ಮಂಗಳೂರು: ಇಲ್ಲಿಯ ಮಳಲಿ ಮಸೀದಿ ಸ್ಥಳದಲ್ಲಿ ದೈವೀ ಶಕ್ತಿ ಇರುವುದು ನಿಜ. ಇದು ದೈವ ಸಾನ್ನಿಧ್ಯ ಇರುವ ಸ್ಥಳ ಎಂಬುವುದಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕೇರಳದ ಖ್ಯಾತ ಜ್ಯೋತಿಷಿ ದೈವಜ್ಞ ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ.
ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ವಿವಾದ ಸಂಬಂಧ ನಗರದ ರಾಮಾಂಜನೇಯ ಭಜನಾ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳಿಂದ ಏರ್ಪಡಿಸಿದ್ದ ತಾಂಬೂಲ ಪ್ರಶ್ನೆಯ ವೇಳೆ ಅವರು ಮಾತನಾಡಿದರು.
ಮಸೀದಿ ಸ್ಥಳದಲ್ಲಿ ದೈವ ಸಾನ್ನಿಧ್ಯ ಇದೆ. ಪೂರ್ವಕಾಲದಲ್ಲಿ ಇಲ್ಲಿ ಮಠದ ರೀತಿಯ ಪ್ರದೇಶ ಇದಾಗಿತ್ತು. ಅದರಲ್ಲೂ ಶಿವನ ದೇವಾಲಯವಿರಬಹುದು, ಮಠ ನಾಶವಾಗಲು ಜೀವಹಾನಿ ಕಾರಣವಾಗಿರಬಹುದು. ಇಲ್ಲಿದ್ದ ದೇವಾಲಯ ನಾಶವಾಗಿರುವುದರಿಂದ ದೋಷ ಪರಿಹಾರ ಆಗಬೇಕಾಗಿದೆ. ಈ ಜಾಗದ ಮಾಲೀಕರು ಹಾಗೂ ಸ್ಥಳೀಯರು ಒಟ್ಟಾಗಿ ಜೀರ್ಣೋದ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರ ಕಾದಿದೆ ಎಂದವರು ತಿಳಿಸಿದ್ದಾರೆ.
ಹಿಂದೂಗಳಿಗೆ ಸಿಗುವ ಯೋಗ: ದೇಗುಲ ನಾಶವಾದ ಸ್ಥಳದಲ್ಲಿ ಸಾನ್ನಿಧ್ಯ ನಿರ್ಮಿಸುವಂತಿಲ್ಲ. ಆದರೆ ಈ ಜಾಗದಲ್ಲಿ ಪುನಃಸ್ಥಾಪಿಸುವ ಅವಕಾಶ ಇದೆ. ಈ ಎಲ್ಲರೂ ಒಟ್ಟಾಗಿ ಸೇರಿ ಪುನರ್‌ಸ್ಥಾಪಿಸಬೇಕು. ಈ ಹಿಂದೆ ಶೈವ-ವೈಷ್ಣವ ವಿವಾದದಿಂದ ದೇವಾಲಯ ನಾಶವಾಗಿರಬಹುದು. ಆ ಸ್ಥಾನ ಹಿಂದೂಗಳಿಗೆ ಸಿಗುವ ಯೋಗವಿದೆ. ಇದಕ್ಕೆ ದೈವಾನುಗ್ರಹವಿದೆ. ಈ ಕ್ಷೇತ್ರದಲ ಉತ್ತರ ದಿಕ್ಕಿನಲ್ಲಿ ಗುರುವೊಬ್ಬರು ತಪಸ್ಸು ಮಾಡಿದ ಕ್ಷೇತ್ರವೂ ಇದೆ. ಯಾವುದೋ ಒಂದು ಕಾಲಘಟ್ಟದಲ್ಲಿ ಕ್ಷೇತ್ರ ಕಳೆದುಹೋಗಿದೆ. ಇದನ್ನು ಅಭಿವೃದ್ಧಿಪಡಿಸಿದರೆ ಮುಸ್ಲಿಮರಿಗೂ ಒಳ್ಳೆಯದಾಗುತ್ತದೆ ಎಂದು ಜಿ.ಪಿ.ಗೋಪಾಲಕೃಷ್ಣ ಪಣಿಕ್ಕರ್ ತಿಳಿಸಿದ್ದಾರೆ.
ಈ ಬಗ್ಗೆ ಶಾಸಕ ಭರತ್ ಶೆಟ್ಟಿ ಮಾತನಾಡಿ, ತಾಂಬೂಲ ಪ್ರಶ್ನೆಯಲ್ಲಿ ಶಿವನ ಸಾನ್ನಿಧ್ಯ ಇತ್ತು. ಶೈವ ಪಂಥಕ್ಕೆ ಸಂಬಂಧಿಸಿದ ಮಠ ಇಲ್ಲಿ ಇತ್ತು ಎಂಬುದು ತಿಳಿದು ಬಂದಿದೆ. ಈ ಹಿಂದೆ ಪೂಜೆ ಪುನಸ್ಕಾರ ನಡೆಯುತ್ತಿದ್ದವು. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲು ಅಷ್ಟಮಂಗಲ ಪ್ರಶ್ನೆ ನಡೆಸಬೇಕಾಗುತ್ತದೆ. ಇದಕ್ಕೆ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಯಾವಾಗ ನಡೆಸಬೇಕು ಎಂಬುದನ್ನು ತೀರ್ಮಾನಿಸಲಾಗುತ್ತದೆ. ಬಜರಂಗದಳ ಹಾಗೂ ವಿಹಿಂಪ ಸಂಘಟನೆಗಳು ಕಾನೂನು ಹೋರಾಟಕ್ಕೆ ಈಗಾಗಲೇ ಮುಂದಾಗಿವೆ ಎಂದಿದ್ದಾರೆ.
