Site icon Vistara News

Maha Shivaratri 2023: ಶಿವರಾತ್ರಿ ಜಾಗರಣೆ ನಿಮಿತ್ತ ಗಾಂವಗೇರಿ ಗ್ರಾಮದಲ್ಲಿ ನಡೆದ ರಾಮನಾಥ ದೇವರ ವಿಶೇಷ ಜಾತ್ರೆ

ramnath devara jatra karwar Gaongeri village

#image_title

ಸಂದೀಪ ಸಾಗರ, ವಿಸ್ತಾರ ನ್ಯೂಸ್, ಕಾರವಾರ
ಕಾರವಾರ: ಜಾತ್ರೆ ಅಂದ್ರೆ ಅಲ್ಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು, ವಿವಿಧ ಸೇವೆಗಳ ಆಚರಣೆಗಳು ಇರುವುದು ಸಾಮಾನ್ಯ. ಆದರೆ ಇಲ್ಲೊಂದು ಕಡಲ ತೀರದಲ್ಲಿ ಇವತ್ತು ನಡೆದ ಜಾತ್ರೆ ಬೇರೆಲ್ಲಾ ಜಾತ್ರೆಗಳಿಗಿಂತ ವಿಭಿನ್ನವಾಗಿತ್ತು. ಸಮುದ್ರ ತೀರಕ್ಕೆ (Sea shore) ದೇವರುಗಳನ್ನು ಪಲ್ಲಕ್ಕಿ ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿದ್ದು ಒಂದೆಡೆಯಾದರೆ ಇನ್ನೊಂದೆಡೆ ಜಾತ್ರೆಗೆ ಆಗಮಿಸಿದ ಭಕ್ತರು ದೇವರ ದರ್ಶನದ ಜೊತೆಗೆ ಸಮುದ್ರ ಸ್ನಾನ ಮಾಡುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಒಂದೆಡೆ ಕಡಲ ತೀರದಲ್ಲಿ ಮಾದೇವ್, ಮಾದೇವ್ ಘೋಷಣೆ ಕೂಗುತ್ತಾ ಪಲ್ಲಕ್ಕಿಗಳನ್ನು ಹೊತ್ತು ತರುತ್ತಿರುವ ಭಕ್ತರ ದಂಡು. ಇನ್ನೊಂದೆಡೆ ಕಡಲ ತೀರದಲ್ಲಿ ಮರಳಿನ ಶಿವಲಿಂಗ ಮಾಡಿ, ಪೂಜಾ ಕಾರ್ಯದಲ್ಲಿ ತೊಡಗಿರುವ ಜನರು. ಮತ್ತೊಂದೆಡೆ ಕಡಲಿಗೆ ಇಳಿದು ಸ್ನೇಹಿತರು, ಕುಟುಂಬದವರ ಜೊತೆ ನೀರಿನಲ್ಲಿ ಎಂಜಾಯ್ ಮಾಡುತ್ತಿರುವ ಭಕ್ತ ಸಮೂಹ. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯ ಕಡಲ ತೀರದಲ್ಲಿ. ಶಿವರಾತ್ರಿ ಜಾಗರಣೆ ನಿಮಿತ್ತ ಗಾಂವಗೇರಿ ಗ್ರಾಮದಲ್ಲಿ ನಡೆದ ವಿಶೇಷ ಜಾತ್ರೆ ಇದು.

ಇದನ್ನೂ ಓದಿ: Nannamma Super Star: ʻನಮ್ಮಮ್ಮ ಸೂಪರ್‌ ಸ್ಟಾರ್‌ʼ ವಿನ್ನರ್‌ ಚೈತ್ರಾ- ಅವಳಿ ಮಕ್ಕಳು: ಗ್ರಾಮೀಣ ಭಾಗದ ಪ್ರತಿಭೆಗೆ ಗೌರವ ಎಂದ ಪ್ರೇಕ್ಷಕರು!

