ʻದಾನೇನ ಪಾಣಿಃ ನ ತು ಕಂಕಣೇನʼ ಎಂಬ ಮಾತನ್ನು ನೀವು ಕೇಳಿರಬಹುದು. ದಾನದಿಂದ ಮಾತ್ರವೇ ಕೈಗಳು ಶೋಭಿಸುತ್ತವೆಯೇ ಹೊರತು ಬಂಗಾರದ ಕಡಗಗಳಿಂದಲ್ಲ ಎಂಬುದು ಇದರ ಅರ್ಥ. ದಾನಕ್ಕೆ ನಮ್ಮ ಧರ್ಮದಲ್ಲಿ ಬಹಳ (Importance Of Daan) ಮಹತ್ವವಿದೆ. ದಾನಕ್ಕೆ ಬಹಳದೊಡ್ಡ ಪರಂಪರೆಯೇ ಇದೆ.
ಎಲ್ಲರಿಗೂ ತಿಳಿದಿರುವಂತೆ ದಾನಗಳಲ್ಲಿ ಹಲವಾರು ಪ್ರಕಾರದ ದಾನವಿದೆ. ಗೋದಾನ, ಭೂದಾನ, ಅನ್ನದಾನ, ವಸ್ತ್ರದಾನ ಹೀಗೆ ಹಲವು ದಾನಗಳನ್ನು ನೀಡಲಾಗುತ್ತದೆ. ಎಲ್ಲ ದಾನಗಳೂ ಶ್ರೇಷ್ಠವೇ ಆಗಿವೆ. ಸಾಮರ್ಥ್ಯಕ್ಕೆ ತಕ್ಕಂತೆ ಅಗತ್ಯವಿರುವವರಿಗೆ ದಾನ ನೀಡಿದರೆ ಜನ್ಮಗಳ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ದಾನ ಮಾಡಿದ್ದನ್ನು ಗೌಪ್ಯವಾಗಿ ಇಡುವುದು ಮಾಡಿದ ದಾನಕ್ಕಿಂತ ಹೆಚ್ಚಿನ ಪುಣ್ಯವನ್ನು ತಂದು ಕೊಡುತ್ತದೆ ಎಂದೂ ಹೇಳಲಾಗುತ್ತದೆ.
ದಾನ ಮಾಡುವುದರಿಂದ ವ್ಯಕ್ತಿಯ ಕಷ್ಟ ನಿವಾರಣೆಯಾಗುತ್ತದೆ, ಪಾಪದಿಂದ ಮುಕ್ತಿ ಸಿಗುತ್ತದೆ. ಯಾವ ವ್ಯಕ್ತಿ ನಿಸ್ವಾರ್ಥ ಭಾವದಿಂದ ಯಾರಾದರೂ ಬಡವರಿಗೆ, ನಿರ್ಗತಿಕರಿಗೆ ಅಥವಾ ಅರ್ಹರಿಗೆ ದಾನ ನೀಡುವುದರಿಂದ ಆ ವ್ಯಕ್ತಿಯ ಜೊತೆಗೆ ಅವರ ಕುಟುಂಬದವರಿಗೂ ಪುಣ್ಯ ಲಭಿಸುತ್ತದೆ. ಹಾಗಾಗಿ ಸಾಧ್ಯವಾದಾಗೆಲ್ಲ ದಾನ ಮಾಡಬೇಕೆಂದು ಪುರಾಣಗಳಲ್ಲಿ ಹೇಳಲಾಗಿದೆ.
