Site icon Vistara News

Hanuma Jayanti | ಹನುಮ ಜಯಂತಿಗೆ ಸಕಲ ರೀತಿಯಲ್ಲಿ ಸಜ್ಜಾದ ಅಂಜನಾದ್ರಿ ಬೆಟ್ಟ; ಪೊಲೀಸ್‌ ಬಿಗಿ ಬಂದೋಬಸ್ತ್‌

Hanuma Jayanti

ಕೊಪ್ಪಳ: ರಾಮ ಭಂಟ ಹನುಮನ ಜನ್ಮ ಸ್ಥಳವಾಗಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಹನುಮ ದೇಗುಲದಲ್ಲಿ ಡಿ.೫ರಂದು ನಡೆಯಲಿರುವ ಹನುಮ ಜಯಂತಿಗೆ (Hanuma Jayanti) ಸಕಲ ಸಿದ್ಧತೆಗಳು ನಡೆದಿವೆ. ಲಕ್ಷಾಂತರ ಭಕ್ತರು ಭೇಟಿ‌ ನೀಡಲಿದ್ದು, ಸಾವಿರಾರು ಹನುಮಮಾಲಾಧಾರಿಗಳು ಮಾಲೆಯನ್ನು ವಿಸರ್ಜಿಸುವುದರಿಂದ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಜತೆಗೆ ಗಂಗಾವತಿಯಲ್ಲಿ ಮಾಲಾಧಾರಿಗಳಿಂದ ಶೋಭಾಯಾತ್ರೆ ನಡೆಯಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿದೆ.

ಅಂಜನಾದ್ರಿ ಪರ್ವತದ ಮುಂಭಾಗದ ಮೆಟ್ಟಿಲುಗಳ ಮೂಲಕ ಭಕ್ತರು ಪರ್ವತವೇರಿ ಆಂಜನೇಯನ ದರ್ಶನ ಪಡೆದುಕೊಂಡು ನಂತರ ಹಿಂಭಾಗದಲ್ಲಿರುವ ಮೆಟ್ಟಿಲುಗಳ ಮೂಲಕ ಪರ್ವತ ಇಳಿಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಪರ್ವತ ಇಳಿಯುವ ಭಾಗದಲ್ಲಿಯೇ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇದಕ್ಕಾಗಿ ಬೃಹತ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಅಂಜನಾದ್ರಿಗೆ ಬರುವ ಭಕ್ತರಿಗಾಗಿ ಒಟ್ಟು 19 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಅನನುಕೂಲವಾಗದಂತೆ ಮೂಲಭೂತ ಸೌಕರ್ಯ ಒದಗಿಸಲಾಗಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.

ಇದನ್ನೂ ಓದಿ | Tirupati Temple | ವಿಪ್ರೊಗಿಂತಲೂ ತಿರುಪತಿ ದೇವಸ್ಥಾನದ ಆಸ್ತಿ ಮೌಲ್ಯವೇ ಹೆಚ್ಚು; ಎಷ್ಟಿದೆ ಗೊತ್ತಾ ತಿಮ್ಮಪ್ಪನ ಸಂಪತ್ತು?

ಗಂಗಾವತಿ ಹಾಗೂ ಅಂಜನಾದ್ರಿಯಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್
ನಾಡಿನ ಮೂಲೆ ಮೂಲೆಯಿಂದ ಬರುವ ಸಾವಿರಾರು ಹನುಮ ಮಾಲಾಧಾರಿಗಳು ಸೋಮವಾರ ಬೆಳಗ್ಗೆ ಗಂಗಾವತಿ ನಗರದಲ್ಲಿ ಶೋಭಾಯಾತ್ರೆ ನಡೆಸಲಿದ್ದಾರೆ. ಬೆಳಗ್ಗೆ 8 ಗಂಟೆಯ ವೇಳೆಗೆ ಗಂಗಾವತಿಯ ಎಪಿಎಂಸಿ ಬಳಿಯಿಂದ ಶೋಭಾಯಾತ್ರೆ ಆರಂಭವಾಗಲಿದೆ. ಗಂಗಾವತಿ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕಲ್ಪಿಸಿದೆ. ಗಂಗಾವತಿ ನಗರದಲ್ಲಿಯೇ ಸುಮಾರು 80 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂಜನಾದ್ರಿಯಲ್ಲಿಯೂ ಸಿಸಿ ಕ್ಯಾಮೆರಾಗಳ ಕಣ್ಗಾವಲು ಇದೆ. ಅಲ್ಲದೆ ಬಂದೋಬಸ್ತ್‌ಗಾಗಿ ಎಸ್‌ಪಿ, ಎಎಸ್‌ಪಿ, 7 ಡಿಎಸ್‌ಪಿ, 24 ಸಿಪಿಐ, 60 ಪಿಎಸ್ಐ, 123 ಎಎಸ್ಐ, 378 ಎಚ್‌ಸಿ,
616 ಪಿಸಿಗಳು ಸೇರಿ ಒಟ್ಟು 800ಕ್ಕೂ ಅಧಿಕ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ.

ಹನುಮ ಮಾಲಾಧಾರಿಗಳ ಶೋಭಾಯಾತ್ರೆ ಸಂದರ್ಭದಲ್ಲಿ ಈ ಹಿಂದೆ ಗಲಾಟೆಗಳಾದ ಉದಾಹರಣೆ ಇದೆ. ಈ ವರ್ಷ ಈ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದಾರೆ. ಸೂಕ್ಷ್ಮ ಪ್ರದೇಶವಾಗಿರುವ ಗಂಗಾವತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಪೊಲೀಸ್ ಇಲಾಖೆಗೆ ಇರುವುದರಿಂದ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ಈಗ ಹೈ ಅಲರ್ಟ್‌ನಲ್ಲಿದೆ.

ಇದನ್ನೂ ಓದಿ | Gita Jayanti 2022 | ಭಾರತ ಈಗ ಭಗವದ್ಗೀತೆ ನೀಡಿದ ಸಂದೇಶವನ್ನೇ ಅನುಸರಿಸುತ್ತಿದೆ ಎಂದ ಸಚಿವ ರಾಜನಾಥ್‌ ಸಿಂಗ್‌

Exit mobile version