ಯಲ್ಲಾಪುರ: ಸಹಸ್ರಾರು ಜನ ಭಕ್ತಾದಿಗಳ ಜಯಘೋಷ, ಕಣ್ಣು ಹಾಯಿಸಿದಷ್ಟು ಜನಸಾಗರದ ಮಧ್ಯೆ ಅಕ್ಕ, ತಂಗಿಯರ ಆಗಮನ. ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಯಲ್ಲಾಪುರ ಶ್ರೀ ಗ್ರಾಮ ದೇವಿಯರ ಜಾತ್ರೆಗೆ (Grama Deviya Jatre:) ಬುಧವಾರ (ಫೆ.೨೩) ಮಧ್ಯಾಹ್ನ ಅದ್ಧೂರಿ ಚಾಲನೆ ದೊರೆಯಿತು.
ಬೆಳಗ್ಗೆ 11 ಗಂಟೆ ಹೊತ್ತಿಗೆ ದೇವಿಯರ ಲಗ್ನ ಕಾರ್ಯ ನೆರವೇರಿಸಲಾಯಿತು. ನಂತರ 4 ಗಂಟೆ ಹೊತ್ತಿಗೆ ದೇವಿ ದೇವಸ್ಥಾನದಿಂದ ಧಾರ್ಮಿಕ ವಿಧಿ ವಿಧಾನ ಪೂರೈಸಿ, ದೇವಿಯರ ಮೆರವಣಿಗೆ ಗದ್ದುಗೆಯೆಡೆಗೆ ಆರಂಭವಾಯಿತು. ರಂಗವಲ್ಲಿ, ತಳಿರು, ತೋರಣ, ಕೇಸರಿ ಪತಾಕೆಗಳಿಂದ ಶೃಂಗಾರಗೊಂಡ ಪೇಟೆಯ ಬೀದಿಯಲ್ಲಿ ಮೆರವಣಿಗೆ ಸಾಗಿ ಉಡುಪಿಯ ತಂಡದ ಚಂಡೆ ವಾದನ, ರಾಮಾಪುರ-ಕಾಜಲವಾಡ ವಾದ್ಯ ತಂಡಗಳು, ಹೆಗ್ಗೂಡಿನ ಗಾರುಡಿ ಗೊಂಬೆಗಳು ಮೆರವಣಿಗೆಯ ಶೋಭೆಯನ್ನು ಹೆಚ್ಚಿಸಿದವು.
ಇದನ್ನೂ ಓದಿ: Women’s T20 World Cup: ಆಸ್ಟ್ರೇಲಿಯಾವನ್ನು ಮಣಿಸಲು ದೊಡ್ಡ ಮೊತ್ತ ಅಗತ್ಯ; ರಿಚಾ ಘೋಷ್
ದೇವಿ ದೇವಸ್ಥಾನದಿಂದ ಮೈದಾನದವರೆಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ದಾರಿಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಜಯಘೋಷಗಳನ್ನು ಹಾಕುತ್ತಾ ದೇವಿಯರ ಹೊನ್ನಾಟವನ್ನು ವೀಕ್ಷಿಸಿದರು. ಸಂಜೆ 5.15ರ ಸುಮಾರಿಗೆ ಶ್ರೀದೇವಿಯರು ಜಾತ್ರಾ ಮಂಟಪದಲ್ಲಿ ವಿರಾಜಮಾನರಾದರು.
ಪಟ್ಟಣದೆಲ್ಲೆಡೆ ಭಕ್ತಾದಿಗಳಿಗೆ ಸ್ವಯಂ ಸೇವಕರು, ಭಕ್ತರು ಪಾನಕ, ತಂಪು ಪಾನೀಯ ವಿತರಿಸುತ್ತಿದ್ದರು. ಕಿಕ್ಕಿರಿದು ತುಂಬಿದ್ದ ಜನಸ್ತೋಮದ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ: Yashaswini Scheme: ಯಶಸ್ವಿನಿ ಕಾರ್ಡ್ ಮಾಡಿಕೊಡುವುದಾಗಿ ವಂಚನೆ; ಯಶಸ್ವಿನಿ ಟ್ರಸ್ಟ್‌ನಿಂದ ದೂರು