ಬೆಳ್ತಂಗಡಿ: ಕುದ್ಯಾಡಿ ಗ್ರಾಮದ ಅಂಗಣದಮೇಲು ಎಂಬಲ್ಲಿ ತಾಲೂಕಿನಲ್ಲಿಯೇ ಅತಿ ಎತ್ತರದಲ್ಲಿರುವ ಗರಡಿ ಎಂಬ ಖ್ಯಾತಿಯ ನವೀಕೃತ ಶಿಲಾಮಯ ಗರಡಿ (ಕೊಡಮಣಿತ್ತಾಯ ದೈವಸ್ಥಾನ, ಬ್ರಹ್ಮ ಬೈದರ್ಕಳ ಗರಡಿ, ಕುದ್ಯಾಡಿ-ಬರಾಯ) ಯಲ್ಲಿ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವವು ಅಳದಂಗಡಿಯ ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಆಸ್ರಣ್ಣರಾದ ಪ್ರಕಾಶ್ ಭಟ್ ಅವರ ನೇತೃತ್ವದಲ್ಲಿ ಜನವರಿ 24 ರಿಂದ 26ರ ವರೆಗೆ ನಡೆಯಲಿದೆ.
ಜ.24ರಂದು ಪ್ರಾತಃಕಾಲ ಋತ್ವಿಜರ ಆಗಮನ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಉಗ್ರಾಣ ಮುಹೂರ್ತ, ಗಣಹವನ, ಸರ್ಪಸಂಸ್ಕಾರ, ಆಶ್ಲೇಷಾ ಬಲಿ, ವಟುವಾರಾಧನೆ, ನವಗ್ರಹಹೋಮ ನಡೆಯಲಿದೆ. ಸಂಜೆ 5ರಿಂದ ಸಪ್ತಶುದ್ಧಿ, ಗೋಪೂಜೆ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ಪ್ರಾಕಾರ ಬಲಿ, ದೈವಗಳ ಅಧಿವಾಸ, ಕಲಶ ಪೂಜೆ ನಡೆದು, ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಜ.25ರಂದು ಬೆಳಗ್ಗೆ 7.30ರಿಂದ ಪುಣ್ಯಾಹವಾಚನ, ತೋರಣ ಮುಹೂರ್ತ, ಗಣಹವನ, ಪ್ರಧಾನ ಹೋಮ, ದೈವಗಳ ಭಂಡಾರ ಆಗಮನ ನಡೆದು, 9.17ರ ಕುಂಭ ಲಗ್ನದಲ್ಲಿ ಕಲಶಾಭಿಷೇಕ, ದೈವಗಳಿಗೆ ಪರ್ವಸೇವೆ ನಡೆಯಲಿದೆ. ಬಳಿಕ ಕೊಡಮಣಿತ್ತಾಯ ದೈವ ಹಾಗೂ ಬೈದರ್ಕಳ ದರ್ಶನ ಸೇವೆ ನಡೆದು, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆ: ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಅಜಿಲ ಸೀಮೆ-ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ್ ಅಜಿಲರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್ ಕಾರ್ಕಳ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ಪ್ರಭಾಕರ ಬಂಗೇರ, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 8 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, 10.30ರಿಂದ ‘ದೈವ’ ಹಾಗೂ ‘ಕೊಡಮಣಿತ್ತಾಯ ದೈವ’ದ ನೇಮೋತ್ಸವ ನಡೆಯಲಿದೆ.
ಜ.26ರಂದು ರಾತ್ರಿ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ. ಕಂಕನಾಡಿಯ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಅಳದಂಗಡಿಯ ಸತ್ಯದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ, ಗೆಜ್ಜೆಗಿರಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪಿತಾಂಬರ ಹೆರಾಜೆ ಮತ್ತಿತರರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬಳಿಕ, 8 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, 10.30ರಿಂದ ಬೈದರ್ಕಳ ನೇಮೋತ್ಸವ, ಪ್ರಾತಃಕಾಲ 3 ಗಂಟೆಗೆ ಮಾನಿಬಾಲೆ ನೇಮೋತ್ಸವ ನಡೆಯಲಿದೆ. ಬೆಳಗ್ಗೆ 6 ಗಂಟೆಗೆ ಸ್ಥಳ ಶುದ್ಧಿ, ಕಲಶಹೋಮ ನಡೆದು, ದೈವಗಳ ಭಂಡಾರ ನಿರ್ಗಮನವಾಗಲಿದೆ.
ಇದನ್ನೂ ಓದಿ | Hombuja Jain Matha: ಜ. 22ರಿಂದ 27 ರವರೆಗೆ ಹೊಂಬುಜ ಜೈನ ಮಠದಲ್ಲಿ ಪಂಚ ಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವ