Site icon Vistara News

Thaileshwara Ganigara Mutt: ಗಾಣಿಗ ಮಹಾಸಂಸ್ಥಾನವನ್ನು ಉಳಿಸಿ ಬೆಳೆಸಬೇಕಿದೆ: ಜಯೇಂದ್ರ ಪುರಿ ಸ್ವಾಮೀಜಿ

Thaileshwara Ganigara Mutt in Bangalore

#image_title

ಬೆಂಗಳೂರು: ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠವನ್ನು (Thaileshwara Ganigara Mutt) ಗಾಣಿಗ ಸಮುದಾಯದ ಎಲ್ಲರೂ ಸೇರಿ ಉಳಿಸಿ ಬೆಳೆಸಬೇಕಿದೆ ಎಂದು ಕೈಲಾಸಾಶ್ರಮದ ಜಯೇಂದ್ರ ಪುರಿ ಸ್ವಾಮೀಜಿ ಕರೆ ನೀಡಿದರು.

ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ನಗರೂರಿನ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪೂರ್ಣಾನಂದಪುರಿ ಸ್ವಾಮೀಜಿ ಅವರ ಪೀಠಾರೋಹಣದ ಮೊದಲ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.

ಗಾಣಿಗ ಜನಾಂಗಕ್ಕೆ ಈವರೆಗೂ ಗುರುಪೀಠ ಇರಲಿಲ್ಲ. ಪೂರ್ಣಾನಂದಪುರಿ ಸ್ವಾಮೀಜಿ ಅವರ ಶ್ರಮದ ಫಲವಾಗಿ ಪೀಠ ಸ್ಥಾಪನೆಯಾಗಿದೆ. ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಜನಾಂಗದವರ ಮೇಲಿದೆ. ಪೂರ್ಣಾನಂದಪುರಿ ಸ್ವಾಮೀಜಿ ಅವರು ಪೂರ್ವಾಶ್ರಮದ ಎಲ್ಲವನ್ನೂ ತ್ಯಾಗ ಮಾಡಿ, ತಮಗೆ ಬರುವ ಪಿಂಚಣಿ ಹಣವನ್ನೂ ಮಠ ನಡೆಸಲು ಮೀಸಲಿಟ್ಟಿದ್ದಾರೆ. ವೃದ್ಧಾಪ್ಯದಲ್ಲಿ ಬೇರೆಯವರ ಆಸರೆ ಬೇಕಿರುತ್ತದೆ. ಆದರೆ, ಇವರು ಇಳಿ ವಯಸ್ಸಿನಲ್ಲಿಯೂ ಗಾಣಿಗ ಜನಾಂಗಕ್ಕೆ ಆಸರೆಯಾಗಿದ್ದಾರೆ. ಸಾಮಾಜಿಕ ಕಾರ್ಯಗಳಿಗಾಗಿ ಸಂಪಾದನೆಯ ಶೇ 10ರಷ್ಟನ್ನು ಮಠಕ್ಕೆ ಮೀಸಲಿಡುವ ಜತೆಗೆ ಜನ ಬೆಂಬಲವನ್ನೂ ನೀಡಬೇಕು ಎಂದು ಗಾಣಿಗರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ | Prerane : ಭಾರತದ ಆತ್ಮ; ಅಧ್ಯಾತ್ಮ

ಪೂರ್ಣಾನಂದಪುರಿ ಸ್ವಾಮೀಜಿ ಮಾತನಾಡಿ, ಗಾಣಿಗರಿಗೆ ಗುರುಪೀಠ ಸ್ಥಾಪನೆಯ ನನ್ನ ಗುರಿ ಈಡೇರಿದೆ. ಬಡವರಿಗೆ, ಅನಾಥರಿಗೆ ಉಚಿತ ವಸತಿ ಹಾಗೂ ಶಿಕ್ಷಣ ನೀಡಲು ಶಾಲೆ ತೆರೆಯಲಾಗುತ್ತಿದ್ದು, ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಕಟ್ಟಡ ಪೂರ್ಣಗೊಳ್ಳಲು ದಾನಿಗಳು ಸಹಕರಿಸಬೇಕು. ಇದು ನನಗಾಗಿ ಅಲ್ಲ, ಸಮಾಜಕ್ಕಾಗಿ ಎಂದರು.

ತೊಗಟವೀರ ಕ್ಷತ್ರಿಯ ನೇಕಾರ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ಮಾತನಾಡಿ, ವ್ಯಕ್ತಿ ಏನನ್ನಾದರೂ ಮಾಡುತ್ತಿದ್ದಾನೆ ಎಂದರೆ ಅಸೂಯೆ ಪಡದೆ ಪ್ರೋತ್ಸಾಹಿಸಬೇಕು. ಗುರುಗಳಿಂದ ಸಂಸ್ಕಾರ ಪಡೆದಾಗ ಬೆಳಕು ಮೂಡುತ್ತದೆ ಎಂದರು.

ಇದನ್ನೂ ಓದಿ | Navavidha Bhakti : ಎಲ್ಲ ಕರ್ಮಗಳೂ ಸೇವೆಯೇ ಆಗಬಹುದು!

ಕಾಂಗ್ರೆಸ್ ಮುಖಂಡ ವಿ.ಆರ್‌. ಸುದರ್ಶನ್ ಮಾತನಾಡಿ, ನಿವೃತ್ತಿಯಾದವರು ಮಠದ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕೋಲಾರದ ಜ್ಯೋತಿ ಎಜುಕೇಷನಲ್ ಟ್ರಸ್ಟ್ ಮೂಲಕ ಪ್ರತಿವರ್ಷ ಮಠಕ್ಕೆ 1 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.

Exit mobile version