ವಿಜಯಕುಮಾರ ನಾಯ್ಕ, ಯಲ್ಲಾಪುರ
ಯಲ್ಲಾಪುರ ಜಾತ್ರೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಪಟ್ಟಣವನ್ನು ಮಧುಮಗಳಂತೆ ಶೃಂಗರಿಸಲಾಗಿದೆ. ಜಾತ್ರೆಯ ಸಿದ್ಧತೆಗಳನ್ನು (Preparations for the Jatre) ಅದ್ಧೂರಿಯಿಂದ ಮಾಡಿಕೊಳ್ಳಲಾಗುತ್ತಿದೆ.
೫ ವರ್ಷಗಳ ನಂತರ ಯಲ್ಲಾಪುರ ಶ್ರೀ ಗ್ರಾಮ ದೇವಿಯ ಜಾತ್ರೆ ನಡೆಯುತ್ತಿದೆ. ಅದ್ಧೂರಿಯಾಗಿ ಜಾತ್ರೆಯನ್ನು ಆಚರಿಸಲು ಯಲ್ಲಾಪುರದ ಜನತೆ ಸಿದ್ಧರಾಗಿದ್ದಾರೆ. ಬುಧವಾರ (ಫೆ.೨೨) ಮಧ್ಯಾಹ್ನ ೩.೩೦ ಸುಮಾರಿಗೆ ಶ್ರೀದೇವಿಯರ ಮೆರವಣಿಗೆ ಆರಂಭವಾಗಲಿದ್ದು, ಲಕ್ಷಾಂತರ ಭಕ್ತಾದಿಗಳ ಆಗಮನದ ನಿರೀಕ್ಷೆಯಿದೆ. ಸಂಜೆಯೊಳಗಾಗಿ ಶ್ರೀದೇವಿಯರು ಗದ್ದುಗೆಯಲ್ಲಿ ವಿರಾಜಮಾನರಾಗಲಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ದೇವಿ ಮೈದಾನದಲ್ಲಿ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಜಾತ್ರಾ ಮಂಟಪವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತಂಡವೊಂದು ಹಂಪಿಯ ಕಲ್ಲಿನ ಮಂಟಪದ ಮಾದರಿಯಲ್ಲಿ ಅದ್ಧೂರಿಯಾಗಿ ಸಿದ್ಧಪಡಿಸುತ್ತಿದ್ದಾರೆ. ಜಾತ್ರಾ ಸಮಯದಲ್ಲಿ ಮಳೆಯಾಗುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಜಾತ್ರಾ ಮಂಟಪವನ್ನು ನಿರ್ಮಿಸಲಾಗಿದೆ. ಮಂಟಪದಲ್ಲಿ ಆಗುಹೋಗುಗಳನ್ನು ಗಮನಿಸಲು ೨೯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ವೈಟಿಎಸ್‌ಎಸ್ ಮೈದಾನ, ಮಾದರಿ ಶಾಲೆಯ ಮೈದಾನ ಹಾಗೂ ಗದ್ದುಗೆಯ ಮುಂಭಾಗದಲ್ಲಿ ನಾನಾ ರೀತಿಯ ಅಮ್ಯೂಸ್‌ಮೆಂಟ್ ಪಾರ್ಕ್ ಬಂದಿದ್ದು, ಈಗಾಗಲೇ ತೊಟ್ಟಿಲು, ಟೊರಾ-ಟೊರಾ, ಕೊಲಂಬಸ್, ಬ್ರೇಕ್ ಡಾನ್ಸ್ ಸೇರಿದಂತೆ ಬಹುತೇಕ ಎಲ್ಲ ಆಟಗಳನ್ನು ಜೋಡಿಸಲಾಗಿದೆ. ಈ ಬಾರಿ ವಿಶೇಷವಾಗಿ ರೇಂಜರ್ ಎನ್ನುವ ಮನರಂಜನಾ ಸಾಧನ ಬಂದಿದ್ದು, ೧೦೦ ಮೀ. ಎತ್ತರಕ್ಕೆ ಜನರನ್ನು ಕೊಂಡೊಯ್ಯಲಿದೆ. ವೈಟಿಎಸ್‌ಎಸ್ ಮೈದಾನದಲ್ಲಿ ʼದುಬೈ ಸಿಟಿʼ ವಿಶೇಷ ಆಕರ್ಷಣೆಯಾಗಲಿದೆ. ಪ್ರವೇಶಕ್ಕೆ ೩೦ ರೂ. ಪಾವತಿಸಿ ಜಗತ್ತಿನ ಅತ್ಯದ್ಭುತ ಕಟ್ಟಡಗಳಾದ ಬುರ್ಜ್ ಖಲೀಫಾ, ಲಂಡನ್ ಬ್ರಿಡ್ಜ್, ಟ್ವಿನ್ ಟವರ್ ಸೇರಿದಂತೆ ಇನ್ನಿತರ ಪ್ರತಿಕೃತಿಗಳನ್ನು ಹಾಗೂ ಇಂಡಿಯಾ @೨೦೪೫ ಎನ್ನುವ ಪರಿಕಲ್ಪನೆಯ ಮಾದರಿಯನ್ನು ಸಹ ನೋಡಬಹುದಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೈದಾನವನ್ನು ಗುತ್ತಿಗೆ ಪಡೆದ ಉದ್ಯಮಿ ಬಾಲು ನಾಯ್ಕ, “ಈ ಬಾರಿ ಜಾತ್ರೆಯನ್ನು ವಿಜೃಂಭಣೆಯಿಂದ ಹಾಗೂ ವಿಶೇಷವಾಗಿ ಆಚರಿಸಲು ಯೋಚಿಸಿದ್ದೇವೆ. ಹೀಗಾಗಿ ವಿಭಿನ್ನ ಆಟಗಳನ್ನು ಆಯ್ದು ತರಲಾಗಿದೆ. ಅಂತೆಯೇ ನಮ್ಮೂರಿನ ಜನರೆಲ್ಲರೂ ಕಡಿಮೆ ಮೊತ್ತದಲ್ಲಿ ವಿದೇಶದ ಅದ್ಭುತ ಕಟ್ಟಡಗಳನ್ನು ನೋಡಲೆಂದು ದುಬೈ ಸಿಟಿ ನಿರ್ಮಿಸಲಾಗಿದೆ. ನಮ್ಮೂರ ಜಾತ್ರೆಗೆ ನಮ್ಮ ಕೈಲಾದಷ್ಟು ಸಹಾಯ ಸಹಕಾರ ನೀಡಿದ್ದೇವೆ. ಜನರ ಸಹಕಾರದೊಂದಿಗೆ ಇನ್ನಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು” ಎಂದು ಹೇಳಿದರು.
ಇದನ್ನೂ ಓದಿ: Sindhuri Vs Roopa: ರೋಹಿಣಿ-ರೂಪಾ ಇಬ್ಬರಿಗೂ ಜಾಗ ತೋರಿಸದೇ ಎತ್ತಂಗಡಿ: ರೂಪಾ ಪತಿ ಮೌನೀಶ್ ಮೌದ್ಗಿಲ್ ಸಹ ವರ್ಗಾವಣೆ
“ವೈಟಿಎಸ್‌ಎಸ್ ಮೈದಾನದ ಪ್ರವೇಶ ಉಚಿತವಾಗಿದೆ. ದುಬೈ ಸಿಟಿ ನೋಡಲು ೩೦ ರೂ. ಪ್ರವೇಶ ಶುಲ್ಕ ಇರಲಿದೆ. ಈ ಬಾರಿ ವಿಭಿನ್ನ ಮನರಂಜನಾ ಆಟಗಳನ್ನು ತರಿಸಲಾಗಿದೆ. ರಾಜ್ಯದ ದೊಡ್ಡ ಜಾತ್ರೆಗಳಲ್ಲಿ ಒಂದಾಗಿರುವ ಯಲ್ಲಾಪುರ ಜಾತ್ರೆಯನ್ನು ಈ ಬಾರಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ವಿಶೇಷವಾಗಿ ಆಚರಿಸಲಾಗುವುದು” ಎಂದು ಉದ್ಯಮಿ ಬಾಲು ನಾಯಕ ಹೇಳಿದರು.