Site icon Vistara News

Krishna Janmastami 2024: ಇಂದು ಕೃಷ್ಣ ಜನ್ಮಾಷ್ಟಮಿ; ಹಬ್ಬದ ಹಿನ್ನೆಲೆ ಏನು? ದೇಶದ ವಿವಿಧೆಡೆ ಹೇಗೆ ಆಚರಿಸುತ್ತಾರೆ?

Krishna janmastami

ದೇಶಾದ್ಯಂತ ಆಚರಿಸಲ್ಪಡುವ ಪ್ರಮುಖ ಹಬ್ಬ ಕೃಷ್ಣ (god krishna) ಜನ್ಮಾಷ್ಟಮಿಯನ್ನು (Krishna janmastami 2024) ಗೋಕುಲಾಷ್ಟಮಿ (Gokulastami) ಎಂದೂ ಕರೆಯಲಾಗುತ್ತದೆ. ಚಾಂದ್ರಮಾನ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ (shravana masa) ಶುಕ್ಲ ಪಕ್ಷದಂದು ಮತ್ತು ಸೌರಮಾನ ಕ್ಯಾಲೆಂಡರ್ ಪ್ರಕಾರ ಸಿಂಹ ಮಾಸದ ರೋಹಿಣಿ ನಕ್ಷತ್ರದಂದು ಈ ದಿನವನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಈ ಹಬ್ಬದ ಹಿನ್ನೆಲೆ ಏನು?

ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಮಥುರೆಯಲ್ಲಿ ವಾಸುದೇವ ಮತ್ತು ದೇವಕಿಯ ಮಗನಾಗಿ ವಿಷ್ಣುವಿನ ಎಂಟನೇ ಅವತಾರವೆಂದೇ ನಂಬಿರುವ ಕೃಷ್ಣನ ಜನನವಾಗುತ್ತದೆ.


ಪುರಾಣಗಳಲ್ಲಿ ಉಲ್ಲೇಖಿಸಿರುವಂತೆ ಅಷ್ಟಮಿಯಂದು ಮಧ್ಯರಾತ್ರಿ ಕಂಸನ ಕಾರಾಗೃಹದಲ್ಲಿ ಕೃಷ್ಣನ ಜನನವಾಗಿತ್ತು. ಈ ಸಂದರ್ಭದಲ್ಲಿ ಕಂಸ ಸೇರಿದಂತೆ ಜೈಲನ್ನು ಕಾಯುತ್ತಿದ್ದ ಎಲ್ಲರೂ ನಿದ್ದೆಗೆ ಜಾರಿದ್ದರು. ಕೃಷ್ಣ ಹುಟ್ಟಿದೊಡನೆ ತಂದೆ ವಸುದೇವ ಮಗುವನ್ನು ಬುಟ್ಟಿಯಲ್ಲಿ ಹಾಕಿ ಎತ್ತಿಕೊಂಡು ಯಾರಿಗೂ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯುತ್ತಾನೆ. ಅಲ್ಲಿ ನಂದರಾಜನ ಮನೆಯಲ್ಲಿ ಕೃಷ್ಣನನ್ನು ಬಿಟ್ಟು ಬರುತ್ತಾನೆ. ಈ ಕಾರ್ಯಕ್ಕೆ ಪ್ರಕೃತಿ ಅವನಿಗೆ ಸಂಪೂರ್ಣ ನೆರವಾಗುತ್ತದೆ. ಹೀಗೆ ದೇವಕಿ ಜನ್ಮ ನೀಡಿದ ಮಗುವಿಗೆ ನಂದರಾಜನ ಪತ್ನಿ ಯಶೋಧೆಯು ತಾಯಿಯಾಗುತ್ತಾಳೆ. ಕೃಷ್ಣನ ತುಂಟಾಟ, ಬಾಲಲೀಲೆಗಳು ಎಷ್ಟು ಪ್ರಸಿದ್ಧವೋ ಅಷ್ಟೇ ಅವನು ಮಾಡಿರುವ ಪವಾಡ ಕಾರ್ಯಗಳು ಕೂಡ ಜಗತ್ಪ್ರಸಿದ್ಧವಾಗಿವೆ. ಅನೇಕ ರಾಕ್ಷಸರನ್ನು ಕೊಂದಿರುವ ಕೃಷ್ಣನೇ ಮುಂದೆ ಪಾಂಡವರ ನೇತೃತ್ವದ ಧರ್ಮ ಯುದ್ಧಕ್ಕೆ ಸಾರಥಿಯಾಗುತ್ತಾನೆ. ಅಧರ್ಮವೇ ತುಂಬಿದ್ದ ಕೌರವರು ಮತ್ತು ಅವರಿಗೆ ಬೆಂಬಲವಾಗಿ ನಿಂತವರ ವಿನಾಶದಲ್ಲಿ ಪ್ರಮುಖ ಪಾತ್ರಧಾರಿಯಾಗುತ್ತಾನೆ.

