Site icon Vistara News

ಭದ್ರಾವತಿ: 24 ವರ್ಷಗಳ ನಂತರ ನಡೆದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ

ಶ್ರೀ ಹಿರಿಮಾವುರದಮ್ಮ ದೇವಿ

ಭದ್ರಾವತಿ: ತಾಲೂಕಿನ ಆನವೇರಿಯ ಪುರಾಣ ಪ್ರಸಿದ್ಧ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಉತ್ಸವ ಬರೊಬ್ಬರಿ 24 ವರ್ಷಗಳ ನಂತರ ನಡೆದಿದೆ. ದೇಗುಲದ ಸಂಪ್ರದಾಯದ ಪ್ರಕಾರ ದೇವಿ ಅಪ್ಪಣೆ ನೀಡಿದರೆ ಮಾತ್ರ ಇಲ್ಲಿ ಜಾತ್ರೆ ನಡೆಸಲಾಗುತ್ತದೆ. ಆದರೆ ಕಳೆದ 24 ವರ್ಷಗಳಲ್ಲಿ ಜಾತ್ರೆ ನಡೆಸಲು ದೇವಿ ಒಪ್ಪಿಗೆಯನ್ನೇ ನೀಡಿರಲಿಲ್ಲ!

ಈ ಬಾರಿ ದೇವಿ ಅಪ್ಪಣೆ ನೀಡಿದ್ದು, ಅದ್ದೂರಿಯಾಗಿ ಜಾತ್ರೆ ನಡೆಸಲಾಯಿತು. ಏಳು ಗ್ರಾಮಗಳ ಶಕ್ತಿದೇವತೆ ಆಗಿರುವ ಹೊಳೆಹೊನ್ನೂರು ಹೋಬಳಿಯ ಆನವೇರಿ ಗ್ರಾಮದ ಶ್ರೀ ಹಿರಿಮಾವುರದಮ್ಮ ದೇವಿ ಜಾತ್ರೆ ಪ್ರಯುಕ್ತ ಸಿಡಿ ಉತ್ಸವ ವಿಶೇಷವಾಗಿ ಜರುಗಿತು. ಕೊಂಡಿ ಸಿಡಿ ಎಂದೇ ಪ್ರಸಿದ್ಧಿ ಪಡೆದಿರುವ ಈ ಸಿಡಿ ಆಡುವ ವ್ರತಧಾರಿಗಳು ಪುಣ್ಯ ತೀರ್ಥ ಸ್ನಾನ ಮಾಡಿ, ಮಡಿಯುಟ್ಟು ಕಟ್ಟುನಿಟ್ಟಿನ ಉಪವಾಸ ಮಾಡಿರುತ್ತಾರೆ.

ಇದನ್ನೂ ಓದಿ | ಮಾರಮ್ಮನ ಜಾತ್ರೆಗೆ ಮುಸ್ಲಿಮರ ಪಾನೀಯ: ಚಂದ್ರಾ ಲೇಔಟ್‌ನಲ್ಲಿ ಚಂದದ ಸೌಹಾರ್ದತೆ

ಸಿಡಿ ಕಂಬದ ಕೊಂಡಿಗೆ ವ್ರತಧಾರಿ ಶ್ರೀನಿವಾಸ್

ಸಿಡಿ ಹಾಕಿಕೊಳ್ಳುವ ಭಕ್ತನನ್ನು ಸಿಡಿ ಕಂಬದ ಕೊಂಡಿಗೆ ಸಿಕ್ಕಿಸಲಾಗುತ್ತದೆ. ಈ ಬಾರಿ ವ್ರತಧಾರಿ ಶ್ರೀನಿವಾಸ್ ಅವರ ಬೆನ್ನು ಭಾಗದ ಚರ್ಮಕ್ಕೆ ಭಂಡಾರ ಹಾಕಿ ಮೊನಚಾದ ಕೊಂಡಿ ಸಿಕ್ಕಿಸಲಾಗಿತ್ತು. ಬಳಿಕ ಮೂರು ಸುತ್ತು ಸಿಡಿ ಕಂಬ ತಿರುಗಿಸಿ ಭಕ್ತಿಯ ಪರಾಕಷ್ಠೆ ಮೆರೆದರು. ಈ ವೇಳೆ ಸೇರಿದ್ದ ಜನಸ್ತೋಮ ಚಪ್ಪಾಳೆ, ಶಿಳ್ಳೆ ಹೊಡೆದು ʼʼಉಧೋ…. ಉಧೋʼʼ ಎಂದು ದೇವತೆಗೆ ಜಯಘೋಷ ಕೂಗಿದರು. ಈ ಸಿಡಿ ಉತ್ಸವ ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸಿದ್ದರು.

ಬಿ.ವೈ.ರಾಘವೇಂದ್ರ ಅವರಿಂದ ದೇವಿ ದರ್ಶನ

ಜಾತ್ರೆಯ ಹಿಂದಿನ ದಿನವಾದ ಮಂಗಳವಾರದಂದು ಸುತ್ತಲ ಏಳು ಗ್ರಾಮಗಳ ಮಹಿಳೆಯರು ಅಮ್ಮನವರಿಗೆ ಮಡಿಲಕ್ಕಿ ಸೀರೆ ಹಾಗೂ ಕುಪ್ಪಸ ಸಮರ್ಪಿಸಿದ್ದರು. ಬಳಿಕ ದೇವಿಯ ದರ್ಶನ ಪಡೆದು ಹಣ್ಣು, ಕಾಯಿ, ಪೂಜೆ ಮಾಡಿಸಿ ಕುಟುಂಬದ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಹಾಗೂ ಸಂಪತ್ತು ವೃದ್ಧಿಸುವಂತೆ ದೇವರಲ್ಲಿ ಪ್ರಾರ್ಥಿಸಿದ್ದರು.

ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಶ್ರೀ ದೇವಿಗೆ ರಜತ ಮುಖವಾಡ ಹಾಕಲಾಗಿತ್ತು. ವಿಶೇಷ ಪುಷ್ಪಾಲಂಕಾರ ಮಾಡಿದ್ದು ಭಕ್ತರ ಮನಸೂರೆಗೊಂಡಿತು. ಇಡೀ ಗ್ರಾಮಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ ರಾತ್ರಿ ಲೇಸರ್ ಶೋ ಹಾಗೂ ಡಿಜೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ವಿಧಾನ ಪರಿಷತ್‌ ಸದಸ್ಯರಾದ ಅರುಣ್, ರುದ್ರೇಗೌಡ, ಆಯನೂರು ಮಂಜುನಾಥ್, ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಮೊದಲಾದವರು ಈ ಜಾತ್ರೆಯಲ್ಲಿ ಭಾಗವಹಿಸಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ| ಮಾರಮ್ಮನ ಜಾತ್ರೆಗೆ ಮುಸ್ಲಿಮರ ಪಾನೀಯ: ಚಂದ್ರಾ ಲೇಔಟ್‌ನಲ್ಲಿ ಚಂದದ ಸೌಹಾರ್ದತೆ

Exit mobile version