Site icon Vistara News

Grama Devi Jatre: ಶ್ರೀ ಗ್ರಾಮ ದೇವಿ ಜಾತ್ರೆಯ ನಿಮಿತ್ತ ಆಚರಿಸಲಾಗುವ ಮೂರು ಹೊರ ಮಂಗಳವಾರ ಸಂಪನ್ನ

Grama Devi Jatre yallapura

#image_title

ಯಲ್ಲಾಪುರ: ಯಲ್ಲಾಪುರದ ಶ್ರೀ ಗ್ರಾಮ ದೇವಿ ಜಾತ್ರೆಯು (Grama Devi Jatre) ಫೆ. ೨೨ರಿಂದ ಆರಂಭವಾಗಲಿದ್ದು, ಈ ನಿಮಿತ್ತ ಆಚರಿಸಲಾಗುವ ಮೂರು ಹೊರ ಮಂಗಳವಾರ (ಹೊರ ಬೀಡು) ಇಂದಿಗೆ (ಫೆ.೧೪) ಯಶಸ್ವಿಯಾಗಿ ಸಂಪನ್ನಗೊಂಡಿತು.

ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವ ರಾಜ್ಯದ ಅತಿ ದೊಡ್ಡ ಜಾತ್ರೆಗಳ ಪೈಕಿ ಒಂದಾದ ಶ್ರೀ ಗ್ರಾಮ ದೇವಿ ಜಾತ್ರೆ ಪ್ರಾರಂಭವಾಗುವ ಮುನ್ನ ಮೂರು ಮಂಗಳವಾರ ಹೊರಬೀಡು ಎಂಬ ಪದ್ಧತಿಯನ್ನು ಆಚರಿಸಲಾಗುತ್ತದೆ. ಪಟ್ಟಣದ ಜನರು ಮನೆಯಿಂದ ಬುತ್ತಿ ತೆಗೆದುಕೊಂಡು ತಮ್ಮ ಕುಟುಂಬ ಸಮೇತ ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪.೩೦ ರವರೆಗೆ ಮನೆಯಿಂದ ಹೊರಗುಳಿದು ಸಮೀಪದ ಉದ್ಯಾನವನ, ಹೊಲ, ತೋಟ, ಜಲಪಾತ, ನಿಸರ್ಗ ತಾಣಗಳಲ್ಲಿ ಬೀಡು ಬಿಟ್ಟು ಅಲ್ಲಿಯೇ ಊಟ ಮಾಡಿ ವಿಶ್ರಾಂತಿ ಪಡೆದು ಸಂಜೆ ಮನೆಗೆ ಹಿಂದಿರುಗುತ್ತಾರೆ. ಪಟ್ಟಣದ ಐಬಿ ಉದ್ಯಾನವನ, ಎಪಿಎಂಸಿ ಬಳಿಯ ಅರಣ್ಯ ಇಲಾಖೆಯ ಸಸ್ಯೋದ್ಯಾನಗಳಲ್ಲಿ ಹೊರ ಮಂಗಳವಾರ ಆಚರಿಸಲು ಬರುವ ಜನರಿಗಾಗಿ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು.

ಇದನ್ನೂ ಓದಿ: Amit Shah: ನಮ್ಮ ಬಗ್ಗೆ ಹೇಳೋಕೆ ಅಮಿತ್‌ ಶಾ ಅವರಿಗೆ ಏನೂ ಇಲ್ಲ: ಕುಟುಂಬ ರಾಜಕಾರಣ ಕುರಿತು ಎಚ್‌.ಡಿ. ರೇವಣ್ಣ ತಿರುಗೇಟು

ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ ಉದ್ಯಾನವನಗಳಲ್ಲಿ ಕಾಲ ಕಳೆದರು. ಈ ವೇಳೆ ಮೋಜಿನಾಟ, ಹರಟೆ ಹೊಡೆದರು. ಕೆಲ ಜನರು ತಾಲೂಕಿನ ಕವಡಿಕೇರಿ, ಚಂದಗುಳಿ, ಮಾಗೋಡು, ಸಾತೊಡ್ಡಿ ಜಲಪಾತಗಳಿಗೆ ತೆರಳಿದ್ದರಿಂದ ಅಲ್ಲಿಯೂ ಹೆಚ್ಚಿನ ಜನಸಂದಣಿ ಕಂಡು ಬಂದಿತು. ಯಲ್ಲಾಪುರ ಪಟ್ಟಣದಲ್ಲಿ ಶಾಲೆ ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್‌ಗಳನ್ನು ಹೊರತುಪಡಿಸಿ ದೇವಸ್ಥಾನಗಳು, ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಪಟ್ಟಣದೊಳಗೆ ಜನ ಸಂಚಾರ ವಿರಳವಾಗಿತ್ತು. ಪಟ್ಣಣವಲ್ಲದೆ ಸುತ್ತಮುತ್ತಲಿನ ಕೆಲ ಗ್ರಾಮಸ್ಥರು, ಅನ್ಯ ಧರ್ಮೀಯರೂ ಈ ಪದ್ಧತಿಯನ್ನು ಪಾಲಿಸುವುದು ವಿಶೇಷ. ಒಟ್ಟಿನಲ್ಲಿ ಜಾತಿ ಮತ ಭೇದವಿಲ್ಲದೆ ಹೊರ ಮಂಗಳವಾರವನ್ನು ಶ್ರದ್ಧೆಯಿಂದ ಆಚರಿಸಿದರು.

