Site icon Vistara News

Hasanamba Temple : ಹಾಸನಾಂಬೆ ‌ದರ್ಶನ ಪಡೆದ ಮುಸ್ಲಿಂ ಕುಟುಂಬ; 4ನೇ ದಿನ ಹೇಗಿತ್ತು ಭಕ್ತರ ದಂಡು?

Hasanaba Temple

ಹಾಸನ: ವರ್ಷಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಅಧಿದೇವತೆ ಹಾಸನಾಂಬೆಯ (Hasanamba Temple) ಗರ್ಭಗುಡಿ ಬಾಗಿಲನ್ನು ನ.2ರಂದು ತೆರೆಯಲಾಗಿದ್ದು, 4ನೇ ದಿನವೂ ಭಕ್ತ ಸಾಗರವೇ ಆಗಮಿಸಿತ್ತು. ಮುಸ್ಲಿಂ ಕುಟುಂಬವೊಂದು ಹಾಸನಾಂಬೆಯ ದರ್ಶನ ಪಡೆದು ದೇವನೊಬ್ಬ ನಾಮ ಹಲವು ಎಂಬ ಸಂದೇಶ ಸಾರಿದರು. ಹಜೀರ ಎಂಬುವವರು ಕುಟಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿದರು. ಹಾಸನಾಂಬೆ ಮೇಲೆ ನಮಗೆ ನಂಬಿಕೆ ಇದೆ. ಹಲವು ವರ್ಷಗಳಿಂದ ದೇವರ ದರ್ಶನಕ್ಕೆ ಬರಬೇಕು ಎಂದುಕೊಂಡಿದ್ದೇವು. ಈ ಬಾರಿ ದರ್ಶನಕ್ಕೆ ಬರುವ ಅವಕಾಶ ಸಿಕ್ಕಿದೆ ಎಂದು ಹಜೀರ ಹರ್ಷ ವ್ಯಕ್ತಪಡಿಸಿದರು.

ಸೋಮವಾರ ಜಿಲ್ಲೆಯ ಎಲ್ಲಾ ಇಲಾಖೆಯ ಸರ್ಕಾರಿ ನೌಕರರಿಗೆ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನೌಕರರು ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಅವಕಾಶ ಮಾಡಿಕೊಡಲಾಗಿತ್ತು. ಹಾಸನ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಆದಿಚುಂಚನಗಿರಿ ಕ್ಷೇತ್ರದ ಹಾಸನ ಶಾಖಾ ಮಠದ ಶಂಭುನಾಥ ಶ್ರೀಗಳ ಜತೆಗೆ ಕುಟುಂಬ ಸಮೇತರಾಗಿ ಆಗಮಿಸಿ ಹಾಸನಾಂಬೆ ದರ್ಶನ ಪಡೆದರು. ಜತೆಗೆ ಜೆಡಿಎಸ್ ವಕ್ತಾರ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಭಾಗಿಯಾದರು. ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಕೂಡ ಕುಟುಂಬ ಸಮೇತರಾಗಿ‌ ಭಾಗಿಯಾದರು. ನೊಣವಿನಕೆರೆ ಕಾಡಸಿದ್ದೇಶ್ವರಮಠದ ಕರಿವೃಷಬೇದ್ರ ಸ್ವಾಮೀಜಿ, ಸಂಸದ ಪ್ರಜ್ವಲ್ ರೇವಣ್ಣ ದರ್ಶನ ಪಡೆದರು.

ಇದನ್ನೂ ಓದಿ: Hasanamba Temple: ಹಾಸನಾಂಬೆ ದೇಗುಲದಲ್ಲಿ ಜನ ಜಾತ್ರೆ; ದರ್ಶನಕ್ಕೆ ಮಳೆ ಅಡ್ಡಿ

ಹಾಸನಾಂಬೆ ದರ್ಶನ ಪಡೆದ ಗರಡಿ ಚಿತ್ರತಂಡ

ನಾಲ್ಕನೆ ದಿನ ಹಾಸನಾಂಬೆ ದರ್ಶನಕ್ಕೆ ಗರಡಿ ಚಿತ್ರತಂಡ ಆಗಮಿಸಿತ್ತು. ಹಾಸನದಲ್ಲಿ ಸಿನಿಮಾ ಪ್ರಚಾರಕ್ಕಾಗಿ ಆಗಮಿಸಿದ್ದ ವೇಳೆ ಹಾಸನಾಂಬೆ ದರ್ಶನ ಪಡೆದರು. ನಿರ್ದೇಶಕ ಯೋಗರಾಜ್ ಭಟ್, ನಟ ಮಾಜಿ ಸಚಿವ ಬಿ.ಸಿ ಪಾಟೀಲ್, ಗರಡಿ ಚಿತ್ರದ ನಾಯಕ ಯಶಸ್ ಸೂರ್ಯ ಹಾಗು ನಾಯಕಿ ಸೋನಲ್ ಮಂಟಿರೊ, ನೇಹಾ ಪಾಟೀಲ್ ದರ್ಶನ ಪಡೆದರು.

ಮೊದಲ ಬಾರಿಗೆ ಸಿಎಂ ದರ್ಶನ

ನಾಳೆ (ನ.7) ಹಾಸನಾಂಬೆ ದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಮಧ್ಯಾಹ್ನ 12:30ಕ್ಕೆ ಹಾಸನಾಂಬೆ ದರ್ಶನ ಮಾಡಲಿದ್ದಾರೆ. ಹಾಸನಾಂಬೆ ದರ್ಶನದ ಬಳಿಕ ಹಾಸನ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆ ನಡೆಸಲಿದ್ದಾರೆ. ಇದೇ ಮೊದಲ ಬಾರಿಗೆ ಹಾಸನಾಂಬೆ ದರ್ಶನಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version