ಸೊರಬ: ತಾಲೂಕಿನ ವರದಾ ಮತ್ತು ದಂಡಾವತಿ ನದಿಗಳ ಸಂಗಮದ ಪುಣ್ಯ ಕ್ಷೇತ್ರ ಬಂಕಸಾಣದ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ (Holelingeshwara Fair) ಜ. ೧೪ರಿಂದ ಆರಂಭವಾಗಲಿದೆ.
ಶ್ರೀ ಕ್ಷೇತ್ರದಲ್ಲಿ ಶನಿವಾರ (ಜ. ೧೪) ಬೆಳಗ್ಗೆ ವರದಾ ನವ ಶಕ್ತಿ ನಾಗಚೌಡೇಶ್ವರಿ ದೇವಿಗೆ ಉಡಿ ತುಂಬುವುದು, ಮಧ್ಯಾಹ್ನ ೪ಕ್ಕೆ ಉತ್ಸವ ಮೂರ್ತಿ ಸ್ಥಾಪನೆ ನಡೆಯಲಿದ್ದು, ಜ. ೧೫ರಂದು ಮಕರ ಸಂಕ್ರಮಣದಂದು ಉತ್ತರಾಯಣ ಪುಣ್ಯ ಕಾಲ ಮತ್ತು ಪುಣ್ಯಸ್ನಾನ, ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಧ್ವಜಾರೋಹಣ, ಲಿಂಗಪೂಜೆ ಮತ್ತು ವಿವಿಧ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ | Teacher Transfer | ಬಡ್ತಿ ನೀಡದೇ ಶಿಕ್ಷಕರ ವರ್ಗಾವಣೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಕ್ಷೇಪ
ಜ. ೧೬ ರಂದು ಬೆಳಗ್ಗೆ ೧೧ಕ್ಕೆ ಶ್ರೀ ಹೊಳೆಲಿಂಗೇಶ್ವರ ಸ್ವಾಮಿಯ ರಥೋತ್ಸವ ನಡೆಯಲಿದ್ದು, ಕಣಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಿವಾಚಾರ್ಯ ಸ್ವಾಮೀಜಿ, ಶಾಂತಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಲಕ್ಕವಳ್ಳಿ ಮೋಕ್ಷ ಮಂದಿರ ಜೈನ ಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ, ತಡಗಣಿಯ ರವೀಂದ್ರ ಗುರೂಜಿ ಅವರ ಸಾನ್ನಿಧ್ಯದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಮಕರ ಸಂಕ್ರಾತಿ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸಂಗಮ ಸ್ಥಾನದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ದೇಶಾದ್ಯಂತ ಪೂರ್ವ ಅಥವಾ ಪಶ್ಚಿಮಾಭಿಮುಖವಾಗಿ ನದಿಗಳು ಹರಿಯುತ್ತಿದ್ದು, ಬಂಕಸಾಣದಲ್ಲಿ ವರದಾ-ದಂಡಾವತಿ ಸಂಗಮದ ನಂತರ ಉತ್ತರಾಭಿಮುಖವಾಗಿ ಹರಿಯುತ್ತದೆ. ಇದರಿಂದಾಗಿ ಉತ್ತರ ಪುಣ್ಯ ಕಾಲದಲ್ಲಿ ಮಕರ ಸಂಕ್ರಮಣದಂದು ಸ್ನಾನ ಮಾಡಿ ಪೂಜೆ ಸಲ್ಲಿಸಿದರೆ ಪುಣ್ಯ ಸಿಗುತ್ತದೆ ಎಂಬುದು ಜನರ ನಂಬಿಕೆಯಾಗಿದೆ.
ಶ್ರೀ ದೇವರಿಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ವಿಧಿವಿಧಾನಗಳು ನಡೆಯುತ್ತವೆ. ಈ ಬಾರಿ ಜ. ೧೪ ರಿಂದ ಪ್ರತಿನಿತ್ಯ ಶ್ರೀ ಕುಮಾರೇಶ್ವರ ನಾಟ್ಯ ಸಂಘ ಅವರಿಂದ ನಾಟಕ ಪ್ರದರ್ಶನಗಳು ನಡೆಯಲಿವೆ. ಜ.೩೦ ರಂದು ಜಂಗೀ ಕುಸ್ತಿ ಸ್ಪರ್ಧೆ ನಡೆಯಲಿದೆ.
