Site icon Vistara News

Gokarna News: ಭಾರತೀಯ ವಾಸ್ತುಶಿಲ್ಪ ವಿನ್ಯಾಸದಿಂದ ಕಂಗೊಳಿಸುತ್ತಿರುವ ವಿಶಿಷ್ಟ ‘ಸೇವಾ ಸೌಧ’ ಸಮರ್ಪಣಾ ಸಮಾರಂಭಕ್ಕೆ ಸಿದ್ಧ

Raghaveshvara Bharati swamiji gokarna

ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರ ದೇವತೋಪಾಸನೆ, ತಪಸ್ಸು, ಸಚ್ಚಿಂತನೆ, ಕಾರ್ಯಾನ್ವಯದ ಉದ್ದೇಶದಿಂದ ಶಿಷ್ಯ ಭಕ್ತರು ಸುಮಾರು ಐದು ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಶೋಕೆಯಲ್ಲಿ (Gokarna News) ನಿರ್ಮಿಸಿರುವ ವಿಶಿಷ್ಟ ‘ಸೇವಾ ಸೌಧ’ ಸಮರ್ಪಣಾ ಸಮಾರಂಭ ಶನಿವಾರ (ಜ. 28) ನಡೆಯಲಿದೆ.

ಸ್ವಸ್ಥ ಮತ್ತು ಸಮರ್ಥ ಜಗತ್ತಿನ ನಿರ್ಮಾಣಕ್ಕೆ ಸುಯೋಗ್ಯ ಶಿಕ್ಷಣದ ಅಗತ್ಯವನ್ನು ಪರಿಕಲ್ಪಿಸಿ, ಭಾರತದ ಪ್ರಾಚೀನ ಶಿಕ್ಷಣ ವಿನ್ಯಾಸ ಹಾಗೂ ಶಿಕ್ಷಣ ಕ್ರಮಕ್ಕೆ ಕಾಯಕಲ್ಪ ಒದಗಿಸಬೇಕು ಎಂಬ ಮಹದಾಶಯದೊಂದಿಗೆ ಪರಮ ಪೂಜ್ಯರು ಅನುಷ್ಠಾನಗೊಳಿಸುತ್ತಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುಲಾಧಿಪತಿಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ವಸತಿಗಾಗಿ ಈ ವಿಶಿಷ್ಟ ಭವನ ನಿರ್ಮಿಸಲಾಗಿದೆ.

ಇದರ ಅಂಗವಾಗಿ ಮೂರು ದಿನಗಳಿಂದ ನಡೆಯುತ್ತಿರುವ ವೈವಿಧ್ಯಮಯ ಕಾರ್ಯಕ್ರಮಗಳು ಜ.೨೮ ರಂದು ಸಂಪನ್ನಗೊಳ್ಳಲಿವೆ. ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮರ್ಪಣಾ ಸಮಾರಂಭದಲ್ಲಿ ಕೊಯಮತ್ತೂರಿನ ಶ್ರೀಚಂದ್ರಶೇಖರ ಭಾರತೀ ಚಂದ್ರಶೇಖರ ಸರಸ್ವತಿ ವೇದಪಾಠ ಶಾಲೆಯ ಮುಖ್ಯಸ್ಥರಾದ ವೇದಬ್ರಹ್ಮ ಶ್ರೀ ಜಂಬೂನಾಥ ಘನಪಾಠಿಗಳು, ತಿರುವನಂತಪುರಂ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ನಾರಾಯಣ ಪಟ್ಟೇರಿ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಟಿಟಿಡಿ ಮಂಡಳಿಯ ಅಧ್ಯಕ್ಷ ವೈ,ವಿ.ಸುಬ್ಬಾರೆಡ್ಡಿ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸುವರು ಎಂದು ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ವಿವರ ನೀಡಿದ್ದಾರೆ.

ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತ ಕುಮಾರ್ ಹೆಗಡೆ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್, ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ ಮತ್ತಿತರ ಗಣ್ಯರು ಈ ಅಪೂರ್ವ ಸಮಾರಂಭಕ್ಕೆ ಸಾಕ್ಷಿಗಳಾಗಲಿದ್ದಾರೆ.

