Site icon Vistara News

Hombuja Mutt: ಪಾಶ್ಚಿಮಾತ್ಯ ದೇಶದಲ್ಲಿ ಭಾರತೀಯ ಧರ್ಮ ಸಂಸ್ಕೃತಿಯ ಅನುಕರಣೆ: ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

Devendrakeerti Bhattaraka swamiji Hombuja mutt ripponpet

#image_title

ರಿಪ್ಪನ್‌ಪೇಟೆ: “ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಧರ್ಮ, ಸಂಸ್ಕೃತಿಯನ್ನು ಅನುಕರಣೆ ಮಾಡುತ್ತಿದ್ದರೆ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಸಂಸ್ಕೃತಿ, ಸಂಸ್ಕಾರದಿಂದ ದೂರವಾಗುತ್ತಿದ್ದಾರೆ ಎಂದು ಹೊಂಬುಜ ಜೈನ ಮಠದ (Hombuja Mutt) ಡಾ. ಶ್ರೀಮದ್‌ ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಜೈನರ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಹೊಂದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಆಯೋಜಿಸಲಾದ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವ ಮತ್ತು ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರಧಾನ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದನ್ನೂ ಓದಿ: IND VS AUS: ಗಾಯಾಳು ಶ್ರೇಯಸ್​ ಬದಲು ಸಂಜು ಸ್ಯಾಮ್ಸನ್​ಗೆ ಅವಕಾಶ!

ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ಸ್ಥಳ ಪುರಾಣಗಳ ಆಧಾರಗಳ ಮೇಲೆ ಅವಲೋಕಿಸಿದಾಗ ಇಲ್ಲಿನ ಗುರು ಪೀಠವು ಪುರಾತನವಾಗಿದೆ. ಆಚಾರ್ಯ ಶ್ರೀ ಕುಂದ ಕುಂದರ ಪರಂಪರೆಯ ಇಲ್ಲಿನ ಪೂಜ್ಯರು ಈ ನಾಡಿಗೆ ಧಾರ್ಮಿಕ, ನೈತಿಕ ಮಾನವೀಯ ಮೌಲ್ಯಗಳ ಜತೆಗೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ ಅಹಿಂಸಾ ತತ್ತ್ವ ಪರಿಪಾಲನೆಯನ್ನು ಬೋಧಿಸುತ್ತಾ ಬಂದಿದೆ. ಪೀಠವು ನಿರಂತರ ಧರ್ಮ ಪ್ರಭಾವಳಿಯ ಮೂಲಕ ಆತ್ಮಕಲ್ಯಾಣದೊಂದಿಗೆ ಸಮಾಜದ ಕಲ್ಯಾಣವನ್ನೂ ಮಾಡುತ್ತಾ ಬಂದಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮೈಸೂರಿನ ಸಾಹಿತಿ, ಸಂಶೋಧಕ ಮತ್ತು ಉಪನ್ಯಾಸಕ ಪ್ರೊ. ಶುಭಚಂದ್ರ ಅವರಿಗೆ ಮಠದಿಂದ ಕೊಡ ಮಾಡುವ “ಸಿದ್ಧಾಂತ ಕೀರ್ತಿ’’ ಪ್ರಶಸ್ತಿ ಫಲಕ ಮತ್ತು ನಗದನ್ನು ಹೊಂಬುಜ ಜೈನ ಮಠಾಧ್ಯಕ್ಷ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ನೀಡಿ ಸನ್ಮಾನಿಸಿದರು.

ಸಿದ್ಧಾಂತ ಕೀರ್ತಿ ಪ್ರಶಸ್ತಿ ಪುರಸ್ಕೃತ ಪ್ರೊ. ಶುಭಚಂದ್ರ ಮಾತನಾಡಿ, “ಪ್ರಶಸ್ತಿಗಾಗಿ ನಾನು ಎಂದೂ ಅರ್ಜಿ ಹಾಕಿದವನಲ್ಲ. ಆ ಪ್ರಶಸ್ತಿ ಪುರಸ್ಕಾರಗಳು ನಮ್ಮ ವ್ಯಕ್ತಿತ್ವವನ್ನು ಗುರುತಿಸಿ ಹುಡುಕಿಕೊಂಡು ಬರುವಂತಾಗಬೇಕು. ಈ ನಿಟ್ಟಿನಲ್ಲಿ ಶ್ರೀಮಠದಿಂದ ನೀಡುತ್ತಿರುವ ಸಿದ್ಧಾಂತ ಕೀರ್ತಿ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಧರ್ಮ ಎಂಬುದು ಹೊಸಲಿನ ಮೇಲಿನ ದೀಪವಾಗಿದೆ. ಅದು ಹೊರಗಿನ ಮತ್ತು ಒಳಗಿನ ಕತ್ತಲೆಯನ್ನು ದೂರ ಮಾಡಿ ಆತ್ಮ ಮತ್ತು ಸಮಾಜವನ್ನು ಬೆಳಗುವ ದೀಪಾವಾಗಲಿ” ಎಂದರು.

ಇದನ್ನೂ ಓದಿ: KSRTC Employees Strike: ಮಾ. 21ರಿಂದಲೇ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಬಂದ್‌ ಆಗುತ್ತಾ ಬಸ್‌?

ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜೈನ ಭಕ್ತಾದಿಗಳು ಪಾಲ್ಗೊಂಡಿದ್ದರು.

Exit mobile version