ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ವಾಸ್ತವ್ಯಕ್ಕೆ ಹವ್ಯಕ ಸಮಾಜದ ವತಿಯಿಂದ ಗೋಕರ್ಣದ (Gokarna News) ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಆವರಣದಲ್ಲಿ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇವಾ ಸೌಧ ಸಮರ್ಪಣೆ ಸಮಾರಂಭದ ಅಂಗವಾಗಿ ಶ್ರೀಕರಾರ್ಚಿತ ಶ್ರೀ ರಾಮ ದೇವರ ಸನ್ನಿಧಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಗುರುವಾರ (ಜ. 26) ಅಭೂತಪೂರ್ವವಾಗಿ ನಡೆಯಿತು.
ಶ್ರೀರಾಮ ದೇವರ ಪ್ರೀತ್ಯರ್ಥ ರಾಮ ಮೂಲಮಂತ್ರ ಹವನ, ಶ್ರೀರಾಮ ದೇವರಿಗೆ ಸಾಮ್ರಾಜ್ಯ ಪಟ್ಟಾಭಿಷೇಕ ಮತ್ತು ನಾಗದೇವರ ಪ್ರತಿಷ್ಠೆಯೂ ನಡೆಯಿತು. ಸಿಮೆಂಟ್, ಇಟ್ಟಿಗೆ ಬಳಸದೆ ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭ ಶನಿವಾರ (ಜ.೨೮) ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ೧೫ ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಇದನ್ನೂ ಓದಿ | Yogi Government : ಅಕ್ಕ-ತಂಗಿಯರಲ್ಲಿ ಒಬ್ಬರ ಶಾಲೆಯ ಶುಲ್ಕವನ್ನು ಭರಿಸಲು ಮುಂದಾದ ಯೋಗಿ ಸರ್ಕಾರ
ಜ.27ರಂದು ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಷ್ಟೋತ್ತರ ಶತ ವಿಶೇಷ ದ್ರವ್ಯಗಳಿಂದ ಅಭಿಷೇಕ ಸೇವೆ ಮತ್ತು ಸಾಂಪ್ರದಾಯಿಕ ಪಾಕ ವೈಭವ ನಡೆಯಲಿದೆ. ಹವ್ಯಕ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ವಿಶಿಷ್ಟ ಭಕ್ಷ್ಯ ಭೋಜ್ಯಗಳ ಪ್ರದರ್ಶನ ಮತ್ತು ಮಾರಾಟದ ವಿಶಿಷ್ಟ ಆಹಾರೋತ್ಸವ ಗುರುವಾರ (ಜ.೨೬) ಆಯೋಜಿಸಲಾಗಿತ್ತು.
ಜ.28ರಂದು ಶ್ರೀ ರಾಜರಾಜೇಶ್ವರಿ ದೇವರ ಅನುಗ್ರಹಕ್ಕಾಗಿ ಶ್ರೀಚಕ್ರ ಪೂಜೆ, ಸೇವಾಸೌಧ ಸಮರ್ಪಣೆ ಗಣ್ಯಾತಿಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ. ಋಷಿ ಯುಗ ಮತ್ತು ನವ ಯುಗ ಶಿಕ್ಷಣವನ್ನು ಗುರುಕುಲ ಪದ್ಧತಿಯಲ್ಲಿ ಆರಂಭವಾಗಿರುವ ದೇಶದ ಏಕೈಕ ಸಂಸ್ಥೆ ಎನಿಸಿದ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸಂಕಲ್ಪಿಸಿ ತಮ್ಮ ಕರ್ತೃತ್ವ ಶಕ್ತಿಯಿಂದ ಅದನ್ನು ಸಾಕಾರಗೊಳಿಸಿದ ವಿವಿವಿ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ವಸತಿ ಹಾಗೂ ಶ್ರೀಕರಾರ್ಚಿತ ಪೂಜಾ ಕೈಂಕರ್ಯಕ್ಕಾಗಿ ನಿರ್ಮಾಣಗೊಂಡ ಭವ್ಯ ಮಂದಿರ ‘ಸೇವಾ ಸೌಧ’ವನ್ನು ಜ.28ರಂದು ಶ್ರೀಗಳಿಗೆ ಸಮರ್ಪಿಸಲಾಗುತ್ತದೆ.
ಇದನ್ನೂ ಓದಿ | iNCOVACC Vaccine: ಮೂಗಿನ ಮೂಲಕ ತೆಗೆದುಕೊಳ್ಳುವ ಇನ್‌ಕೊವಾಕ್ ವ್ಯಾಕ್ಸೀನ್ ಬಿಡುಗಡೆ
ಶ್ರೀಮಠದ ಸೇವಾ ಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಶೋಭಿಸುವ ಈ ಭವ್ಯ ಮಂದಿರವನ್ನು ಸಮರ್ಪಿಸುವ ಸಮಾರಂಭದಲ್ಲಿ ರಾಜ್ಯ ಮಟ್ಟದ ಅನೇಕ ನಾಯಕರು ಹಾಗೂ ಆಧ್ಯಾತ್ಮಕ ಸಾಧಕರು ಭಾಗವಹಿಸುವರು. ಕಾರ್ಯಕ್ರಮದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲ ಸಮಿತಿಗಳು ಕಾರ್ಯೋನ್ಮುಖವಾಗಿವೆ.
ಇದನ್ನೂ ಓದಿ | KPSC Recruitment : ಅಸಿಸ್ಟೆಂಟ್ ಎಂಜಿನಿಯರ್ ನೇಮಕ; ಅಂತಿಮ ಆಯ್ಕೆ ಪಟ್ಟಿ ಪ್ರಕಟ