ವಿಶಿಷ್ಟ ಭವನ

ಸಂಪೂರ್ಣ ಸಾಂಪ್ರದಾಯಿಕ ಶೈಲಿಯಲ್ಲಿ ಸಿಮೆಂಟ್, ಇಟ್ಟಿಗೆ ಬಳಸದೇ ವಿಶಿಷ್ಟವಾಗಿ ನಿರ್ಮಿಸಿದ ಈ ಭವ್ಯ ಭವನದ ಸಮರ್ಪಣಾ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಶ್ರೀಮಠದ ಸೇವಾ ಬಿಂದುಗಳ ಸಮರ್ಪಣೆಯಲ್ಲಿ ನಿರ್ಮಾಣಗೊಂಡ ಭಾರತೀಯ ವಾಸ್ತುಶಿಲ್ಪ ವಿನ್ಯಾಸಗಳಲ್ಲಿ ಕಂಗೊಳಿಸುವ ಆವರಣವನ್ನು ಆಮೂಲಾಗ್ರವಾಗಿ ಅಲಂಕರಿಸಲಿರುವ ಭಾರತೀಯ ಮೂಲದ ಗಿಡ-ಮರ-ಬಳ್ಳಿಗಳಿಂದ ಈ ಭವ್ಯ ಮಂದಿರ ಶೋಭಿಸುತ್ತಿದೆ.

ಪಾಕ ವೈಭವ

ಈ ಭವ್ಯ ಕಾರ್ಯಕ್ರಮಕ್ಕಾಗಿ ಮಾಣಿ ಪೆರಾಜೆ ಶ್ರೀ ರಾಮಚಂದ್ರಾಪುರ ಮಠದಿಂದ ಆಗಮಿಸಿದ 15 ಕ್ವಿಂಟಾಲ್ ಅಕ್ಕಿ, 2000 ತೆಂಗಿನಕಾಯಿ, 18 ಚೀಲ ಚೀನಿಕಾಯಿ, 12 ಚೀಲ ಕುಂಬಳಕಾಯಿ, 2 ಚೀಲ ಆಲೂಗಡ್ಡೆ, 2 ಚೀಲ ಬೀನ್ಸ್ ಸೇರಿದಂತೆ ಸುವಸ್ತುಗಳನ್ನೊಳಗೊಂಡ ಹಸಿರುವಾಣಿ ಹೊರೆಕಾಣಿಕೆಯನ್ನು ಈ ಸಂದರ್ಭದಲ್ಲಿ ಸಮರ್ಪಿಸಲಾಯಿತು. ಇದರ ಅಂಗವಾಗಿ ಕ್ಷೇತ್ರದ ಅಧಿದೇವತೆ ಶ್ರೀ ಚಂದ್ರಮೌಳೀಶ್ವರ ದೇವರಿಗೆ ಅಷ್ಟೋತ್ತರ ಶತ ವಿಶೇಷ ದ್ರವ್ಯಗಳಿಂದ ಅಭಿಷೇಕ ಸೇವೆ ಮತ್ತು ಸಾಂಪ್ರದಾಯಿಕ ಪಾಕ ವೈಭವವನ್ನು ಶುಕ್ರವಾರ (ಜ.೨೭) ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ | Taraka Ratna: ʻಯುವ ಧ್ವನಿʼ ಪಾದಯಾತ್ರೆ ವೇಳೆ ಕುಸಿದು ಬಿದ್ದ ನಟ ನಂದಮೂರಿ ತಾರಕ ರತ್ನ; ಆಸ್ಪತ್ರೆಗೆ ದಾಖಲು

ತೊಡದೇವು, ಮಜ್ಜಿಗೆ ದೋಸೆ, ವಡೆ, ಬಜೆ/ಪೋಡಿ, ದೇಸಿ ಹಾಲಿನ ಕುಲ್ಫಿ, ಚಕ್ಕುಲಿ, ಚಾಟ್ಸ್, ಕರ್ಜಿಕಾಯಿ, ಬಾಳ್ಕ, ಉಪ್ಪುಸೊಳೆ ರೊಟ್ಟಿ, ಬಾಳೆಹಣ್ಣು ಒತ್ತು ಶ್ಯಾವಿಗೆ, ಕೊಟ್ಟೆ ಕಡುಬು, ವಡಪೆ, ಅಕ್ಕಿ ಒತ್ತು ಶ್ಯಾವಿಗೆ, ಉಂಡೆಗಳು, ಚಿಪ್ಸ್, ಬಾಳೆಹಣ್ಣಿನ ಹಲ್ವ, ಹಪ್ಪಳ, ಅಕ್ಕಿವಡೆ, ಓಡುಪ್ಪಾಳೆ, ಗೆಣಸಾಲೆ, ಹೋಳಿಗೆ ಪತ್ರೋಡೆ, ಅತ್ರಾಸ, ಉಂಡ್ಲಕಾಳು, ತೆಂಗೊಳಲು, ಉಸುಲಿ, ಕೋಸುಂಬರಿ, ಹವ್ಯಕ ಪೇಯಗಳಾದ ಅಪ್ಪೆಹುಳಿ, ಬಾಳೆದಿಂಡು ಸೂಪ್ ಮತ್ತಿತರ ತಿಂಡಿ ತಿನಿಸುಗಳ ಪ್ರಾತ್ಯಕ್ಷಿಕೆ ಮತ್ತು ಮಾರಾಟ ಮೇಳದಲ್ಲಿ ಸಾವಿರಾರು ಜನರು ಪಾಲ್ಗೊಂಡರು. ಕೈಮಗ್ಗ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟವೂ ನಡೆಯಿತು.

