Site icon Vistara News

Kedarnath Dham: ಕೇದಾರನಾಥ ದೇಗುಲದ ಬಗ್ಗೆ ನೀವು ತಿಳಿಯಲೇಬೇಕಾದ ವಿಚಾರಗಳಿವು

Kedarnath temple facts

#image_title

ಬೆಂಗಳೂರು: ಕೇದಾರನಾಥ ದೇಗುಲ(Kedarnath Dham) ಹಿಂದೂಗಳಿಗೆ ಅತ್ಯಂತ ಪವಿತ್ರ ಕ್ಷೇತ್ರ ಎನಿಸಿಕೊಂಡಿರುವ ತಾಣ. ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿ ಪರ್ವತಗಳ ಸಾಲಿನ ಮಧ್ಯದಲ್ಲಿ ಇರುವ ದೇಗುಲ ಪ್ರತಿ ವರ್ಷ ಲಕ್ಷಾಂತರ ಭಕ್ತಾದಿಗಳನ್ನು ಕಾಣುತ್ತದೆ. ಈ ವಿಶೇಷ ದೇಗುಲದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ವಿಚಾರಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ಸೌಂದರ್ಯದ ಒಡಲು

ಹಿಮಾಲಯ ಹೆಚ್ಚೆಚ್ಚು ಭಕ್ತರನ್ನು ಸೆಳೆಯುವುದಕ್ಕೆ ಕಾರಣ ಅದಿರುವ ಸ್ಥಳವೂ ಹೌದು. ಸುತ್ತಲೂ ಹಿಮಾವೃತ ಪರ್ವತಗಳು, ನದಿಗಳ ನಡುವೆ ನೆಲೆಗೊಂಡಿರುವ ಧಾರ್ಮಿಕ ಸ್ಥಳವಿದು. ಟ್ರೆಕ್ಕಿಂಗ್‌ನಂತಹ ಸಾಹಸಗಳನ್ನು ಇಷ್ಟಪಡುವವರಿಗೂ ಇದು ಹೇಳಿ ಮಾಡಿಸಿರುವ ಸ್ಥಳ. ಮಂದಾಕಿಣಿ ನದಿ ಈ ದೇಗುಲದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು. ಸಮುದ್ರ ಮಟ್ಟದಿಂದ 3584 ಮೀಟರ್‌ನಷ್ಟು ಎತ್ತರವಿರುವ ಈ ಸ್ಥಳ ಧಾರ್ಮಿಕ ಸ್ಥಳದ ಜತೆಯಲ್ಲಿ ಉತ್ತಮ ಪ್ರವಾಸಿ ತಾಣವೂ ಹೌದು.

ಹಿಮಾವೃತ ಕೇದಾರನಾಥ ದೇಗುಲ

ದೇಗುಲ ನಿರ್ಮಾಣ

ಕೇದಾರನಾಥ ಅತ್ಯಂತ ಗಟ್ಟಿಮುಟ್ಟಾದ ದೇಗುಲಗಳಲ್ಲಿ ಒಂದು. 12 ಅಡಿಯಷ್ಟು ದಪ್ಪ ಹಾಗೆಯೇ 6 ಅಡಿಯಷ್ಟು ಆಳವಾದ ಪಾಯ ಇದಕ್ಕಿದೆ. ಒಟ್ಟಾರೆಯಾಗಿ ದೇಗುಲವು 85 ಅಡಿ ಎತ್ತರ, 187 ಅಡಿ ಉದ್ದ ಮತ್ತು 80 ಅಡಿ ಅಗಲವಿದೆ. ದೇಗುಲದ ಹೊರಗೋಡೆಗಳಲ್ಲಿ ಭವ್ಯವಾದ ಕೆತ್ತನೆಗಳೂ ಇವೆ.

