ಬ ಮುಗಿದು ಐದಾರು ತಿಂಗಳುಗಳೇ ಕಳೆದಿವೆ. ಮತ್ತೆ ಹಬ್ಬ ಬರಬೇಕು ಅಂದರೆ ಸಾಕಷ್ಟು ತಿಂಗಳುಗಳು ಕಳೆಯಬೇಕು. ಆದರೆ ಕರಾವಳಿ ನಗರಿ ಕಾರವಾರದಲ್ಲಿ ಬುಧವಾರ (ಜ.೨೫) ಹಲವರ ಮನೆಗಳಲ್ಲಿ ಗಣಪತಿ ಮೂರ್ತಿಯನ್ನು ಸ್ಥಾಪಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಮಾಘ ಚತುರ್ಥಿ ಹಿನ್ನೆಲೆಯಲ್ಲಿ ಕಾರವಾರದವರು ಗಣೇಶ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಮಾಘ ಚೌತಿಯ ಹರಕೆ ಗಣಪ
ಗಣಪತಿ ಹುಟ್ಟಿದ ದಿನ ಎಂದೇ ಹೇಳಲಾಗುವ ಮಾಘ ಚೌತಿಯಂದು ಗಣೇಶ ಚತುರ್ಥಿ ಮಾದರಿಯಲ್ಲೇ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುವ ಸಂಪ್ರದಾಯ ಕಾರವಾರ ತಾಲೂಕಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಾಘ ಚೌತಿಯಂದು ಪ್ರತಿಷ್ಠಾಪಿಸುವ ಮೂರ್ತಿಯನ್ನು ಹರಕೆ ಗಣಪತಿ ಎಂದೂ ಹೇಳಲಾಗುತ್ತದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಹರಕೆ ಹೊತ್ತುಕೊಂಡವರು ಹಾಗೂ ಗಣೇಶ ಚತುರ್ಥಿಯ ಸಮಯದಲ್ಲಿ ನಾನಾ ಕಾರಣಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಸಾಧ್ಯವಾಗದಿರುವವರೂ ಮಾಘ ಚೌತಿಯಂದು ಒಂದು ದಿನದ ಮಟ್ಟಿಗೆ ಗಣಪನ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಜೊತೆಗೆ ಚತುರ್ಥಿ ವೇಳೆ ಪ್ರತಿ ವರ್ಷ ಸತತವಾಗಿ ಮೂರ್ತಿಯನ್ನಿಟ್ಟು ಪೂಜೆ ಮಾಡಲು ಸಾಧ್ಯವಾಗದವರು ಇಂದು ಮನೆ ಮನೆಗಳಲ್ಲಿ ಗಣಪತಿ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿ ಒಂದೇ ದಿನ ಇರಿಸಿ ರಾತ್ರಿ ವೇಳೆಗೆ ವಿಸರ್ಜನೆ ಮಾಡಲಾಗುತ್ತದೆ. ಈ ಮೂಲಕ ಮಾಘ ಚತುರ್ಥಿಯನ್ನೂ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಮಹಾರಾಷ್ಟ್ರ ಮೂಲದ ಸಂಸ್ಕೃತಿ
ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನ ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಸಂಪ್ರದಾಯ ಹೆಚ್ಚಾಗಿ ಮಹಾರಾಷ್ಟ್ರ, ಗೋವಾದಲ್ಲಿ ಆಚರಣೆಯಲ್ಲಿದೆ. ಕಾರವಾರ ಗೋವಾ ಗಡಿಯಾಗಿರುವುದರಿಂದ ಜೊತೆಗೆ ಮಹಾರಾಷ್ಟ್ರ ಸಂಸ್ಕೃತಿ ಸಹ ಇರುವ ಹಿನ್ನೆಲೆಯಲ್ಲಿ ಮಾಘ ಚೌತಿಯನ್ನು ಕಾರವಾರದಲ್ಲೂ ಆಚರಣೆ ಮಾಡಿಕೊಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾವ ತಾಲೂಕಿನಲ್ಲೂ ಅಷ್ಟಾಗಿ ಈ ಹಬ್ಬವನ್ನು ಆಚರಿಸುವುದಿಲ್ಲ.