ಸ್ಥಳದಲ್ಲಿ ದೇಗುಲದ ಅವಶೇಷಗಳು ಈಗಲೂ ಸಿಗುತ್ತವೆ. ಈ ಬಗ್ಗೆ ವಿರೋಧಪಕ್ಷಗಳ ನಾಯಕರು ಟೀಕಿಸುವುದು ನಿಲ್ಲಿಸಬೇಕು. ಸತ್ಯ ಏನೆಂಬುದು ಎಲ್ಲರಿಗೂ ತಿಳಿಯಬೇಕಾಗಿದೆ ಎಂದು ಭರತ್ ಶೆಟ್ಟಿ ತಿಳಿಸಿದರು.
ವಿವಾದದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ʼʼಜಿಲ್ಲಾಡಳಿತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ.
ಮಳಲಿಯ ಮಂದಿರ-ಮಸೀದಿ ವಿವಾದ ಈಗ ದೇಶಾದ್ಯಂತ ಭಾರಿ ಸುದ್ದಿ ಮಾಡುತ್ತಿದೆ. ಮಸೀದಿ ಆವರಣದಲ್ಲಿ ದೈವ ಸಾನ್ನಿಧ್ಯ ಕುರಿತ ತಾಂಬೂಲ ಪ್ರಶ್ನೆ ಕುತೂಹಲ ಮೂಡಿಸಿದೆ.
ದೇವಸ್ಥಾನ ಹಿಂದೂಗಳಿಗೆ ಒಪ್ಪಿಸಿದರೆ ಸೌಹಾರ್ದತೆ ಉಳಿಯುತ್ತದೆ
ಮಳಲಿ ಮಸೀದಿ ಜಾಗದಲ್ಲಿ ಶಾಸ್ತ್ರೋಕ್ತವಾಗಿ ದೇವಸ್ಥಾನ ಪತ್ತೆ ಮಾಡಿರುವುದು ಸ್ವಾಗತಾರ್ಹ, ಈ ಹಿಂದೆಯೇ ಇದು ದೇವಸ್ಥಾನ ಅಂತಾ ಗೊತ್ತಿತ್ತು, ಇದೀಗ ಅಧಿಕೃತವಾಗಿ ಸ್ಪಷ್ಟಪಡಿಸಲಾಗಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಕೊಪ್ಪಳದಲ್ಲಿ ಬುಧವಾರ ಮಾತನಾಡಿದ ಅವರು, ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠವಿತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿನ ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಆ ಸ್ಥಳವನ್ನು ಹಿಂದೂಗಳಿಗೆ ಒಪ್ಪಿಸಬೇಕು. ವಿನಾಕಾರಣ ಗಲಭೆ, ಸಂಘರ್ಷಕ್ಕೆ ಕಾರಣವಾಗಬಾರದು. ಮಳಲಿಯ ದೇವಸ್ಥಾನವನ್ನು ಹಿಂದೂಗಳಿಗೆ ಒಪ್ಪಿಸಿದರೆ ಸೌಹಾರ್ದತೆ ಉಳಿಯುತ್ತದೆ, ಇದು ಇಡೀ ದೇಶಕ್ಕೆ ಮಾದರಿಯಾಗಲಿದೆ ಎಂದರು. ಸರ್ಕಾರ ದತ್ತ ಪೀಠದಲ್ಲಿ ಇನ್ನೂ ಯಾಕೆ ಅರ್ಚಕರನ್ನು ನೇಮಕ ಮಾಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದರಲ್ಲಿ ಬಿಜೆಪಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕಾಣಿಸುತ್ತಿದೆ. ಬಹುಶ ಅವರು ಎಲೆಕ್ಷನ್ ಸಮಯಕ್ಕಾಗಿ ಕಾಯುತ್ತಿದ್ದಾರೇನೋ, ನಮ್ಮಂತಹ ಹೋರಾಟಗಾರರು, ಹಿಂದುವಾದಿಗಳಿಗೆ, ಪ್ರಮಾಣಿಕರಿಗೆ ರಾಜಕೀಯದ ಬಾಗಿಲು ಮುಚ್ವಿದೆ ಎಂದು ತಿಳಿಸಿದ್ದಾರೆ.
ಭವಿಷ್ಯ ಹೇಳುವವರನ್ನು ಬಂಧಿಸಬೇಕು
ಮಸೀದಿ-ಮಂದಿರ ವಿವಾದ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕೀಯ ನಾಯಕ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಅವರಿಗೆ ಏನೇನು ನಂಬಿಕೆ ಇದೆಯೇ ಅದನ್ನು ಮಾಡಿಕೊಳ್ಳಲಿ, ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಸ್ವಂತಕ್ಕೆ ಏನಾದರೂ ಮಾಡಿಕೊಳ್ಳಲಿ, ಆದರೆ ಸರ್ಕಾರ, ಇಲಾಖೆಗಳು ಇದ್ದರೂ ಈ ಮಾಡುವುದು ಸರಿಯಲ್ಲ ಎಂದು ಬೆಂಗಳುರಿನಲ್ಲಿ ತಾಂಬೂಲ ಪ್ರಶ್ನೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಕಿಡಿ ಕಾರಿದ್ದಾರೆ. ಇದೊಂದು ಭಾವನಾತ್ಮಕ ವಿಚಾರ, ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಭವಿಷ್ಯ ಹೇಳುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.