ಗೋದಾನ, ಭೂದಾನಗಳಂಥ ಹೆಚ್ಚು ಮೌಲ್ಯವುಳ್ಳ ವಸ್ತುಗಳನ್ನು ದಾನವಾಗಿ ನೀಡುವುದು ಎಲ್ಲರಿಗೂ ಸಾಧ್ಯವಿರುವಿರುವುದಿಲ್ಲ, ಹಾಗಾಗಿ ಕಡಿಮೆ ಬೆಲೆ ಹೊಂದಿರುವ, ಎಲ್ಲರಿಗೂ ಕೊಳ್ಳಲು ಸಾಧ್ಯವಾಗುವ ಈ ವಸ್ತುಗಳನ್ನು ದಾನವಾಗಿ ನೀಡಿದರೆ ಉಳಿದೆಲ್ಲವನ್ನೂ ದಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ. ಹಾಗಾಗಿ ಶಾಸ್ತ್ರದಲ್ಲಿ ಹೇಳಿದ ಈ ಮೂರು ವಸ್ತುಗಳನ್ನು ದಾನವಾಗಿ ನೀಡಿದರೆ ಉತ್ತಮ. ಆ ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ;
ಸಂಕಷ್ಟಗಳ ನಿವಾರಣೆಗೆ ಕುಂಕುಮ ದಾನ
ಹಿಂದೂ ಧರ್ಮದಲ್ಲಿ ಕುಂಕುಮಕ್ಕೆ ವಿಶೇಷ ಮಹತ್ವವಿದೆ. ಕುಂಕುಮವು ಸೌಭಾಗ್ಯದ ಸಂಕೇತವಾಗಿದೆ. ಹಾಗಾಗಿ ಕುಂಕುಮವನ್ನು ದಾನ ಮಾಡುವುದರಿಂದ ಪತಿಗೆ ಬರುವ ಎಲ್ಲ ಸಂಕಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಜೊತೆಗೆ ಪತಿಯ ಯಶಸ್ಸಿಗೂ ಇದು ಕಾರಣವಾಗುತ್ತದೆ. ಸೌಭಾಗ್ಯದ ಪ್ರತೀಕವಾಗಿರುವ ಕುಂಕುಮವನ್ನು ಸೌಭಾಗ್ಯವತಿ ಸ್ತ್ರೀಯರಿಗೆ ದಾನ ಮಾಡುವುದರಿಂದ ಆರ್ಥಿಕವಾಗಿಯೂ ಒಳಿತಾಗುತ್ತದೆ.
ಶನಿಕಾಟದ ಮುಕ್ತಿಗೆ ಚಪ್ಪಲಿ ದಾನ
ಶಾಸ್ತ್ರಗಳ ಪ್ರಕಾರ ಚಪ್ಪಲಿಯನ್ನು ದಾನವಾಗಿ ನೀಡುವುದು ಅತ್ಯಂತ ಶುಭವಂತೆ. ಇದರಿಂದ ಮುಂಬರುವ ರೋಗ ರುಜಿನಗಳು, ಆರ್ಥಿಕ ಸಂಕಷ್ಟಗಳಂಥ ಅನೇಕ ಸಮಸ್ಯೆಗಳಿಂದ ನಿವಾರಣೆ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಶನಿಯ ಸಾಡೇಸಾತಿ ಮತ್ತು ಅರ್ಧಾಷ್ಟಮದ ಕಾಟದಿಂದ ಸಹ ಮುಕ್ತಿ ದೊರಕುತ್ತದೆ. ಶನಿ ದೋಷವು ಕಾಲಿನಿಂದಲೇ ಆರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶನಿವಾರದಂದು ಕಪ್ಪು ಬಣ್ಣದ ಚಪ್ಪಲಿಯನ್ನು ದಾನ ಮಾಡುವುದರಿಂದ ಶುಭ ಫಲ ಪ್ರಾಪ್ತವಾಗುತ್ತದೆ.
ಚಪ್ಪಲಿಯನ್ನು ದಾನವಾಗಿ ನೀಡುವಾಗ ಈ ಮಂತ್ರವನ್ನು ಹೇಳಬೇಕೆಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ;
ಉಪಾನಹೌ ಪ್ರದತ್ತೇ ಮೇ ಕಂಟಕಾದಿನಿವಾರಣೇ|
ಸರ್ವಮಾರ್ಗೇಷು ಸುಖದೇ ಅಥಃ ಶಾಂತಿಂ ಪ್ರಯಚ್ಚ ಮೇ||
ಈ ಶ್ಲೋಕ ಅರ್ಥ ಹೀಗಿದೆ : ಮುಳ್ಳುಗಳಿಂದ ಕಾಲಿನ ರಕ್ಷಣೆ ಮಾಡುವುದರ ಜೊತೆಗೆ ದಾರಿಯುದ್ದಕ್ಕೂ ಸಂತೋಷವನ್ನು ನೀಡುವ ಚಪ್ಪಲಿಯನ್ನು ದಾನವಾಗಿ ನೀಡುತ್ತಿದ್ದೇನೆ. ಇದು ನನಗೆ ಶಾಂತಿ ಮತ್ತು ನೆಮ್ಮದಿ ಸಿಗುವಂತೆ ಮಾಡಲಿ ಎಂಬುದಾಗಿದೆ.