ಸಂಪ್ರದಾಯ

ಕೃಷ್ಣ ಜನ್ಮಾಷ್ಟಮಿಯನ್ನು ಬಹುತೇಕ ಹಿಂದೂಗಳು ಮನೆಮನೆಯಲ್ಲೂ ಆಚರಿಸುತ್ತಾರೆ. ಹೆಚ್ಚಿನವರು ತಮ್ಮ ಮಕ್ಕಳಿಗೆ ಕೃಷ್ಣನ ವೇಷ ಭೂಷಣಗಳನ್ನು ತೊಡಿಸಿ ಸಂಭ್ರಮಿಸುತ್ತಾರೆ. ಇದಕ್ಕೆ ಪೂರಕವಾಗಿ ದೇವಾಲಯಗಳು, ವಿವಿಧ ಸಂಘ ಸಂಸ್ಥೆಗಳು ಕೃಷ್ಣ ವೇಷ ಸ್ಪರ್ಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅನೇಕ ಕೃಷ್ಣ ದೇವಾಲಯಗಳು ವಧುವಣಗಿತ್ತಿಯಂತೆ ಸಿಂಗಾರಗೊಂಡು ಕೃಷ್ಣನ ಲೀಲೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶಿಸಿ ಕೃಷ್ಣನ ಸಂದೇಶಗಳನ್ನು ಸಾರುತ್ತವೆ.

ಕೃಷ್ಣಜನ್ಮಾಷ್ಟಮಿಯ ದಿನದಂದು ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ಅಲಂಕರಿಸಿ ಕೃಷ್ಣನಿಗೆ ಪ್ರಿಯವಾದ ವಿವಿಧ ಬಗೆಬಗೆಯ ತಿಂಡಿಗಳನ್ನು ಮಾಡಿ ಅರ್ಪಿಸಲಾಗುತ್ತದೆ. ಕೆಲವರು ಈ ದಿನ ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ಅನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.


ವಿವಿಧೆಡೆ ಆಚರಣೆ

ದೇಶ ವಿದೇಶಗಳಲ್ಲೂ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಭಾರತದ ಅತ್ಯಂತ ಜನಪ್ರಿಯ ಹಬ್ಬವೆಂದರೆ ಜನ್ಮಾಷ್ಟಮಿ. ಈ ದಿನ ಜನರು ರಾಸಲೀಲೆಯನ್ನು ಆಚರಿಸುವ ಪದ್ಧತಿ ಇದೆ. ಭಗವಾನ್ ಕೃಷ್ಣನ ಜನ್ಮಸ್ಥಳವಾದ ಮಥುರಾ ಮತ್ತು ವೃಂದಾವನದಲ್ಲಿ ಈ ಸಂದರ್ಭದಲ್ಲಿ ಭವ್ಯವಾದ ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೃಷ್ಣನ ಜೀವನದ ಘಟನೆಗಳನ್ನು ಪ್ರದರ್ಶಿಸಿ ಅದ್ಧೂರಿಯಿಂದ ಆಚರಿಸಲಾಗುತ್ತದೆ.

ಜಮ್ಮುವಿನಲ್ಲಿ ಜನ್ಮಾಷ್ಟಮಿಯಂದು ಗಾಳಿಪಟ ಹರಿಸಲಾಗುತ್ತದೆ. ಮಣಿಪುರದ ನಿವಾಸಿಗಳು ರಾಧಾ- ಕೃಷ್ಣನ ನೃತ್ಯ ನಾಟಕಗಳನ್ನು ಪ್ರಸ್ತುತಪಡಿಸುತ್ತಾರೆ. ಪಾಲಕರು ತಮ್ಮ ಮಕ್ಕಳನ್ನು ಕೃಷ್ಣ, ಗೋಪಿಕೆಯರಂತೆ ಅಲಂಕರಿಸುತ್ತಾ ಭಾಗವತ ಗೀತೆ ಮತ್ತು ಭಾಗವತ ಪುರಾಣದ ಹತ್ತನೇ ಅಧ್ಯಾಯವನ್ನು ಓದುತ್ತಾರೆ.


ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಜನರು ಮಧ್ಯರಾತ್ರಿಯವರೆಗೆ ಉಪವಾಸ ಮತ್ತು ಪೂಜೆ ಮಾಡುತ್ತಾರೆ. ಅಷ್ಟಮಿಯ ಮರುದಿನ ‘ನಂದ ಉತ್ಸವ’ ವನ್ನು ಆಚರಿಸಿ ಕೃಷ್ಣನ ಸಾಕುತಂದೆಗಳಾದ ನಂದ ಮತ್ತು ಯಶೋದಾ ಅವರನ್ನು ಗೌರವಿಸಲಾಗುತ್ತದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಮಡಿಕೆ ಒಡೆಯುವ ಆಚರಣೆಗಳು ಅತ್ಯಂತ ಅದ್ಧೂರಿಯ ನಡೆಸಲಾಗುತ್ತದೆ.

ದಕ್ಷಿಣ ಭಾರತದಲ್ಲೂ ಗೋಕುಲ ಅಷ್ಟಮಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಕೃಷ್ಣನ ವಿವಿಧ ಲೀಲೆಗಳನ್ನು ಪ್ರದರ್ಶಿಸುವುದು ಈ ದಿನದ ವಿಶೇಷತೆಯಾಗಿದೆ.\


ದೇವಾಲಯಗಳಲ್ಲಿ ಸಂಭ್ರಮ

ದಕ್ಷಿಣ ಭಾರತದಲ್ಲಿರುವ ಕೃಷ್ಣನ ಜನಪ್ರಿಯ ದೇವಾಲಯಗಳೆಂದರೆ ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿರುವ ರಾಜಗೋಪಾಲಸ್ವಾಮಿ ದೇವಾಲಯ, ಕಾಂಚೀಪುರಂನ ಪಾಂಡವಧೂತರ್ ದೇವಾಲಯ, ಉಡುಪಿಯ ಶ್ರೀ ಕೃಷ್ಣ ದೇವಾಲಯ ಮತ್ತು ಗುರುವಾಯೂರಿನಲ್ಲಿರುವ ಕೃಷ್ಣ ದೇವಾಲಯ. ಈ ದೇವಾಲಯಗಳಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದಕ್ಕಾಗಿ ದೇವಾಲಯವನ್ನು ಮೊದಲೇ ವಿಶೇಷವಾಗಿ ಅಲಂಕರಿಸಲಾಗುತ್ತದೆ.

ಇದನ್ನೂ ಓದಿ: Krishna janmastami: ಕೃಷ್ಣ ಜನ್ಮಾಷ್ಟಮಿಯ ಫೋಟೋಶೂಟ್‌‌ಗೆ ಇಲ್ಲಿದೆ 4 ಐಡಿಯಾ


ಇನ್ನು ಕೃಷ್ಣನ ನಗರಿ ಎಂದೇ ಖ್ಯಾತಿ ಪಡೆದಿರುವ ಉಡುಪಿಯಲ್ಲಿ ಈಗಾಗಲೇ ಅಷ್ಟಮಿಯ ವೈಭವ ಪ್ರಾರಂಭವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಉಡುಪಿ ಕೃಷ್ಣನ ಆಲಯದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಹುಲಿ ವೇಷ, ಕೃಷ್ಣ ವೇಷ ಸ್ಪರ್ಧೆಯೊಂದಿಗೆ ವಿವಿಧ ಕಾರ್ಯಕ್ರಮಗಳು ರಥಬೀದಿಯಲ್ಲಿ ಪ್ರದರ್ಶನಗೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ದೂರದೂರಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಉಡುಪಿಗೆ ಆಗಮಿಸುತ್ತಿದ್ದು, ರಾಜಾಂಗಣದಲ್ಲಿ ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.


ಅಷ್ಟಮಿ ಪ್ರಸಾದವಾಗಿ ಹಂಚುವ ಕಾರ್ಯಕ್ಕೆ ಲಕ್ಷಾಂತರ ಉಂಡೆ, ಚಕ್ಕುಲಿಗಳ ತಯಾರಿಯೂ ನಡೆಯುತ್ತಿದೆ. ಅಷ್ಟಮಿಯಂದು ನಡುರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಅರಳು, ನೆಲಗಡಲೆ, ಗುಂಡಿಟ್ಟು, ಕಡಲೆ, ಎಳ್ಳು, ಗೋಧಿ, ಗೇರು, ಶುಂಠಿ, ಹೆಸರು ಹಿಟ್ಟಿನಿಂದ ಮಾಡಿದ ಉಂಡೆ, ಚಕ್ಕುಲಿಯನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ಮರುದಿನ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

Exit mobile version