ಹವ್ಯಕ ಸಂಸ್ಕೃತಿಯ ಅವಿಭಾಜ್ಯ ಅಂಗವಾದ ವಿಶಿಷ್ಟ ಭಕ್ಷ್ಯ ಭೋಜ್ಯಗಳ ಪ್ರದರ್ಶನ ಮತ್ತು ಮಾರಾಟದ ವಿಶಿಷ್ಟ ಆಹಾರೋತ್ಸವ ಜನಮನ ಸೂರೆಗೊಂಡಿತು. ಹವ್ಯಕ ಪಾಕಶೈಲಿಯಲ್ಲಿ ವಿಶಿಷ್ಟಾತಿವಿಶಿಷ್ಟ ಹಾಗೂ ಅಪರೂಪದ ತಿನಿಸುಗಳನ್ನು ಸಾರ್ವಜನಿಕರು ಆಸ್ವಾದಿಸಿದರು.

ಇದನ್ನೂ ಓದಿ | INDvsNZ T20 : ಟಾಸ್​ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್​ ಆಯ್ಕೆ

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ

ಅಗಸ್ತ್ಯರಿಂದ ಪೂಜಿತವಾದ, ವರದ ಮುನಿಗಳು ನೀಡಿದ ಅಶೋಕೆಯಲ್ಲಿ ಶ್ರೀ ಶಂಕರಾಚಾರ್ಯರಿಂದ ಅನುಗ್ರಹಿಸಲ್ಪಟ್ಟ, ವೀರಪರಂಪರೆಯ ಎಲ್ಲ ಪೀಠಾಧಿಪತಿಗಳಿಂದ ಪ್ರತಿ ದಿನ ಸೇವೆ ಸ್ವೀಕರಿಸುತ್ತಿರುವ ಶ್ರೀರಾಮ ದೇವರಿಗೆ ಅಶೋಕೆಯಲ್ಲಿ ಪ್ರಥಮ ಬಾರಿಗೆ ಸಾಮ್ರಾಜ್ಯ ಪಟ್ಟಾಭಿಷೇಕವನ್ನೂ ನೆರವೇರಿಸಲಾಯಿತು. ಶ್ರೀಕರಾರ್ಚಿತ ಶ್ರೀಚಂದ್ರಮೌಳೀಶ್ವರ ದೇವರಿಗೆ 56 ಭಕ್ಷ್ಯಗಳ ನೈವೇದ್ಯ ಮತ್ತು 108 ದ್ರವ್ಯಗಳಿಂದ ವಿಶೇಷ ಅಭಿಷೇಕ ನೆರವೇರಿತು.

ನಾಲ್ಕು ಗಿನ್ನಿಸ್ ದಾಖಲೆಗಳ ವೀರ, ಮೃದಂಗ ಮಾಂತ್ರಿಕ ಡಾ.ಕುನ್ನಂಕುಳಂ ಡಾ.ರಾಮಕೃಷ್ಣನ್ ಮತ್ತು ಯೋಗೀಶ್ ಶರ್ಮಾ ಅವರ ಸಂಗೀತ ಕಾರ್ಯಕ್ರಮವೂ ಇರಲಿದೆ. ಅನೂಪ್ (ವಯಲಿನ್), ಗೋವಿಂದ ಪ್ರಸಾದ್, ಉಣ್ಣಿಕೃಷ್ಣನ್ ಕಾಸರಗೋಡು ಜಿಲ್ಲೆ ಪೆರಿಯಾ ನಾಗರತ್ನ ಹೆಬ್ಬಾರ್ ಮತ್ತು ತಂಡದಿಂದ ಭಜನಾ ಕಾರ್ಯಕ್ರಮ, ಕುಮಾರಿ ರಚಿತಾ ತಂಡದಿಂದ ಭರತನಾಟ್ಯ ವೈಭವ ನಡೆಯಲಿದೆ.

ಇದನ್ನೂ ಓದಿ | 2A Reservation: ನಮ್ಮಿಂದ ಕಿತ್ತುಕೊಂಡ 2ಎ ಮೀಸಲಾತಿಯನ್ನು ನಮಗೆ ಮತ್ತೆ ಮರಳಿಸಿ; ಬಲಿಜ ಸಂಕಲ್ಪ ಸಭೆಯಲ್ಲಿ ಹಕ್ಕೊತ್ತಾಯ

Exit mobile version