ಹಾಸನ: ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಅಧಿದೇವತೆ ಹಾಸನಾಂಬೆಯ (Hasanamba Temple) ಗರ್ಭಗುಡಿ ಬಾಗಿಲನ್ನು ನ.2ರಂದು ತೆರೆಯಲಾಗಿದೆ. ಆಶ್ವೀಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಐತಿಹಾಸಿಕ ಹಾಸನಾಂಬೆ ದರ್ಶನೋತ್ಸವದಲ್ಲಿ ಅರಸು ಮನೆತನದವರು ದೇವಾಲಯದ ಮುಂಭಾಗ ಗುರುವಾರ ಮಧ್ಯಾಹ್ನ 12:23ಕ್ಕೆ ಬಾಳೆಕಂಬ ಕಡಿಯುತ್ತಿದ್ದಂತೆ, ಗರ್ಭಗುಡಿಯ ಬಾಗಿಲು ತೆರೆಯಲಾಗಿದೆ.
ಇದಕ್ಕೂ ಮೊದಲು ಹಾಸನ ಜಿಲ್ಲಾಧಿಕಾರಿ ಸಿ. ಸತ್ಯಭಾಮರಿಂದ ದೇಗುಲದ ಕೀಯನ್ನು ಹಸ್ತಾಂತರ ಮಾಡಿದರು. ಕಳೆದ ಬಾರಿ ಹಾಕಿದ್ದ ಸೀಲ್‌ಅನ್ನು ತಹಸೀಲ್ದಾರ್ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಪುರೋಹಿತರು ತೆರೆದರು. ಪ್ರಧಾನ ಅರ್ಚಕರ ನೇತೃತ್ವದಲ್ಲಿ ಮಂಗಳ ವಾದ್ಯಗಳೊಂದಿಗೆ ದೇಗುಲಕ್ಕೆ ಆಗಮಿಸಿದ ಅರ್ಚಕರ ತಂಡ ದೇವಿ ಒಡವೆ, ಪೂಜಾ ಸಾಮಗ್ರಿಗಳೊಂದಿಗೆ ಗರ್ಭಗುಡಿಯ ಬಾಗಿಲಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಹಲವರು ಭಾಗಿಯಾದರು.
ಸಾರ್ವಜನಿಕರಿಗಿಲ್ಲ ಇಂದು ಹಾಸನಂಬೆ ದರ್ಶನ
ವಿದ್ಯುಕ್ತವಾಗಿ ಇಂದು ಹಾಸನಾಂಬ ಜಾತ್ರಾ ಮಹೋತ್ಸವ ಗುರುವಾರದಿಂದ ಶುರುವಾಗಿದ್ದರೂ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ನ.3ರ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದಲೇ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 15ರವರೆಗೂ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಶಕ್ತಿ ಯೋಜನೆ ಇರುವುದರಿಂದ ಈ ಭಾರಿ ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಹಾಸನಾಂಬೆ ದೇಗುಲದ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಹಾಸನಾಂಬ ದೇವಾಲಯದ ಎದುರು ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. ದೇವಿ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಪೊಲೀಸರನ್ನು ತಳ್ಳಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ನುಗ್ಗಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲಾಡಳಿತಕ್ಕೆ ಧಿಕ್ಕಾರ ಕೂಗಿದರು. ಕಾರ್ಯಕರ್ತರನ್ನು ನಿಭಾಯಿಸಲು ಪೊಲೀಸರ ಹರಸಾಹಸ ಪಟ್ಟರು. ಈ ವೇಳೆ ನೂರಾರು ಕಾರ್ಯಕರ್ತರು ಪೊಲೀಸರನ್ನೇ ತಳ್ಳಿ ಒಳ ನುಗ್ಗಿ ದರ್ಶನಕ್ಕೆ ಹೋದರು. ಪರಿಸ್ಥಿತಿ ನಿಯಂತ್ರಿಸಲಾಗದೆ ಪೊಲೀಸರು ಕೈಚೆಲ್ಲಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