ಪ್ರತಿ ವರ್ಷದಂತೆ ಈ ವರ್ಷ ಸಹ ಗಾಂವಗೇರಿಯಲ್ಲಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ಸೋಮವಾರ (ಫೆ.೨೦) ನಡೆಯಿತು. ಶಿವರಾತ್ರಿಯ ಮಾರನೇ ದಿನ ಅಥವಾ ಶಿವರಾತ್ರಿ ನಂತರ ಬರುವ ಅಮಾವಾಸ್ಯೆಯ ದಿನ ರಾಮನಾಥ ದೇವರ ಜಾತ್ರಾ ಮಹೋತ್ಸವ ನಡೆಯುತ್ತದೆ. ಈ ಜಾತ್ರೆಯಲ್ಲಿ ಈ ಭಾಗದ ಅಸ್ನೋಟಿ, ಮಾಜಾಳಿ, ಕೃಷ್ಣಾಪುರ, ಚಿತ್ತಾಕುಲ, ಮುಡಿಗೇರಿ, ಹೊಸಳ್ಳಿ ಗ್ರಾಮಗಳಿಂದ ಬೇರೆ ಬೇರೆ ದೇವರುಗಳನ್ನು ಪಲ್ಲಕ್ಕಿಯಲ್ಲಿ ಕಡಲ ತೀರಕ್ಕೆ ತರಲಾಗುತ್ತದೆ. ಬಳಿಕ ಪಲ್ಲಕ್ಕಿಯಲ್ಲಿನ ದೇವರನ್ನು ಸಮುದ್ರದಲ್ಲಿ ಸ್ನಾನ ಮಾಡಿಸುವುದು ಇಲ್ಲಿನ ವಿಶೇಷ. ಅದರಂತೆ ಈ ಬಾರಿ ಸಹ ಪಲ್ಲಕ್ಕಿಯಲ್ಲಿ ತಂದ ಏಳು ಗ್ರಾಮದ ದೇವರುಗಳಿಗೆ ಸಮುದ್ರದ ನೀರನ್ನು ಹಾಕಿ ಸ್ನಾನ ಮಾಡಿಸಿ ದರ್ಶನಕ್ಕೆ ಇರಿಸಲಾಯಿತು. ಜಾತ್ರೆಗೆ ಬಂದಂತಹ ಭಕ್ತರು ಸಮುದ್ರ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿನ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶಿವರಾತ್ರಿ ಆಚರಣೆಯನ್ನು ಮುಕ್ತಾಯಗೊಳಿಸಿದರು.

ಇದನ್ನೂ ಓದಿ: Fact Check: ಪ್ರಧಾನಿ ಮೋದಿ ಮುಸ್ಲಿಮರ ಟೋಪಿ ಧರಿಸಿದ್ದು ನಿಜವೇ? ಇಲ್ಲಿದೆ ನೋಡಿ ವೈರಲ್ ಫೋಟೋದ ಅಸಲಿಯತ್ತು

ಗಾಂವಗೇರಿಯಲ್ಲಿ ನಡೆಯುವ ಈ ರಾಮನಾಥ ದೇವರ ಜಾತ್ರಾ ಮಹೋತ್ಸವದಲ್ಲಿ ಗೋವಾ, ಮಹಾರಾಷ್ಟ್ರ, ಸೇರಿದಂತೆ ವಿವಿಧ ಭಾಗಗಳಿಂದ ಸಹ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಶಿವರಾತ್ರಿಯ ದಿನದಂದು ಉಪವಾಸ ಮಾಡಿ ನಂತರ ಸಮುದ್ರ ಸ್ನಾನ ಮಾಡುವ ಮೂಲಕ ಉಪವಾಸ ಬಿಡುವುದು ಸಹ ಈ ಜಾತ್ರೆಯ ವಿಶೇಷ. ಅಲ್ಲದೆ ಸಮುದ್ರ ಸ್ನಾನಗಳಿಂದ ಪಾಪಗಳು ತೊಳೆದು, ರೋಗ ರುಜಿನಗಳು ದೂರಾಗುತ್ತವೆ ಎನ್ನುವ ನಂಬಿಕೆ ಇದೆ. ಜೊತೆಗೆ ಮೃತರಾದ ಹಿರಿಯರಿಗೆ ಇದೇ ಸಂದರ್ಭದಲ್ಲಿ ಕಡಲತೀರದಲ್ಲಿ ಪಿಂಡ ಪ್ರಧಾನವನ್ನು ಮಾಡಲಾಗುತ್ತದೆ. ಹಾಗೂ ಸಮುದ್ರ ಸ್ನಾನ ಮಾಡಿ ವಾಪಸ್ ತೆರಳುವ ವೇಳೆ ರಸ್ತೆ ಬದಿಯಲ್ಲಿ ಹಾಕಲಾಗುವ ಬಟ್ಟೆಯ ಮೇಲೆ ಪಡಿ ಅಂದರೆ ಅಕ್ಕಿ ಹಾಕಲಾಗುತ್ತದೆ. ಇದರಿಂದ ಹಿರಿಯರಿಗೆ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇಲ್ಲಿನವರದ್ದು. ಒಟ್ಟಿನಲ್ಲಿ ಮಾಜಾಳಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿದ್ದು ಸಾಮೂಹಿಕ ಸಮುದ್ರ ಸ್ನಾನದ ಜೊತೆಗೆ ವಿವಿಧ ಆಚರಣೆಗಳೊಂದಿಗೆ ಇದು ವಿಭಿನ್ನ ಜಾತ್ರೆಯಾಗಿದೆ.

ಇದನ್ನೂ ಓದಿ: INDvsAUS : ಅಭ್ಯಾಸ ಪಂದ್ಯ ಅಗತ್ಯ ಇಲ್ಲ ಎಂದಿದ್ದ ಆಸೀಸ್​ ತಂಡಕ್ಕೆ ಹಿರಿಯ ಆಟಗಾರರ ತರಾಟೆ

Exit mobile version