ಹರಕೆ ಈಡೇರಿಸುವ ಮಾಘ ಗಣಪ
ಹಲವರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಮಾಘ ಚೌತಿಯಂದು ಗಣಪನ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಹರಕೆ ಹೊತ್ತುಕೊಳ್ಳುತ್ತಾರೆ. ಅದು ಈಡೇರಿದ ವೇಳೆ ಮಾಘ ಚೌತಿಯಂದು ಗಣಪತಿ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಹರಕೆಯನ್ನು ತೀರಿಸುವ ಪದ್ಧತಿ ನಡೆದುಕೊಂಡು ಬಂದಿದೆ. ಅಲ್ಲದೇ ಕೆಲವರು ಮಾಘ ಚತುರ್ಥಿಯಂದು ಸಾರ್ವಜನಿಕ ಮೂರ್ತಿಯನ್ನೂ ಪ್ರತಿಷ್ಠಾಪಿಸಿ, ಪೂಜಿಸಿ, ಸಂಜೆಯ ವೇಳೆಗೆ ವಿಸರ್ಜನೆ ಮಾಡುತ್ತಾರೆ.
ಇದನ್ನೂ ಓದಿ | KL Rahul Athiya Shetty: ಕೆ.ಎಲ್. ರಾಹುಲ್-ಅಥಿಯಾ ಶೆಟ್ಟಿ ಜೋಡಿಗೆ ಧೋನಿ-ಕೊಹ್ಲಿ ಕೊಟ್ಟ ಗಿಫ್ಟ್ ಏನು?
ಈಡೇರಿದ ಹರಕೆ
‘ಕಳೆದ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಚುನಾವಣೆ ವೇಳೆ ಗೆಲುವು ಸಾಧಿಸಿದಲ್ಲಿ ಮಾಘ ಚತುರ್ಥಿಗೆ ಮೂರ್ತಿ ಇರಿಸಿ ಪೂಜಿಸುವುದಾಗಿ ಹರಕೆ ಹೊತ್ತುಕೊಂಡಿದ್ದೆ. ಅದು ಈಡೇರಿದ ಹಿನ್ನೆಲೆಯಲ್ಲಿ ಈ ಬಾರಿ ಮಾಘ ಚೌತಿಗೆ ಗಣಪನನ್ನು ಪ್ರತಿಷ್ಠಾಪಿಸಿ ಮನೆಯವರೆಲ್ಲ ಸೇರಿ ಪೂಜೆ ಸಲ್ಲಿಸಿದ್ದೇವೆ. ಮಾಘ ಚೌತಿಗೆ ಹರಕೆ ಹೊತ್ತುಕೊಂಡಲ್ಲಿ ಅದು ಈಡೇರಿಯೇ ತೀರುತ್ತದೆ’ ಅಂತಾರೇ ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ್.
ವೈಯಕ್ತಿಕ ಇಷ್ಟಾರ್ಥ ಸಿದ್ಧಿಗಾಗಿ ಹರಕೆ
‘ಸ್ಥಳೀಯವಾಗಿ ಹೇಳಿಕೆ ಗಣಪತಿ ಎಂದು ಕರೆಯುವ, ಮಾಘ ಮಾಸದ ಗಣಪತಿ ಮೂರ್ತಿಯನ್ನು ಚತುರ್ಥಿಗೆ ಪೂಜಿಸುವಂತೆಯೇ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಸಲ್ಲಿಸಲಾಗುತ್ತದೆ. ವೈಯಕ್ತಿಕ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡಿದ್ದು, ಅದರಂತೆ ಇಂದು ಮನೆಯಲ್ಲಿ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದೇವೆ. ಒಂದು ದಿನ ಇರಿಸಿ ಸಂಜೆಯ ವೇಳೆಗೆ ಗಣಪನ ಮೂರ್ತಿಯನ್ನು ವಿಸರ್ಜಿಸುತ್ತೇವೆ. ಮನಃಶಾಂತಿಗಾಗಿ ಈ ಗಣಪನಲ್ಲಿ ಬೇಡಿಕೊಂಡರೆ, ಕೇಳಿದ್ದು ಈಡೇರಿಸುತ್ತಾನೆ’ ಅಂತಾರೇ ಮಾಘ ಚೌತಿ ಆಚರಣೆ ನೆರವೇರಿಸಿದ ಗೃಹಿಣಿ ದಿವ್ಯಾ ದೀಪಕ ರೇವಣಕರ್.
ಇದನ್ನೂ ಓದಿ | Karnataka Congress : ಡಾ. ಸುಧಾಕರ್ ಒಬ್ಬ ಪೆದ್ದ, ಅವನಿಗೆ ಸಿಎಜಿ ರಿಪೋರ್ಟ್ ಓದೋಕೆ ಬರಲ್ಲ: ಸಿದ್ದರಾಮಯ್ಯ ವಾಗ್ದಾಳಿ