ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ದಕ್ಷಿಣ ಭಾರತದ ಜೈನರ ಪವಿತ್ರ ಯಾತ್ರ ಸ್ಥಳವಾದ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಪರಂಪರಾನುಗತವಾದ ವಾರ್ಷಿಕ ರಥೋತ್ಸವವು (Hombuja Rathotsava) ಹೊಂಬುಜ ಜೈನ ಮಠದ ಪೀಠಾಧೀಶರಾದ ಜಗದ್ಗುರು ಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ಬುಧವಾರ (ಮಾ.15) ನೆರವೇರಿತು.
ಶ್ರೀಕ್ಷೇತ್ರದ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ, ಜಗನ್ಮಾತೆ ಯಕ್ಷಿಶ್ರೀ ಪದ್ಮಾವತಿ ದೇವಿ, ಕ್ಷೇತ್ರ ರಕ್ಷಕ ಶ್ರೀ ಕ್ಷೇತ್ರಪಾಲ ಸ್ವಾಮಿ ಜಿನಮಂದಿರಗಳಲ್ಲಿ ನಿತ್ಯವಿಧಿ ಸಹಿತ ವಿಶೇಷ ಪೂಜಾ ವಿಧಿಯನ್ನು ರಾಜ್ಯ ಮತ್ತು ಹೊರ ರಾಜ್ಯಗಳ ಭಕ್ತರ ಸಮ್ಮುಖದಲ್ಲಿ ಜರುಗಿತು.
ಬುಧವಾರ ಮಧ್ಯಾಹ್ನ ಮೂಲಾ ನಕ್ಷತ್ರದಲ್ಲಿ ಮಹಾ ನೈವೇದ್ಯ, ವಾದ್ಯಗೋಷ್ಠಿಗಳೊಂದಿಗೆ ಪ್ರದಕ್ಷಿಣೆ, ಬಳಿಕ 1.25 ಗಂಟೆಗೆ ಮಹಾರಥಾರೋಹಣ ವಿಧಿವತ್ತಾಗಿ ನೆರವೇರಿದಾಗ “ಶ್ರೀ ಪಾರ್ಶ್ವನಾಥ ಸ್ವಾಮಿಕೀ ಜೈ” ಶ್ರೀ ಪದ್ಮಾವತಿ ದೇವಿ ಜೈ, ಜೈನ ಧರ್ಮಕೀ ಜೈ, ಅಹಿಂಸಾ ಧರ್ಮಕೀ ಜೈ ಎಂದು ಭಕ್ತ ಸಮೂಹ ಭಕ್ತಿ ಭಾವಗಳೊಂದಿಗೆ ಜಯಕಾರ ಹಾಕಿದರು.
ಪ್ರಸಾದ ವಿತರಣೆ ಸಂದರ್ಭದಲ್ಲಿ ಶ್ರೀಗಳು,” ಲೋಕದಲ್ಲೆಲ್ಲ ಶಾಂತಿ ನೆಲೆಸಲು ಜೈನ ಧರ್ಮದ ಅಹಿಂಸಾ ಧರ್ಮಾಚರಣೆಯಿಂದ ಸಾಧ್ಯ ಎನ್ನುತ್ತಾ ಧರ್ಮ ಸಾಮರಸ್ಯದಿಂದ ಜೀವನ ಪಾವನವಾಗಲಿ” ಎಂದು ಹರಸಿದರು.
ವಾರ್ಷಿಕ ರಥೋತ್ಸವಕ್ಕೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಶ್ರೀ ಮಠದ ವತಿಯಿಂದ ಭಕ್ತಾದಿಗಳೆಲ್ಲರಿಗೂ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: IND VS AUS: ಮೊದಲ ಏಕದಿನದಲ್ಲಿ ಶುಭಮನ್ ಗಿಲ್ ಜತೆಗಾರ ಯಾರು?