ಸದಾ ರಕ್ಷಣೆಗಾಗಿ ಛತ್ರಿ ದಾನ
ಶಾಸ್ತ್ರಗಳ ಪ್ರಕಾರ ಛತ್ರಿಯನ್ನು ದಾನವಾಗಿ ನೀಡುವುದು ಸಹ ಮಹಾದಾನ. ಶ್ರಾದ್ಧದ ಸಮಯದಲ್ಲಿ ಛತ್ರಿಯನ್ನು ದಾನವಾಗಿ ನೀಡುವ ಪದ್ಧತಿ ಕೆಲವು ಕಡೆ ಇದೆ. ಇದರ ಅರ್ಥವೆನೇಂದರೆ ಮೃತ್ಯುವಿನ ನಂತರ ಮುಂದಿನ ಲೋಕಕ್ಕೆ ಹೋಗುವ ಸಂದರ್ಭದಲ್ಲಿ ಎಲ್ಲ ಋತುಗಳನ್ನು ದಾಟಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ಛತ್ರಿಯು ಈ ಸಮಯದಲ್ಲಿ ಉಪಯೋಗವಾಗುತ್ತದೆ ಎಂಬ ಭಾವನೆಯಿಂದ ನೀಡಲಾಗುತ್ತದೆ.
ಛತ್ರಿಯನ್ನು ದಾನ ಕೊಡುವ ಸಂದರ್ಭದಲ್ಲಿ ಹೇಳುವ ಮಂತ್ರ ಹೀಗಿದೆ ;
ಇಹಮೃತ್ರಾತಪತ್ರಾಣಂ ಕುರು ಮೇ ಕೇಶವ ಪ್ರಭೋ |
ಛತ್ರಂ ತ್ವತ್‌ಪ್ರೀತಯೇ ದತ್ತಂ ಮಮಾಸ್ತು ಚ ಸದಾ ಶುಭಮ್||
ಈ ಶ್ಲೋಕದ ಅರ್ಥ ಹೀಗಿದೆ : ಕೇಶವನೇ ಈ ಛತ್ರಿಯನ್ನು ನಾನು ನಿಮ್ಮ ಕೃಪೆ ಪಡೆಯಲು ದಾನವಾಗಿ ನೀಡಿದ್ದೇನೆ. ಇದು ನನಗೆ ಈ ಲೋಕದಲ್ಲಿ ಮತ್ತು ಪರಲೋಕದಲ್ಲಿ ಬಿಸಿಲಿನಿಂದ ರಕ್ಷಣೆ ಮಾಡಲಿದೆ. ಹಾಗಾಗಿ ಈ ದಾನದಿಂದ ಸದಾ ನನ್ನ ಕಲ್ಯಾಣವಾಗುತ್ತಿರುವಂತೆ ಹರಸು.
ಯಾವ ವಸ್ತುವಿನ ದಾನದಿಂದ ಏನು ಲಾಭ?
- ವಸ್ತ್ರದಾನದಿಂದ ಆಯಸ್ಸುವೃದ್ಧಿಯಾಗುತ್ತದೆ.
- ಭೂ ದಾನದಿಂದ ಬ್ರಹ್ಮ ಲೋಕ ಪ್ರಾಪ್ತಿ.
