ಬೆಂಗಳೂರು: ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ (Kannada New Movie) ಮೂಲಕ ಎಲ್ಲರ ಗಮನ ಸೆಳೆದ ನಿರ್ದೇಶಕ ಹಯವದನ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಸೋದೆ ಶ್ರೀ ವಾದಿರಾಜ ಗುರು ಸಾರ್ವಭೌಮರ ಜೀವನಾಧಾರಿತ ಸಿನಿಮಾವನ್ನು ನಿರ್ದೇಶಿಸುವುದಾಗಿ ಪ್ರಕಟಿಸಿದ್ದಾರೆ.
ಸೋದೆ ಶ್ರೀ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಆಶೀರ್ವಾದೊಂದಿಗೆ ಸಿನಿಮಾ ಸೆಟ್ಟೇರಲಿದೆ. ವಾದಿರಾಜ ಗುರುಗಳ ಜಯಂತಿಯಂದೇ ಕುಂದಾಪುರದ ಹೂವಿನಕೆರೆ ಶ್ರೀ ವಾದಿರಾಜ ಸ್ವಾಮಿಗಳ ಮಠದಲ್ಲಿ ಸಿನಿಮಾ ನಿರ್ಮಾಣದ ಕುರಿತು ಘೋಷಣೆ ಹೊರಡಿಸಿರುವುದು ವಿಶೇಷವಾಗಿತ್ತು.
ಈ ಬಗ್ಗೆ ನಿರ್ದೇಶಕ ಹಯವದನ ಮಾಹಿತಿ ಹಂಚಿಕೊಂಡಿದ್ದು, ʻʻಸ್ಕ್ರಿಪ್ಟ್ ಹಾಗೂ ರಿಸರ್ಚ್ ವರ್ಕ್ ನಡೆಯುತ್ತಿದೆ. ಸಿನಿಮಾದ ತಾರಾಗಣ, ತಾಂತ್ರಿಕ ಬಳಗ ಇದ್ಯಾವುದು ಇನ್ನೂ ಅಂತಿಮವಾಗಿಲ್ಲ. 15ನೇ ಶತಮಾನದಲ್ಲಿ ನಡೆದ ಕಥೆ ಇದು. ಶ್ರೀ ವಾದಿರಾಜ ಸ್ವಾಮಿಗಳು 120 ವರ್ಷಗಳು ಬದುಕಿದ್ದರು. ಆ ಕಾಲಘಟ್ಟವನ್ನು ಸೃಷ್ಟಿ ಮಾಡುವುದೇ ಒಂದು ಚಾಲೆಂಜ್. ಸಿಜಿ, ಗ್ರಾಫಿಕ್ಸ್ ಹೆಚ್ಚಾಗಿರುತ್ತದೆ. ಭಕ್ತಿ, ಸಮಾಜ ಸೇವೆ, ಮಾನವೀಯತೆ ಬಗ್ಗೆ ಸ್ವಾಮಿಗಳು ಹೇಳಿದ್ದಾರೆ. ಸಮಾಜ ಸುಧಾರಣೆ ಮಾಡಿದ್ದಾರೆ, 15ನೇ ಶತಮಾನದಲ್ಲೇ ಕನ್ನಡದಲ್ಲಿ ಕೀರ್ತನೆಗಳನ್ನು ನೀಡಿದ್ದಾರೆ, ಸಮಾಜಕ್ಕೆ ಅವರ ಕೊಡುಗೆ ತುಂಬ ಇದೆ. ಭಕ್ತಿ ಮತ್ತು ಗೌರವದಿಂದ ಅವರ ಕಥೆಯನ್ನು ತೆರೆ ಮೇಲೆ ತರುತ್ತಿದ್ದೇವೆʼʼ ಎಂದರು.
ಇದನ್ನೂ ಓದಿ: Kannada New Movie: ನಾಳೆ ರಾಜ್ಯಾದ್ಯಂತ ಪ್ರಥಮ್ ಅಭಿನಯದ ʻನಟ ಭಯಂಕರʼ ಸಿನಿಮಾ ರಿಲೀಸ್
ವಾದಿರಾಜ ಸ್ವಾಮಿಗಳ ಮಠದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ ʻʻವಾದಿರಾಜ ಗುರುಗಳು15, 16ನೇ ಶತಮಾನದಲ್ಲಿ ಬಂದ ಮೇರು ವ್ಯಕ್ತಿ. ಈ ಜಗತ್ತಿಗೆ ಬಹುಮುಖ ಸಂದೇಶ ನೀಡಿದವರು. ಅವರು 113 ವರ್ಷ ಸನ್ಯಾಸ ಜೀವನ ನಡೆಸಿದ್ದಾರೆ. ಅವರ 120 ವರ್ಷಗಳ ಜೀವನವನ್ನು ಒಂದು ಸಿನಿಮಾದಲ್ಲಿ ತೋರಿಸುವುದು ಕಷ್ಟಸಾಧ್ಯ. ಈ ಹಿಂದೆ ಹಲವು ಜನರು ಗುರುಗಳ ಧಾರಾವಾಹಿ, ಸಿನಿಮಾ ಮಾಡುವುದಾಗಿ ಬಂದಿದ್ದರು. ಆದರೆ ನಾವು ಒಪ್ಪಿಕೊಂಡಿರಲಿಲ್ಲ. ಒಬ್ಬ ಯೋಗ್ಯ ವ್ಯಕ್ತಿ ಬರಬೇಕು ಎಂದು ಕಾಯುತ್ತಿದ್ದೇವು. ಆಗ ಬಂದವರೇ ನಿರ್ದೇಶಕ ಹಯವದನ. ಅವರು ವಾದಿರಾಜ ಗುರುಗಳ ಭಕ್ತರು ಕೂಡ ಹೌದು, ಅವರಲ್ಲಿ ಅಪಾರ ಶ್ರದ್ಧೆ ಇದೆ. ಸಮಾಜಕ್ಕೆ ವಾದಿರಾಜರು ಯಾವ ರೀತಿ ಸಂದೇಶ ನೀಡಿದ್ದರು ಎನ್ನುವುದನ್ನು ಸಿನಿಮಾದಲ್ಲಿ ತರಬೇಕು ಎಂದು ನಾವು ಹೇಳಿದ್ದೇವೆʼʼ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇದನ್ನೂ ಓದಿ: Kannada New Movie: ‘ಹೊಂದಿಸಿ ಬರೆಯಿರಿ’ ಟ್ರೈಲರ್ ಬಿಡುಗಡೆಗೊಳಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಸಿನಿಮಾಶೀರ್ಷಿಕೆ, ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮುಂದಿನ ದಿನಗಳಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್ಸ್ ಹಾಗೂ ಕೃಷ್ಣಛಾಯ ಚಿತ್ರ ಬ್ಯಾನರ್ ನಡಿ ಪವನ್ ಸಿಮಿಕೇರಿ ಮತ್ತು ಸಿಂಧು ಹಯವದನ ಹಾಗೂ ಸ್ನೇಹಿತರು ಚಿತ್ರದ ನಿರ್ಮಾಣ ಸಾರಥ್ಯ ವಹಿಸಿಕೊಂಡಿದ್ದಾರೆ.