ನದಿಯಲ್ಲಿ ನೀರು ಹೆಚ್ಚಳ
ಮೂಗೂರು ಬಳಿ ಚೆಕ್ ಡ್ಯಾಂ ನಿರ್ಮಿಸಿರುವುದರಿಂದ ಕಳೆದೆರಡು ವರ್ಷಗಳಿಂದ ಸಂಗಮ ಸ್ಥಳದಲ್ಲಿನ ಶಿವಲಿಂಗದ ದರ್ಶನ ಭಾಗ್ಯ ಭಕ್ತರಿಗೆ ಲಭಿಸುತ್ತಿಲ್ಲ. ನದಿಯಲ್ಲಿ ಸುಮಾರು ೩೦ ಅಡಿ ನೀರು ನಿಂತಿದೆ. ಭಕ್ತರಿಗೆ ವರ್ಷ ಪೂರ್ತಿ ಶಿವಲಿಂಗದ ದರ್ಶನ ದೊರೆಯುವಂತೆ ನದಿಯಲ್ಲಿ ರಿಂಗ್ ರೂಂ, ಜಾಕ್‌ವೆಲ್ ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ಶ್ರೀ ಹೊಳೆಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಜು ಗೌಡ.
ಇದನ್ನೂ ಓದಿ | Imran Khan | ಪಾಕ್ ಮಾಜಿ ಪಿಎಂ ಇಮ್ರಾನ್ ಖಾನ್, ಅವರ ಪಕ್ಷದ ನಾಯಕರ ವಿರುದ್ಧ ಅರೆಸ್ಟ್ ವಾರೆಂಟ್!
ಪುರಾಣದಲ್ಲೂ ಪ್ರಸಿದ್ಧಿ ಪಡೆದ ಕ್ಷೇತ್ರ
ವರದಾ-ದಂಡಾವತಿ ಸಂಗಮ ಕ್ಷೇತ್ರದ ಶ್ರೀ ಹೊಳೆಲಿಂಗೇಶ್ವರ ದೇವಸ್ಥಾನ ಪುರಾಣದಲ್ಲೂ ಪ್ರಸಿದ್ಧಿ ಪಡೆದಿದೆ. ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕ್ಷೇತ್ರವು ರಾಜ್ಯದಲ್ಲಿಯೇ ಮತ್ತಷ್ಟು ಹೆಸರುವಾಸಿಯಾಯಿತು. ಮಧು ಬಂಗಾರಪ್ಪ ಅವರು ಶಾಸಕರಾಗಿದ್ದಾಗ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರು ವಿವಿಧ ಅನುದಾನಗಳನ್ನು ನೀಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಆದರೆ, ಮುಖ್ಯವಾಗಿ ಸಂಗಮ ಕ್ಷೇತ್ರದ ಉದ್ಭವ ಹೊಳೆಲಿಂಗೇಶ್ವರ ದೇವರ ದರ್ಶನ ಭಕ್ತರಿಗೆ ವರ್ಷ ಪೂರ್ತಿ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ನದಿಯಲ್ಲಿ ರಿಂಗ್ ರೂಂ ಮತ್ತು ಜಾಕ್‌ವೆಲ್ ಸೇತುವೆ ನಿರ್ಮಾಣ ಮಾಡಿದರೆ ಪ್ರವಾಸಿ ಸ್ಥಳವಾಗಿಯೂ ಮತ್ತು ಧಾರ್ಮಿಕ ಕ್ಷೇತ್ರವಾಗಿಯೂ ಬಂಕಸಾಣ ಮತ್ತುಷ್ಟು ಪ್ರಸಿದ್ಧವಾಗಲಿದೆ ಎನ್ನುತ್ತಾರೆ ಧರ್ಮದರ್ಶಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ನಾಗರಾಜ ಗೌಡ ಬಂಕಸಾಣ.
ಇದನ್ನೂ ಓದಿ | Virat Kohli | ಮಂಜ್ರೇಕರ್ ಭವಿಷ್ಯ ನುಡಿದ ಕೆಲವೇ ಗಂಟೆಗಳಲ್ಲಿ ಶತಕ ಬಾರಿಸಿ ಮಿಂಚಿದ ವಿರಾಟ್ ಕೊಹ್ಲಿ!