ರಿಪ್ಪನ್‌ಪೇಟೆ: ಜೀವನವೆಲ್ಲ ನಶ್ವರ ಎಂಬ ಭಾವನೆ ಬೇಡ. ಸಂಯಮ ಜೀವನ, ಆತ್ಮನಿಗ್ರಹ ಮಾಡುವುದು ಜೈನ ಧರ್ಮದಲ್ಲಿ ಕಠಿಣವಾಗಿದ್ದು, ಸಂಯಮ ಜೀವನದ ಕಲ್ಪನೆ ಕೊಟ್ಟ ಧರ್ಮವೇ ಜೈನ ಧರ್ಮವಾಗಿದೆ. ಹಣ, ಸಂಪತ್ತು ಇದ್ದ ಮಾತ್ರಕ್ಕೆ ನೆಮ್ಮದಿಯನ್ನು ಕೊಳ್ಳಲು ಸಾಧ್ಯವಿಲ್ಲ. ಭಾರತ ದೇಶವು ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವೆಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚ ಕಲ್ಯಾಣ ಪೂರ್ವಕ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಈಗೀಗ ಜಗತ್ತಿನಲ್ಲಿ ದುರಂತಗಳು ಹೆಚ್ಚಾಗುತ್ತಿದ್ದು, ಯಾಂತ್ರಿಕ ಜೀವನದಿಂದಾಗಿ ಮನುಷ್ಯ ಸಂಬಂಧಗಳು ದೂರವಾಗುತ್ತಿವೆ. ಕರ್ತವ್ಯ ನಿಷ್ಠೆ, ದಾಸೋಹದಂತಹ ಕಾರ್ಯಗಳಿಂದಾಗಿ ದುಡಿಮೆಯ ಅಲ್ಪ ಹಣವನ್ನು ದಾನ ಮಾಡುವುದರಿಂದಾಗಿ ಪುಣ್ಯ ಪ್ರಾಪ್ತಿಯಾಗುವುದು ಮತ್ತು ನೆಮ್ಮದಿಯನ್ನು ಕಾಣಲು ಸಾಧ್ಯವಾಗುವುದು ಎಂದರು.
ಮಠ, ಗುರು ಪೀಠಗಳು ಅಹಿಂಸಾ ತತ್ತ್ವ ಬೋಧನೆಯಿಂದ ಜೈನ ಧರ್ಮ ಸಕಲ ಜೀವಾತ್ಮಗಳಿಗೂ ಲೇಸು ಬಯಸಿದ ಧರ್ಮವಾಗಿದೆ. ಆಚಾರ ವಿಚಾರಗಳು ಬೇರೆ ಬೇರೆ ಇರಬಹುದು, ಆದರೆ ತತ್ತ್ವದ ಸಾರ ಮಾತ್ರ ಒಂದೇ ಆಗಿದೆ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಜೈನ ಧರ್ಮದ ರಾಷ್ಟ್ರ ಸಂತ ಆಚಾರ್ಯ ಶ್ರೀ ೧೦೮ ಗುಣಧರನಂದಿ ಮುನಿಮಹಾರಾಜರು ಮತ್ತು ವಾತ್ಸಲ್ಯ ಮುನಿಶ್ರೀ ೧೦೮ ಪುಣ್ಯಸಾಗರ ಮಹಾರಾಜರು, ಎಲ್ಲ ಧರ್ಮದ ಸಾರವೂ ಸೇರಿದಂತೆ ಜೈನ ಧರ್ಮದ ಸಾರವೂ ಒಂದೇ ಆಗಿದೆ ಎಂದರು.
ಇದನ್ನೂ ಓದಿ | Bageswhar Dham: ಯಾರು ಈ ಬಾಗೇಶ್ವರ್ ಬಾಬಾ? ಯಾಕೆ ಸುದ್ದಿಯಲ್ಲಿದ್ದಾರೆ ಈ ವ್ಯಕ್ತಿ?
ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾಕರ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಐ.ಎಂ.ಅರುಣ್, ಹೈಕೋರ್ಟ್‌ನ ನಿವೃತ್ತ ನ್ಯಾ.ಅಜಿತ ಗುಂಜಾಳ, ರತ್ನಾಕರ ರಾಜ್, ಪಡುಬಿದ್ರೆ ಅರಸರು, ಕನ್ನಕ್ಕೆ ಬಲ್ಲಾಳ್, ನ್ಯಾಯಾದೀಶರಾದ ರವಿಕುಮಾರ್, ಪುಪ್ಪಲತಾ, ಇಂದ್ರಕುಮಾರ್ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Republic Day 2023: ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ಭಾರತೀಯ ನೌಕಾದಳ ಮುನ್ನಡೆಸಲಿರುವ ಮಂಗಳೂರಿನ ಕುವರಿ
ಪ್ರತಿಷ್ಟಾ ಮಹೋತ್ಸವ
ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಇಂದು ನೂತನ ಮಾನಸ್ತಂಭೋಪರಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಮಹೋತ್ಸವವು ೧೦೮ ಗುಣಧರನಂದಿ ಮುನಿಮಹಾರಾಜರು ಮತ್ತು ೧೦೮ ಪುಣ್ಯಸಾಗರ ಮಹಾರಾಜರು ಇವರ ದಿವ್ಯ ಸಾನ್ನಿಧ್ಯದಲ್ಲಿ ಹೊಂಬುಜ ಜೈನ ಮಠದ ಪೀಠಾಧ್ಯಕ್ಷ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ನೇತೃತ್ವದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಇದನ್ನೂ ಓದಿ | Wicketkeeping Records: ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ಟಾಪ್ 5 ಆಟಗಾರರು
ಬೆಳಗ್ಗೆ ಸುಪ್ರಭಾತ, ಧರ್ಮಾಚಾರ್ಯರ ನಿಮಂತ್ರಣ, ಧ್ವಜಾರೋಹಣ, ತೋರಣ, ಮುಹೂರ್ತ, ಏಕಕಾಲದಲ್ಲಿ ಕ್ಷೇತ್ರಪಾಲ ಮತ್ತು ಅಮ್ಮನವರ ಬಸದಿಯ ವಿಮಾನ ಶುದ್ಧಿ, ಯಜ್ಞಶಾಲೆಯಲ್ಲಿ ಯಕ್ಷಾರಾಧನೆ, ಇಂದ್ರ ಪ್ರತಿಷ್ಠೆ, ಜಲಯಾತ್ರಾ ಮಹೋತ್ಸವ, ಜಿನಮಂದಿರದಲ್ಲಿ ೯ ಕಳಸಗಳಿಂದ ಅಭಿಷೇಕ ಮಂಟಪ ಉದ್ಘಾಟನೆ, ನಾಂದಿ ಮಂಗಳ, ಕಲಶ ಸ್ಥಾಪನೆ ಅಖಂಡ ದೀಪ ಪ್ರಜ್ವಲನೆ ಹಾಗೂ ವಾಸ್ತು ಶಾಂತಿ ನವಗ್ರಹ ವಿಧಾನ ಮೃತ್ತಿಕಾ ಸಂಗ್ರಹಣಾ, ಅಂಕುರಾರ್ಪಣಾ ಪೂಜಾ ಕೈಂಕರ್ಯವು ಜರುಗಿತು. ನಂತರ ಜೈನ ಮಿಲನ್ ಆಯೋಜಿಸಿದ್ದ ರಾಜ್ಯಮಟ್ಟದ ಜಿನಭಜನಾ ವಿಜೇತ ತಂಡದವರಿಂದ ಹಾಗೂ ವೃತ್ತಿ ನಿರತ ಗಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.