ಏನಿದು ಹೊರ ಮಂಗಳವಾರ?

ಜಾತ್ರೆಯ ಆರಂಭಕ್ಕೂ ಮುನ್ನ ಪಾಲಿಸಲಾಗುವ ಪ್ರಮುಖ ಸಂಪ್ರದಾಯವೇ ಹೊರ ಮಂಗಳವಾರ ಅಥವಾ ಹೊರಬೀಡು. ಜಾತ್ರೆಯ ಮುನ್ನ 3 ಅಥವಾ 5 ಮಂಗಳವಾರವನ್ನು ಹೊರ ಮಂಗಳವಾರವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಜನರು ಬೆಳಗ್ಗೆಯೇ ಮನೆಗೆ ಒಮ್ಮೆ ಬೀಗವನ್ನು ಹಾಕಿದರೆ ಮತ್ತೆ ಸಂಜೆಯವರೆಗೆ ಅದನ್ನು ಯಾವುದೇ ಕಾರಣಗಳಿಗೂ ತೆರೆಯುವಂತಿಲ್ಲ.

ಇದನ್ನೂ ಓದಿ: Amit Shah: ಮೋದಿ ವಿರುದ್ಧ ರಾಹುಲ್‌ ಗಾಂಧಿ ಸಮರ್ಥ ಪ್ರಧಾನಿ ಅಭ್ಯರ್ಥಿಯೇ? ಅಮಿತ್‌ ಶಾ ಉತ್ತರ ಏನು?

ಇಲ್ಲಿನ ಜನ ಭಯ ಭಕ್ತಿಯಿಂದ ಈ ಪದ್ಧತಿಯನ್ನು ಪಾಲಿಸುತ್ತಾರೆ. ಜಾತ್ರೆಗೆ ಮುನ್ನ ಮಡಿವಂತಿಕೆಯಿಂದ ದೇವಿಗೆ ಶ್ರೇಷ್ಠತೆ ಸೂಚಿಸಲು ಪ್ರಕಟಿಸಿದ ಮಂಗಳವಾರಗಳಂದು ಬೆಳಗ್ಗೆಯೇ ದೇವಿಯ ಹೆಸರಿನಲ್ಲಿ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ ಅರಿಶಿಣ ಕುಂಕುಮ ನೈವೇದ್ಯ ಇಟ್ಟು ಹೊರ ತೆರಳುತ್ತಾರೆ. ನಂತರ ಸಂಜೆ ದೇವಸ್ಥಾನದ ಬಾಗಿಲು ತೆರೆದ ಮೇಲೆ ಎಲ್ಲರೂ ತಮ್ಮ ತಮ್ಮ ಮನೆಯ ಒಳಗೆ ಹೋಗುತ್ತಾರೆ.

ಇದನ್ನೂ ಓದಿ: SSLC Exam 2023 : ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಬದಲಾವಣೆ; ಈ ಬಾರಿ ರಾಜ್ಯ ಮಟ್ಟದಲ್ಲಿ ಸಿದ್ಧವಾಗಲಿದೆ ಪ್ರಶ್ನೆ ಪತ್ರಿಕೆ

ಈ ಹೊರ ಮಂಗಳವಾರ ಆಚರಣೆಯ ಮುಖ್ಯ ಉದ್ದೇಶ ಶ್ರೀ ದೇವಿಯು ಜಾತ್ರೆ ನಡೆಯುವ ಮುನ್ನ ತಮ್ಮ ಕಲ್ಯಾಣ ಉತ್ಸವದ ಮುಂಚೆ ಎಲ್ಲರ ಮನೆಗಳಿಗೆ ಭೇಟಿ ನೀಡಿ ಅರಿಶಿನ ಕುಂಕುಮವನ್ನು ಸ್ವೀಕರಿಸುತ್ತಾರೆ ಎಂಬ ನಂಬಿಕೆ. ಅಚ್ಚರಿಯ ಸಂಗತಿಯೆಂದರೆ ಈ ಆಚರಣೆ ನಿರ್ಲಕ್ಷಿಸಿದ ಹಲವು ಕುಟುಂಬಗಳಲ್ಲಿ ಕಷ್ಟಕಾರ್ಪಣ್ಯ ಕಾಣಸಿಕೊಂಡಿರುವ ಜೀವಂತ ನಿದರ್ಶನಗಳು ಇವೆ. ಜಾತ್ರೆ ಹಾಗೂ ಹೊರ ಮಂಗಳವಾರಗಳ ಆಚರಣೆಯ ದಿನಾಂಕಗಳನ್ನು ದೇವಸ್ಥಾನದ ಟ್ರಸ್ಟ್ ಕಮಿಟಿಯವರು ಪುರೋಹಿತರ ಸಲಹೆ ಮೇರೆಗೆ ತಿಂಗಳ ಮುಂಚಿತವಾಗಿ ಶ್ರೀ ದೇವಿಯರ ಅಪ್ಪಣೆ ಪಡೆದು ನಿರ್ಧರಿಸುತ್ತಾರೆ.

Exit mobile version