ಕಾಶಿಪುರ, ಉತ್ತರಾಖಂಡ
ದೇಶಾದ್ಯಂತ ಹಿಂದೂ – ಮುಸ್ಲಿಂ ಸಮುದಾಯಗಳ ನಡುವೆ ಅಸಹಿಷ್ಣತೆಯ ಕಥೆಗಳೇ ಹೆಚ್ಚಾಗಿ ಕೇಳಿಬರುತ್ತಿರುವ ನಡುವೆ ಇಲ್ಲೊಂದು ಕಡೆ ಪರಮತ ಸಹಿಷ್ಣುತೆಯ ಹಿತಾನುಭವ ಉಂಟಾಗಿದೆ.
ಹಿಂದೂ ಸಹೋದರಿಯರಿಬ್ಬರು ಅಪ್ಪನ ಕೊನೆಯಾಸೆಯಂತೆ 1.5 ಕೋಟಿ ರೂ. ಬೆಲೆ ಬಾಳುವ ಸುಮಾರು 0.80 ಎಕರೆ ಜಾಗವನ್ನು ಈದ್ಗಾ ಮೈದಾನಕ್ಕೆ ಬಿಟ್ಟುಕೊಟ್ಟಿದ್ದಾರೆ. ಇದರಿಂದ ಖುಷಿಯಾದ ಮುಸ್ಲಿಮರು ಮೃತ ವ್ಯಕ್ತಿಯ ಸ್ವರ್ಗ ಪ್ರಾಪ್ತಿಗಾಗಿ ಸಾಮೂಹಿಕ ಪ್ರಾ
ರ್ಥನೆ ಸಲ್ಲಿಸಿದರು.
ಕಾಶಿಪುರ ಎನ್ನುವುದು ಉತ್ತರಾಖಂಡದ ಉಧಾಂ ಸಿಂಗ್ ನಗರ ಜಿಲ್ಲೆಯ ಒಂದು ಪುಟ್ಟ ಊರು. ಅಲ್ಲಿ ವಾಸವಾಗಿದ್ದ ಬೃಜನಂದನ್ ಪ್ರಸಾದ್ ರಾಸ್ತೋಗಿ ಅವರು 20 ವರ್ಷದ ಹಿಂದೆ ಮೃತಪಟ್ಟಿದ್ದರು. ಎಲ್ಲರ ಜತೆ ಚೆನ್ನಾಗಿ ಬೆರೆಯುತ್ತಿದ್ದ ಅವರು ಒಂದೊಮ್ಮೆ ಈದ್ಗಾ ಮೈದಾನವನ್ನು ವಿಸ್ತರಣೆ ಮಾಡುವುದಿದ್ದರೆ ತನಗೆ ಸೇರಿದ ಕೃಷಿ ಭೂಮಿಯಲ್ಲಿ ನಾಲ್ಕು ಬಿಗಾ (80 ಸೆಂಟ್ಸ್) ವನ್ನು ಬಿಟ್ಟುಕೊಡುವುದಾಗಿ ಹೇಳಿದ್ದರು,
ಆದರೆ, ಈ ವಿಷಯ ಅವರ ಮಕ್ಕಳಿಗೆ ಗೊತ್ತಿರಲಿಲ್ಲ, ಮಕ್ಕಳಾದ ಸರೋಜ್ ಮತ್ತು ಅನಿತಾ ದಿಲ್ಲಿ ಮತ್ತು ಮೀರತ್‌ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಕುಟುಂಬದ ಯಾರೋ ಅಪ್ಪನ ಆಸೆಯ ಬಗ್ಗೆ ಮಕ್ಕಳಿಗೆ ತಿಳಿಸಿದ್ದರು. ಈ ವಿಚಾರದಲ್ಲಿ ಹೆಚ್ಚೇನೂ ವಿಚಾರಣೆಯನ್ನೇ ನಡೆಸದ ಅವರು ಜಾಗವನ್ನು ನೀಡುವ ಮೂಲಕ ಆದರ್ಶವನ್ನು ಮೆರೆದರು.
ನಾವು ರಾಸ್ತೋಗಿ ಅವರ ಕೊನೆಯಾಸೆಯ ಬಗ್ಗೆ ತಿಳಿಸಿದ ಮರುಕ್ಷಣವೇ ಅವರ ಮಕ್ಕಳು ಒಪ್ಪಿದರು. ದೇಶ ಈಗಿರುವ ಪರಿಸ್ಥಿತಿಯಲ್ಲಿ ಇದೊಂದು ಬಲು ದೊಡ್ಡ ಔದಾರ್ಯ ದ ಕೆಲಸವಾಗಿದೆ, ನಾವು ಆ ಜಾಗವನ್ನು ಪಡೆದುಕೊಂಡು ಕಾಂಪೌಂಡ್ ನ್ನು ವಿಸ್ತರಿಸುವ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಕಾಶಿಪುರ ಪ್ರದೇಶದ ಈದ್ಗಾ ಸಮಿತಿಯ ಮುಖ್ಯಸ್ಥರಾಗಿರುವ ಹಸೀನ್ ಖಾನ್.
ದೇಲಾ ನದಿ ದಂಡೆಯಲ್ಲಿ ಈದ್ಗಾ ಸಮಿತಿ ಈಗಾಗಲೇ ನಾಲ್ಕು ಎಕರೆ ಜಾಗವನ್ನು ಹೊಂದಿದೆ. ಆದರೆ, ವಾರ್ಷಿಕ ಸಾಮೂಹಿಕ ಪ್ರಾರ್ಥನೆಗೆ ಜಾಗ ಸಾಕಾಗುತ್ತಿರಲಿಲ್ಲ. ಇದನ್ನು ಗಮನಿಸಿದ ರಾಸ್ತೋಗಿ ಅವರು ತಮ್ಮ ಭೂಮಿಯ ಒಂದು ಭಾಗವನ್ನು ನೀಡಲು ಬಯಸಿದ್ದರು. ಹಿಂದೂ – ಮುಸ್ಲಿಂ ಎರಡೂ ಪಂಗಡಗಳ ನಡುವೆ ಗೌರವ ಹೊಂದಿದ ರಾಸ್ತೋಗಿ 2003ರಲ್ಲಿ ಮೃತಪಟ್ಟಿದ್ದರು.
ಕಳೆದ ಭಾನುವಾರ ಜಸ್ಪುರಕ್ಕೆ ಆಗಮಿಸಿ ಕಾಶಿಪುರ ಈದ್ಗಾ ಸಮಿತಿಯನ್ನು ಭೇಟಿ ಮಾಡಿದ ಸಹೋದರಿಯರು, ಭೂಮಿ ವರ್ಗಾವಣೆಗೆ ಮುಂದಾದರು. ನಾವೇನೂ ಭಾರಿ ದೊಡ್ಡ ಕೆಲಸವನ್ನೇನೂ ಮಾಡಿಲ್ಲ. ತಂದೆಯವರ ಆಸೆಯಂತೆ ಭೂಮಿಯನ್ನು ಕೊಟ್ಟಿದ್ದೇವೆ ಎಂದು ಸಹೋದರಿಯರಲ್ಲಿ ಒಬ್ಬರಾದ ಸರೋಜ್ ರಾಸ್ತೋಗಿ ಹೇಳಿದ್ದಾರೆ,