ಹಾಸನ: ನವೆಂಬರ್ 10ರ ಶುಕ್ರವಾರ ಹಾಸನಾಂಬೆ ದೇವಾಲಯದ (Hasanamba Temple) ಬಳಿ ಅಲ್ಲೋಲ ಕಲ್ಲೋಲವೇ ಉಂಟಾಗಿತ್ತು. ಕರೆಂಟ್ ಶಾಕ್‌ನಿಂದಾಗಿ ದಿಢೀರ್ ನೂಕು ನುಗ್ಗಲು ಉಂಟಾಗಿ, ಧರ್ಮ ದರ್ಶನದ ಸರತಿ ಸಾಲಿನ ನಿಂತಿದ್ದ ಮಹಿಳೆಯರು ದಿಕ್ಕಾಪಾಲಾಗಿ ಓಡಿದ್ದಾರೆ. ಗಾಬರಿಯಲ್ಲಿ ಒಬ್ಬರ ಮೇಲೆ ಒಬ್ಬರು ಬಿದ್ದು ನೂಕು ನುಗ್ಗಲು ಉಂಟಾಗಿತ್ತು.
ಸರತಿ ಸಾಲಿನಲ್ಲಿ ನಿಂತಿದ್ದಾಗ ಕೆಲವರಿಗೆ ಕಬ್ಬಿಣದ ಬ್ಯಾರಿಕೇಟ್‌ನಲ್ಲಿ ಕರೆಂಟ್ ಪಾಸ್ ಆಗಿ ಕುಸಿದು ಬಿದ್ದಿದ್ದಾರೆ. ಇದರಿಂದಾಗಿ ಆತಂಕಕೊಂಡ ಮಹಿಳೆಯರು ಪ್ರಾಣ ಉಳಿಸಿಕೊಳ್ಳಲು ಬ್ಯಾರಿಕೇಟ್ ಮುರಿದಿದ್ದಾರೆ. ಒಮ್ಮೆಲೆ ಸರತಿ ಸಾಲಿನಿಂದವರು ಚಿರಾಡುತ್ತಾ ಅಡ್ಡಾದಿಡ್ಡಿಯಾಗಿ ಓಡಿದ್ದಾರೆ. ಈ ವೇಳೆ ಕೆಳಗೆ ಬಿದ್ದವರನ್ನು ಸ್ಥಳೀಯರು ಹೊರಗೆಳೆದಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡವರನ್ನು, ಕರೆಂಟ್ ಶಾಕ್‌ನಿಂದ ಗಾಯಗೊಂಡ ಬಾಲಕಿಯೊಬ್ಬಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸತತ ಮಳೆಯಿಂದಾಗಿ ಕರೆಂಟ್ ಶಾಕ್ ಹೊಡೆದಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸಚಿವ ದಿನೇಶ್ ಗುಂಡೂರಾವ್ ಆಸ್ಪತ್ರೆಗೆ ಭೇಟಿ ನೀಡಿ 15 ವರ್ಷದ ಬಾಲಕಿಯ ಆರೋಗ್ಯ ವಿಚಾರಿಸಿದ್ದಾರೆ. ಶಾಸಕ ಸ್ವರೂಪ್ ಪ್ರಕಾಶ್ ಕೂಡ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಶಕ್ತಿ ಯೋಜನೆಯಿಂದಾಗಿ ಈ ಬಾರಿ ಹಾಸನಂಬೆ ದರ್ಶನಕ್ಕೆ ಮಹಿಳಾ ಭಕ್ತರು ಹೆಚ್ಚಾಗಿ ಬರುತ್ತಿದ್ದಾರೆ. ಇದರಿಂದಾಗಿ ಜನರನ್ನು ನಿಯಂತ್ರಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಹಾಸನಾಂಬೆ ದೇಗುಲಕ್ಕೆ ದಾಖಲೆಯ ಆದಾಯ
ನವೆಂಬರ್ 3 ರಿಂದ ನವೆಂಬರ್ 10ರ ಬೆಳಗ್ಗೆ 6 ಗಂಟೆವರೆಗೆ 3,18,30,320 ರೂ ಆದಾಯ ಬಂದಿದೆ. ವಿಶೇಷ ದರ್ಶನದ ಪಾಸ್ ಹಾಗೂ ಲಡ್ಡು ಪ್ರಸಾದ ಮಾರಾಟದಿಂದಾಗಿ ಕೋಟಿ ಕೋಟಿ ಆದಾಯ ಬಂದಿದೆ. ಸಾವಿರ ರೂ ಟಿಕೆಟ್ ಮಾರಾಟದಿಂದ 1ಕೋಟಿ 35 ಲಕ್ಷದ 81 ಸಾವಿರ ಹಾಗೂ 300 ರೂ ಟಿಕೇಟ್ ಮಾರಾಟದಿಂದ 1 ಕೋಟಿ 43 ಲಕ್ಷದ 33 ಸಾವಿರ ರೂ ಆದಾಯ, ಲಡ್ಡು ಪ್ರಸಾದ ಮಾರಾಟದಿಂದ ಕೂಡ 39 ಲಕ್ಷದ 16 ಸಾವಿರ ಹಣ ಸಂಗ್ರಹವಾಗಿದೆ. ಒಟ್ಡು 3 ಕೋಟಿ 18 ಲಕ್ಷದ 30 ಸಾವಿರ ಆದಾಯ ಬಂದಿದ್ದು, ಇತಿಹಾಸದಲ್ಲೆ ಅತಿ ಹೆಚ್ಚಿನ ಆದಾಯ ಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