ಆಧ್ಯಾತ್ಮಿಕ ಹಿನ್ನೆಲೆ

ಶಿವನನ್ನು ಕೇದಾರನಾಥನ ರೂಪದಲ್ಲಿ ಪೂಜಿಸಲಾಗುವ ಈ ದೇಗುಲದ ದರ್ಶನ ಮಾಡಿದರೆ ಮೋಕ್ಷ ಸಿಗುತ್ತದೆ ಎನ್ನುವುದು ಹಿಂದೂಗಳ ನಂಬಿಕೆ. ಈ ದೇಗುಲದ ಮಹತ್ವದ ಬಗ್ಗೆ ಮಹಾಭಾರತದಲ್ಲಿಯೂ ಉಲ್ಲೇಖವಿದೆ. ಪಠ್ಯಗಳ ಪ್ರಕಾರ, ಪಾಂಡವರು ಪಂಚ ಕೇದಾರಗಳನ್ನು ನಿರ್ಮಿಸಿದರು, ಗಳಲ್ಲಿ ಒಂದು ಕೇದಾರನಾಥ. ಈ ದೇಗುಲ ನಿರ್ಮಾಣದಿಂದಾಗಿ ಅವರ ಪಾಪ ವಿಮೋಚನೆ ಆಯಿತು ಎನ್ನುವ ನಂಬಿಕೆಯಿದೆ.

ಜ್ಯೋತಿರ್ಲಿಂಗ

ಕೇದಾರನಾಥ ದೇಗುಲ

ಹಿಂದೂಗಳು ನಂಬುವ 12 ಜ್ಯೋತಿರ್ಲಿಂಗಗಳ ಪೈಕಿ ಕೇದಾರನಾಥವೂ ಒಂದಾಗಿದೆ. ಮತ್ತು ಇದು ಎಲ್ಲ ಜ್ಯೋತಿರ್ಲಿಂಗಗಳಿಗಿಂತ ಅತ್ಯುನ್ನತವಾದದ್ದು ಎಂದು ನಂಬಲಾಗುತ್ತದೆ. ಇಲ್ಲಿನ ಗರ್ಭ ಗುಡಿಯಲ್ಲಿ ಇರಿಸಲಾಗಿರುವ ಲಿಂಗವು ಸಾವಿರಾರು ವರ್ಷಗಳಿಂದ ಇದ್ದು, ಅದು ಗಾತ್ರದಲ್ಲಿ ಕಡಿಮೆಯಾಗಿ ಇದೀಗ ತ್ರಿಕೋನ ಆಕಾರದಲ್ಲಿದೆ.

ಭೇಟಿ ಸಮಯ

ಬೇರೆ ದೇಗುಲಗಳಂತೆ ಈ ಕೇದಾರನಾಥಕ್ಕೆ ಯಾವಾಗೆಂದರೆ ಆವಾಗ ಹೋಗಲು ಸಾಧ್ಯವಿಲ್ಲ. ಹಿಮ ಪರ್ವತಗಳಿಂದ ಸುತ್ತುವರೆದಿರುವ ಈ ದೇಗುಲಕ್ಕೆ ಏಪ್ರಿಲ್‌ ಅಂತ್ಯದಿಂದ ನವೆಂಬರ್‌ ಆದಿಯವರಗೆ ತೆರಳಬಹುದು. ಚಳಿಗಾಲದ ಸಮಯದಲ್ಲಿ ಇಲ್ಲಿ ಸಾಕಷ್ಟು ಹಿಮ ಬೀಳುವುದರಿಂದ ರಸ್ತೆಗಳೆಲ್ಲವೂ ಹಿಮಾವೃತವಾಗಿ ಸಂಚಾರ ಅಸಾಧ್ಯವಾಗುತ್ತದೆ. ಆರು ತಿಂಗಳ ಕಾಲ ದೇಗುಲವನ್ನು ಮುಚ್ಚಿಡಲಾಗುತ್ತದೆ. ಆ ಅವಧಿಯಲ್ಲಿ ವಿಗ್ರಹವನ್ನು ಉಖಿಮಠಕ್ಕೆ ಸ್ಥಳಾಂತರಿಸಲಾಗುತ್ತದೆ ಮತ್ತು ನಂತರ ಏಪ್ರಿಲ್ ತಿಂಗಳಲ್ಲಿ ಅದನ್ನು ಕೇದಾರನಾಥದಲ್ಲಿ ಮರುಸ್ಥಾಪಿಸಲಾಗುತ್ತದೆ.

Exit mobile version