- ಜೇನು ದಾನದಿಂದ (ಸಣ್ಣ ಕಂಚಿನ ಪಾತ್ರೆಯಲ್ಲಿ ನೀಡಬೇಕು) ಪುತ್ರ ಭಾಗ್ಯ
- ಗೋದಾನ ದಾನದಿಂದ ಋಷಿ ದೇವ, ಪಿತೃ ಪ್ರೀತಿ
- ಬೆಟ್ಟದನೆಲ್ಲಿ ಕಾಯಿ ದಾನದಿಂದ ಜ್ಞಾನ ಪ್ರಾಪ್ತಿ
- .ದೇವಾಲಯದಲ್ಲಿ ದೀಪ ದಾನದಿಂದ ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ.
- ದೀಪ ದಾನದಿಂದ ಲೋಪ ಹರಣ
- ಬೇಳೆ ಕಾಳಿನ ದಾನದಿಂದ ದೀರ್ಘಾಯುಸ್ಸು ಸಿದ್ಧಿ.
- ಅಕ್ಕಿ ದಾನದಿಂದ ಎಲ್ಲಾ ವಿಧವಾದ ಪಾಪ ನಾಶ
- ತಾಂಬೂಲ ದಾನದಿಂದ ಸ್ವರ್ಗ ಪ್ರಾಪ್ತಿ
- ಕಂಬಳಿ ದಾನದಿಂದ ವಾಯುರೋಗ ನಾಶ
- ಹತ್ತಿ ದಾನದಿಂದ ಕುಷ್ಠ ರೋಗ ನಿವಾರಣೆ
- ಜನಿವಾರ ದಾನದಿಂದ ಬ್ರಾಹ್ಮಣ ಜನ್ಮ ಲಭಿಸುತ್ತದೆ
- ತುಳಸಿ ದಾನದಿಂದ ಸ್ವರ್ಗ ಪ್ರಾಪ್ತಿ
- ತುಪ್ಪ ದಾನದಿಂದ ರೋಗ ನಿವಾರಣೆ
- ಅನ್ನ ದಾನದಿಂದ ದಾರಿದ್ರ ನಾಶವಾಗುತ್ತದೆ, ಸಾಲಗಳು ತೀರುತ್ತದೆ.
- ವಸ್ತು ದಾನದಿಂದ ಆಯುಷ್ಯ ಹೆಚ್ಚುತ್ತದೆ.
- ತುಪ್ಪ ದಾನದಿಂದ ರೋಗ ನಿವಾರಣೆಯಾಗುತ್ತದೆ.
- ಹಾಲು ದಾನದಿಂದ ದುಖಃ ತೀರುತ್ತದೆ.
- ಮೊಸರು ದಾನದಿಂದ ಇಂದ್ರಿಯಗಳು ವೃದ್ಧಿಯಾಗುತ್ತವೆ.
- ಹಣ್ಣು ಗಳ ದಾನದಿಂದ ಬುದ್ಧಿ, ಸಿದ್ಧಿಯು ಲಭಿಸುತ್ತದೆ.
- ಬಂಗಾರ ದಾನದಿಂದ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ.
- ಬೆಳ್ಳಿ ದಾನದಿಂದ ಮನಸ್ಸಿನಚಿಂತೆ ನೀಗುತ್ತದೆ.
- ತೆಂಗಿನಕಾಯಿ ದಾನದಿಂದ ಅಂದುಕೊಂಡ ಕಾರ್ಯ ನೆರವೇರುತ್ತದೆ.
- ನೆಲ್ಲಿಕಾಯಿ ದಾನದಿಂದ ಜ್ಞಾನ ದಕ್ಕುತ್ತದೆ.
ನಿಮ್ಮ ಜಾತಕದಲ್ಲಿ ಯಾವ ಗ್ರಹ ದೋಷವಿದೆ ಎಂಬುದನ್ನು ತಿಳಿದುಕೊಂಡು ಆ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳನ್ನು ದಾನ ಮಾಡುವುದು ಸೂಕ್ತ ಎಂದು ಜ್ಯೋತಿಷ ಶಾಸ್ತ್ರ ಹೇಳುತ್ತದೆ.
ಇದನ್ನೂ ಓದಿ : Vastu Tips : ಮನೆಯ ಡೈನಿಂಗ್ ಹಾಲ್‌ನಲ್ಲಿ ಈ ಆಕಾರದ ಟೇಬಲ್ ಇರಲೇಬಾರದು!